Latest

ಅವಮಾನ ತಾಳಲಾರದೇ ಸೋಂಕಿತೆ ಪತಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತರನ್ನು ಜನರು ಅವಮಾನಿಸುತ್ತಿದ್ದು, ಇದರಿಂದ ನೊಂದ ಸೋಂಕಿತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಸಮಾಜ ಎಷ್ಟೇ ಬದಲಾಗಿದ್ದರೂ ವಿದ್ಯಾವಂತರು ಹೆಚ್ಚಿದ್ದರೂ ಕೂಡ ಜನರ ಮನ:ಸ್ಥಿತಿ ಮಾತ್ರ ಇನ್ನೂ ಬದಲಾಗುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತ್ನಿ ಮತ್ತು ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೀಲಾಗಿ ನೋಡುತ್ತಿದ್ದುದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಸರುಘಟ್ಟದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ನಿವಾಸಿ ನಾಗರಾಜು (56) ಮೃತ ವ್ಯಕ್ತಿ. ಹೆಸರುಘಟ್ಟ ಕೆರೆಯ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ನಾಗರಾಜು ಮಗನಿಗೆ ಮೊದಲು ಪಾಸಿಟಿವ್ ಬಂದಿತ್ತು. ನಂತರ ಪತ್ನಿಗೂ ಸೋಂಕಿನ ಲಕ್ಷಣ ಕಂಡುಬಂದಿದ್ದರಿಂದ ಕೊರೊನಾ ಟೆಸ್ಟ್ ಮಾಡಿಸಿದ್ದು, ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಪೊಲೀಸರು ಅವರು ವಾಸವಿದ್ದ ಏರಿಯಾವನ್ನು ಸೀಲ್‍ಡೌನ್ ಮಾಡಿ ಔಷಧ ಸಿಂಪಡಣೆ ಮಾಡಿದ್ದಾರೆ.

ಸೀಲ್‍ಡೌನ್ ಆಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಮೃತ ನಾಗರಾಜ್ ಕುಟುಂಬಸ್ಥರನ್ನು ಅವಮಾನಿಸಿದ್ದರು. ನಿಮ್ಮಿಂದ ಏರಿಯಾದ ಜನರೇ ಸಮಸ್ಯೆ ಎದುರಿಸುವಂತಾಗಿದೆ ಎಂದು ಗಲಾಟೆ ಮಾಡಿದ್ದಾರೆ. ಇದರಿಂದ ಬೇಸತ್ತ ನಾಗರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button