
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಿನಸಿ ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ನಡೆದೇ ಹೋಗಬೇಕು, ಯಾವುದೇ ವಾಹನಗಳ ಮೂಲಕ ಖರೀದಿಗೆ ಬರುವಂತಿಲ್ಲ ಎಂದು ಗೃಹ ಸಚಿವಾ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಆದಾಗ್ಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಲಾಕ್ ಡೌನ್ ಕ್ರಮವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ವಿಧಾನಸೌಧದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು.
ಜನರು ದಿನಸಿ ವಸ್ತುಗಳನ್ನ ತರಲು ನಡೆದುಕೊಂಡೇ ಓಡಾಡಬೇಕು. ಯಾವುದೇ ವಾಹನ ಬಳಸುವಂತಿಲ್ಲ. ಒಂದು ವೇಳೆ ವಾಹನ ಬಳಸಿದರೆ ವಾಹನ ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದರು.
ವಲಸೆ ಕಾರ್ಮಿಕರಿಗೆ ಹೊರ ಹೋಗದಂತೆ ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ಅವರಿಗೆ ಊಟದ ವ್ಯವಸ್ಥೆ, ದಿನಸಿ ವ್ಯವಸ್ಥೆ ಮಾಡಲಾಗುತ್ತೆ. ಇದರ ನಿರ್ವಹಣೆ ಬಿಬಿಎಂಪಿಗೆ ವಹಿಸಲಾಗಿದೆ. ಯಾರು ಕೂಡ ಬೇರೆ ಪ್ರದೇಶಕ್ಕೆ ಹೋಗದಂತೆ ತಡೆಯಬೇಕು. ಆಯಾ ಜಿಲ್ಲೆಯಲ್ಲಿ ಡಿಸಿಗಳು ಇದರ ನಿರ್ವಹಣೆ ಮಾಡಬೇಕು. ಎಲ್ಲರಿಗೂ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸದ್ಯಕ್ಕೆ ಬಾಡಿಗೆದಾರರ ಬಳಿ ಬಾಡಿಗೆ ಕೇಳುವಂತಿಲ್ಲ. ವೈದ್ಯರು, ನರ್ಸ್ ಗಳಿಗೂ ತೊಂದರೆ ಕೊಡುವಂತಿಲ್ಲ. ಖಾಸಗಿಯವರೂ ಕೂಡ ಬಾಡಿಗೆ ಕೇಳಬಾರದು ಎಂಬ ವಿನಂತಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ