ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಮರ್ಥನಂ ಅಂಧ ಮಕ್ಕಳ ಸಂಸ್ಥೆ ಮತ್ತು ಸಮೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥ ವೀರೇಶ ಕಿವಡಸಣ್ಣವರ್ ಅವರಿಗೆ ಬೆಳಗಾವಿ ಜಿಲ್ಲಾಡಳಿತ ಕರ್ನಾಟಕ ರಾಜ್ಯೋತ್ಸವ ಕೊರೋನಾ ವಾರಿಯರ್ಸ್ ಪ್ರಶಸ್ತಿಯನ್ನುನೀಡಿ ಗೌರವಿಸಿದೆ.
ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವೀರೇಶ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಮೂಲೆ ಮೂಲೆಗೆ ತೆರಳಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಜನರಿಗೆ ಕೊರೋನಾ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.
ಹಲವಾರು ಭಾಗಗಳಿಗೆ ತೆರಳಿ ಸಂಕಷ್ಟದಲ್ಲಿರುವವರಿಗೆ ಔಷಧಗಳು, ಆಹಾರ ಪ್ಯಾಕೆಟ್‌ಗಳು, ಅಡುಗೆ ವಸ್ತುಗಳು, ಮಾಸ್ಕ್ ಗಳು, ಸೆನಿಟೈಸರ್ ಗಳನ್ನು ಹಂಚಿದ್ದಾರೆ. ಕೋವಿಡ್ ವಾರಿಯರ್ ಗಳಾದ ವೈದ್ಯರು, ದಾದಿಯರು ಮತ್ತು ಪೊಲೀಸ್ ಸಿಬ್ಬಂದಿಗೆ ಅಗತ್ಯವಾದ ಸಾಮಗ್ರಿಗಳನ್ನು ಅತ್ಯಂತ ಅಗತ್ಯ ಸಂದರ್ಭದಲ್ಲಿ ವಿತರಿಸಿದ್ದಾರೆ. ಹಾಗೆಯೇ ಬೀದಿಗಳಲ್ಲಿರುವ ಹಸಿದವರಿಗೆ ಆಹಾರ ಹಂಚಿದ್ದಾರೆ.
ಜಿಲ್ಲಾಡಳಿತ, ಭಾರತೀಯ ಜನತಾ ಪಾರ್ಟಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಜೊತೆ ಸೇರಿಕೊಂಡು ಹಗಲಿರುಳು ಸೇವೆ ಮಾಡಿದ್ದಾರೆ. ಅವರ ಈ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಜಿಲ್ಲಾಡಳಿತ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ವೀರೇಶ ಕಿವಡಸಣ್ಣವರ್ ಕಳೆದ 25 ವರ್ಷಗಳಿಂದ ಸಮೃದ್ಧಿ ಸೇವಾಸಂಸ್ಥೆ ಮತ್ತು ಸಮರ್ಥನಂ ಅಂಧ ಮಕ್ಕಳ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ