ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾ.16ರಂದು ಆರಂಭವಾಗಬೇಕಾಗಿದ್ದ 7, 8 ಹಾಗೂ 9 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಮಾರ್ಚ್ 31ರ ವರೆಗೆ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಗಳ ಆತಂಕದ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ಮಾರ್ಚ್ 31 ರ ಬಳಿಕ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಘೋಷಣೆ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆದರೆ 10 ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನಿಗದಿತ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ವೈದ್ಯಕೀಯ ಕಟ್ಟೆಚ್ಚರವನ್ನು ವಹಿಸಲಾಗಿದ್ದು ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ