ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಗಲ್ಲಿ ಗಲ್ಲಿಯಲ್ಲೂ ವ್ಯಾಪಕವಾಗಿ ಹರಡುತ್ತಿದ್ದು, ಮೈಸೂರಿನಲ್ಲಿ ಸರ್ಕಾರಿ ಕೃಷಿ ಇಲಾಖೆ ಸಹಾಯಕ ಎಂಜಿನಿಯರ್ ಹಾಗೂ ಅವರ ಮಗ ಕೊರೊನಾ ವೈರಸ್ ಗೆ ಸಾವನ್ನಪ್ಪಿದ್ದಾರೆ.
ಕೇವಲ ನಾಲ್ಕು ದಿನಗಳ ಅಂತರದಲ್ಲಿ ಮಗ ಹಾಗೂ ಅಪ್ಪ ಸೋಂಕಿಗೆ ಬಲಿಯಾಗಿದ್ದಾರೆ. ಜು.15ರಂದು 14 ವರ್ಷದ ಪುತ್ರ ಸೋಂಕಿಗೆ ಮೃತಪಟ್ಟರೆ, ಇದೀಗ 47 ವರ್ಷದ ಎಂಜಿನಿಯರ್ ಸಾವನ್ನಪ್ಪಿದ್ದಾರೆ. ಕೃಷಿ ಸಹಾಯಕ ಎಂಜಿನಿಯರ್ ಇಡೀ ಕುಟುಂಬಕ್ಕೆ ಕೊರೊನಾ ಹರಡಿದ್ದು ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಂಜಿನಿಯರ್ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳ ಸಮೇತ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಎಂಜಿನಿಯರ್ ಅವರನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ನಿನ್ನೆ ಉಸಿರಾಟದ ತೊಂದರೆ ಜತೆ ಅನಾರೋಗ್ಯ ಕೂಡ ತೀವ್ರಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇಡೀ ಕುಟುಂಬ ಸದಸ್ಯರು ಕೊವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮಗ ಹಾಗೂ ತಂದೆಯ ಅಂತಿಮ ದರ್ಶನ ಪಡೆಯಲಾಗದೇ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಲಾರದೇ ಆಸ್ಪತ್ರೆಯಲ್ಲೇ ಕಣ್ಣೀರಿಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ