
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 22 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ. ಪರಿಣಾಮ ದೇಶದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ ಗಡಿ ದಾಟಿದೆ.
ಭಾರತದಲ್ಲಿ ಒಂದೇ ದಿನ 22,771 ಪ್ರಕರಣಗಳು ಕಂಡುಬಂದಿದ್ದು ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 6,48,315ಕ್ಕೆ ಏರಿಕೆಯಾಗಿದೆ. ಇದು ಒಂದೇ ದಿನ ದೇಶದಲ್ಲಿ ಕಂಡುಬಂದ ಅತಿ ಹೆಚ್ಚು ಪ್ರಕರಣವಾಗಿದೆ.
ಶುಕ್ರವಾರ 442 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 18,655ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 3,94,227 ಜನ ಮಾತ್ರ. ದೇಶದಲ್ಲಿ ಇನ್ನೂ 2,35,433 ಜನರಲ್ಲಿ ಕೊರೊನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.
ಭಾರತದಲ್ಲಿ ಜೂನ್ 26ರಂದು 18 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 27ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಜುಲೈ 2ರಂದು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈಗ ಒಂದೇ ದಿನದ ಅಂತರದಲ್ಲಿ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ದೇಶವನ್ನೇ ಬೆಚ್ಚಿ ಬೀಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ