ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮೂರನೇ ಹಂತದ ಲಾಕ್ ಡೌನ್ ಅವಧಿ ನಾಳೆ ಮುಗಿಯಲಿದ್ದು, ಆದಾಗ್ಯೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ಕೆಲ ಸಡಿಲಿಕೆಯೊಂದಿಗೆ ನಾಳೆಯಿಂದ ಇನ್ನಷ್ಟು ದಿನಗಳ ಕಾಲ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆಯಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ವಿಸ್ತರಣೆ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆದ ಪ್ರಧಾನಿ ಮೋದಿ, ಕೇಂದ್ರ ಆರೋಗ್ಯ ಇಲಾಖೆಯ ಟಾಸ್ಕ್ ಫೋರ್ಸ್ ಮತ್ತು ನೀತಿ ಆಯೋಗದೊಂದಿಗೆ ಚರ್ಚಿಸಿದ್ದು, ಮೇ 17ರಿಂದ ನಾಲ್ಕನೇ ಅವಧಿಗೆ ಮೇ 31ರವರೆಗೂ ಲಾಕ್ಡೌನ್ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಲಾಕ್ಡೌನ್ ನಿಯಮಗಳನ್ನು ಕಂಟೈನ್ಮೆಂಟ್ ಜೋನ್ಗಳಿಗೆ ಮಾತ್ರ ಸೀಮಿತಗೊಳಿಸಿ ಉಳಿದೆಡೆ ವಿನಾಯ್ತಿ ನೀಡುವ ಸಾಧ್ಯತೆ ಇದೆ. ಬಹುತೇಕ ರಾಜ್ಯಗಳು ವಿನಾಯ್ತಿ ಲಾಕ್ ಡೌನ್ ಮುಂದುವರಿಸಲು ಒಪ್ಪಿಗೆ ಸೂಚಿಸಿವೆ.
ಕಾರ್ಖಾನೆ, ಕಚೇರಿ ತೆರೆಯಲು ಅನುಮತಿ ಸಗುವ ಸಾಧ್ಯತೆಯಿದೆ. ಮದ್ಯ ಮಾರಾಟವೂ ಮುಕ್ತ ಅವಕಾಶ, ಸೆಲ್ಯೂನ್, ಜಿಮ್, ಪಾರ್ಲರ್ ಓಪನ್ ಮಾಡಲು, ಅಂತರ ರಾಜ್ಯ ಸರಕು ಸಾಗಣೆಗೆ ಒಪ್ಪಿಗೆ ಸಿಗಲಿದೆ. ಧಾರ್ಮಿಕ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಯಾವುದೇ ಅನುಮತಿ ಇಲ್ಲ. ಇನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಅನುಮಾನವಾಗಿದೆ.
ರೈಲು, ವಿಮಾನಯಾನ ಹೊಸ ಮಾರ್ಗಸೂಚಿಯನ್ವಯ ಹಂತ ಹಂತವಾಗಿ ಆರಂಭವಾಗುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ