Latest

ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರಯೋಗಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ ಡಬ್ಲ್ಯೂಎಚ್ಒ

ಪ್ರಗತಿವಾಹಿನಿ ಸುದ್ದಿ; ಜಿನಿವಾ: ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ನೀಡಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಮೇಲಿನ ಪ್ರಯೋಗಾರ್ಥ ಪರೀಕ್ಷೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಸೇವನೆಯಿಂದ ಸಾವು ಸಂಭವಿಸುವ ಮತ್ತು ಹೃದಯ ತೊಂದರೆ ಉದ್ಭವಿಸುವ ಅಪಾಯ ಹೆಚ್ಚಿದೆ ಎಂದು ಕೆಲ ಸಂಶೋಧನೆಗಳು ಹೇಳುತ್ತಿರುವ ಬೆನ್ನಲ್ಲೇ ಡಬ್ಲ್ಯೂಎಚ್​ಒ ಈ ನಿರ್ಧಾರಕ್ಕೆ ಬಂದಿದೆ. ವೈದ್ಯಕೀಯ ಅಧ್ಯಯನಕ್ಕಾಗಿರುವ ಜಗತ್ತಿನ ಶ್ರೇಷ್ಠ ನಿಯತಕಾಲಿಕೆ ಲ್ಯಾಸೆಟ್ ‘ಕೊರೊನಾ ಪೀಡಿತ ರೋಗಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಿದರೆ ಸಾಯುವ ಸಾಧ್ಯತೆ ಹೆಚ್ಚಿದೆ’ ಎಂದು ಅಧ್ಯಯನ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ರೋಗಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಬಳಸುವ ಸಂಬಂಧ ಆರಂಭಿಸಿದ್ದ ಪ್ರಯೋಗಾರ್ಥ ಪರೀಕ್ಷೆಯನ್ನೇ ನಿಲ್ಲಿಸಿದೆ.

ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಭಾರತದ ವೈದ್ಯಕೀಯ ಪ್ರಾಧಿಕಾರ ಐಸಿಎಂಆರ್ ಈ ಮಾತ್ರೆಯನ್ನು ಶಿಫಾರಸು ಮಾಡಿತ್ತು. ಅಮೆರಿಕ ಸೇರಿದಂತೆ ಸ್ಪೇನ್, ಜರ್ಮನಿ, ಬಹರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್, ಮಾರಿಷಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ ಮಾತ್ರೆಯನ್ನು ಭಾರತ ರಫ್ತು ಮಾಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೋನಾ ಬರದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಈ ಮಾತ್ರೆಯನ್ನು ನಿತ್ಯ ಸೇವಿಸುತ್ತಿದ್ದರು.

ಕೋವಿಡ್-19 ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್ಡೆಸೆವಿರ್ ಸೇರಿದಂತೆ ವಿಶ್ವಾದ್ಯಂತ ಹಲವು ವಿಧದ ಔಷಧಗಳ ಪ್ರಸ್ತಾವ ಇದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಎಲ್ಲಾ ಔಷಧಗಳನ್ನ ಪರಿಶೀಲಿಸಲು ಪ್ರಯೋಗ ನಡೆಸುತ್ತಿದೆ. ಮನುಷ್ಯರ ಮೇಲೆ ಪ್ರಯೋಗ ಮಾಡಿ ಇದರ ಪರಿಣಾಮ ಮತ್ತು ಗುಣಮಟ್ಟವನ್ನು ಪರಿಶೀಲಿಸುತ್ತದೆ. ಈ ಪ್ರಯೋಗವನ್ನು ಸಾಲಿಡಾರಿಟಿ ಟ್ರಯಲ್ ಎನ್ನುತ್ತಾರೆ.

ಡಬ್ಲ್ಯೂಎಚ್​ಒನ ಅಧಿಕಾರಿಗಳು ನಡೆಸಿದ ಸಭೆಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ತೀವ್ರ ಅಡ್ಡಪರಿಣಾಮ ಮತ್ತು ಕೊವಿಡ್ ಚಿಕಿತ್ಸೆಗೆ ಅದರ ನಿರುಪಯುಕ್ತತೆ ಬಗ್ಗೆ ಕೆಲ ಅಧ್ಯಯನ ವರದಿಗಳು ಬಂದ ಹಿನ್ನೆಲೆಯಲ್ಲಿ ಅದರ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದ್ದಾರೆ. ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರಯೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕಲೆಹಾಕಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಆದರೆ, ಡಬ್ಲ್ಯೂಎಚ್​ಒದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಪ್ರಯೋಗದಲ್ಲಿ ಯಾವುದೇ ಸುರಕ್ಷಾ ಸಮಸ್ಯೆಗಳಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆಯಾಗಿ ಆ ಪ್ರಯೋಗ ನಿಲ್ಲಿಸಲಾಗಿದೆ. ಎಂದು ಡಬ್ಲ್ಯೂಎಚ್​ಒ ಎಮರ್ಜೆನ್ಸೀಸ್ ವಿಭಾಗದ ಮುಖ್ಯಸ್ಥ ಡಾ. ಮೈಕೇಲ್ ರಯಾನ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button