Latest

ಕೊರೊನಾ ಸೋಂಕಿರುವುದನ್ನು ಮುಚ್ಚಿಟ್ಟು ಮದುವೆಯಾದ ಯುವಕ; ಮುಂದೆ ಆಗಿದ್ದೇನು?

ಪ್ರಗತಿವಾಹಿನಿ ಸುದ್ದಿ; ಕಾರವಾರ: ತನಗೆ ಕೊರೊನಾ ಸೋಂಕು ಹರಡಿರುವುದನ್ನು ಮುಚ್ಚಿಟ್ಟಿದ್ದ ಮದುಮಗನೊಬ್ಬ ಮದುವೆಯಾಗಿ ಐದೇ ದಿನಕ್ಕೇ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಮದುವೆ ಸಂಭ್ರಮದಲ್ಲಿದ್ದ ಮದುಮಗ ತನಗೆ ಕೊರೊನಾ ಬಂದ ವಿಷಯ ಮುಚ್ಚಿಟ್ಟು ವಿವಾಹವಾಗಿದ್ದಾನೆ. ಇದೀಗ ನವ ವಿವಾಹಿತೆ, ಮನೆಯವರು ಹಾಗೂ ವಿವಾಹಕ್ಕೆ ಆಗಮಿಸಿದ್ದ ಸಂಬಂಧಿಕರೆಲ್ಲರೂ ಆತಂಕಕ್ಕೀಡಾಗಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಭಟ್ಕಳದ 26 ವರ್ಷದ ಯುವಕ ತನ್ನ ಮದುವೆ ಸಂಭ್ರಮದಲ್ಲಿದ್ದ. ಈತನಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಇದರಿಂದ ತನ್ನ ಮದುವೆಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಎಲ್ಲವನ್ನೂ ಮುಚ್ಚಿಟ್ಟು ಜೂನ್ 25 ರಂದು ಭಟ್ಕಳದಲ್ಲಿ ಮದುವೆಯಾಗಿ ಮಂಗಳೂರಿನಲ್ಲಿರುವ ತನ್ನ ಮನೆಗೆ ತೆರಳಿದ್ದ.

ಸೋಂಕಿನ ತೀವ್ರತೆ ಹೆಚ್ಚಾಗಿ ಮದುವೆಯಾದ ಐದು ದಿನದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೇ ಮದುವೆಗೆ ಆಗಮಿಸಿದ್ದ ಹಲವರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

Home add -Advt

ಕುಟುಂಬದ 20 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಒಂದು ವರ್ಷದ ಮಗುವು ಸೇರಿ 18 ವರ್ಷದ ಒಳಗಿನ 8 ಜನ ಅಪ್ರಾಪ್ತರು ಸೇರಿದ್ದಾರೆ. ಇದಲ್ಲದೇ ಈತನ ಮದುವೆಯಲ್ಲಿ ಭಾಗಿಯಾದ 70 ಜನ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದ್ದು ಇವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

ಕುಟುಂಬವು ಮದುವೆ ಕಾರಣದಿಂದ ಸೋಂಕಿರುವುದನ್ನು ಮುಚ್ಚಿಟ್ಟು ಹಲವರಿಗೆ ಸೋಂಕು ತಗುಲುವಂತೆ ಮಾಡಿದೆ. ಇದಲ್ಲದೇ ಇವರ ಕುಟುಂಬದ ಇಬ್ಬರು ವೃದ್ಧರ ಸ್ಥಿತಿಯೂ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರು ಯುವಕನ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

Related Articles

Back to top button