ಹಬ್ಬದ ಸಂದರ್ಭ ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ನೀಡಬೇಕು ಎಂದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಎಲ್ಲಾ ಜಿಲ್ಲೆಗಳಲ್ಲೂ ಲಾಕ್‌ಡೌನ್ ಘೋಷಿಸಲಾಗಿದೆ. ಸೆಕ್ಷನ್ 144 ಅನ್ನು ಜಾರಿ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ನಡೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ ಪೊಲೀಸರು ಬೀದಿಗೆ ಇಳಿದವರ ಮೇಲೆಲ್ಲಾ ವಿನಾ ಕಾರಣ ಲಾಠಿ ಬೀಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಎಲ್ಲಾ ಕ್ರಮಗಳಿಗೆ ನಮ್ಮ ಬೆಂಬಲ ಇದೆ. ಆದರೆ, ಇದು ಯುಗಾದಿ ಸಮಯ ಹೀಗಾಗಿ ಜನ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗಾಗಿ ಬೀದಿಗೆ ಇಳಿಯುವುದು ಅನಿವಾರ್ಯ. ಇದಕ್ಕೆ ಅವಕಾಶ ಮಾಡಿಕೊಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ ಮಾತ್ರಕ್ಕೆ ರಸ್ತೆಗೆ ಇಳಿದ ಎಲ್ಲರ ಮೇಲೆ ಲಾಠಿ ಬೀಸಿ ದರ್ಪ ಮೆರೆಯುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.

ಇನ್ನು ವಿಧಾನಮಂಡಲ ಅಧಿವೇಶನ ಮುಂದೂಡದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನೇ ಮುಂದೂಡಲಾಗಿದೆ. ಇದೇ ರೀತಿ ರಾಜ್ಯ ವಿಧಾನಮಂಡಲ ಅಧಿವೇಶನವನ್ನೂ ಮುಂದೂಡಬೇಕು ಎಂಬುದು ನಮ್ಮ ಮನವಿಯಾಗಿತ್ತು. ಬಜೆಟ್ ಮೇಲೆ ಚರ್ಚೆ ಆಗದಿದ್ದರೂ ಪರವಾಗಿಲ್ಲ. ವಿಪಕ್ಷದವರು ಎಲ್ಲದಕ್ಕೂ ಸಹಕಾರ ಕೊಡುತ್ತೇವೆ ಎಂದು ಹೇಳಿದರೂ ರಾಜ್ಯ ಸರ್ಕಾರ ಇದೇ ತಿಂಗಳ 28ರ ವರೆಗೆ ಅಧಿವೇಶನ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Home add -Advt

Related Articles

Back to top button