ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂದಿದ್ದರೂ ಕೂಡ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ.
ಒಂದೇ ದಿನದಲ್ಲಿ 4,970 ಹೊಸ ಪ್ರಕರಣಗಳು ಪತ್ತೆಯಾಗಿದೆ. ಸಮಾಧಾನದ ಸಂಗತಿಯೆಂದರೆ ಭಾನುವಾರಕ್ಕಿಂತ ಸೋಮವಾರ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆ ಆಗಿದೆ. ಭಾನುವಾರ 5,242 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೆ ಭಾನುವಾರ ಭಾರತದಲ್ಲಿ ದಿನವೊಂದರಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿತ್ತು.
ಕಳೆದ 24 ಗಂಟೆಗಳಲ್ಲಿ 4,970 ಹೊಸ ಪ್ರಕರಣಗಳು ವರದಿ ಆಗಿರುವುದರಿಂದ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಈಗ 1,01,139ಕ್ಕೆ ಏರಿಕೆಯಾಗಿದೆ. ಜತೆಗೆ ಒಂದೇ ದಿನದಲ್ಲಿ 134 ಮಂದಿ ಕೊರೋನಾಗೆ ಬಲಿಯಾದ ಪರಿಣಾಮ ಸತ್ತವರ ಸಂಖ್ಯೆ 3,163ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ.
ಕೊರೋನಾ ಸೋಂಕಿನಲ್ಲಿ ಭಾರತ ಚೀನಾವನ್ನೂ ಮೀರಿಸಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 6 ರಿಂದಲೇ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ಮೂರು ಸಾವಿರಕ್ಕಿಂತಲೂ ಹೆಚ್ಚಾಗಿದೆ.
ದೇಶದಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿದ ಮೇಲೆ ಕೊರೋನಾ ಸೋಂಕು ಹರಡುವಿಕೆ ದುಪ್ಪಟ್ಟಾಗಿದೆ. ಪ್ರಸ್ತುತ ಪ್ರಯಾಣಿಕರ ರೈಲು ಸಂಚಾರವನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತದೆ. ಅಲ್ಲದೇ ಬಸ್ ಸಂಚಾರ ಕೂಡ ಆರಂಭವಾಗಿದೆ. ಇದರಿಂದ ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೇ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ