Kannada NewsLatest

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸಾವಿನ ಪ್ರಮಾಣ ಶೇ.0.55 -ರಮೇಶ ಜಾರಕಿಹೊಳಿ

 ಗಣತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸೋಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾದಿಂದ ಗುಣಮುಖರಾದವರ ಪ್ರಮಾಣ ಶೇ.95.07 ಆಗಿದ್ದರೆ ಸಾವಿನ ಪ್ರಮಾಣ ಶೇ.0.55 ಆಗಿದೆ. ಕಳೆದ ಏಳು ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.0.61 ಗೆ ಇಳಿಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
72ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

 

ಆಸ್ಪತ್ರೆಗಳಿಗೆ ಪ್ರಶಸ್ತಿ ವಿತರಣೆ:
ಆಯುಷ್ಮಾನ ಭಾರತ ಯೋಜನೆಯಡಿ ಕೋವಿಡ್-೧೯ ೧೯ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬೆಳಗಾವಿ ಬಿಮ್ಸ್ ಆಸ್ಪತ್ರೆ, ತಾಲೂಕಾ ಜನರಲ್ ಆಸ್ಪತ್ರೆ ಗೋಕಾಕ, ನೋಬಲ್ ಕೇರ್ ಚಿಲ್ಡ್ರನ್ಸ್ ಆಸ್ಪತ್ರೆ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಹಾಸ್ಪಿಟಲ್ ಹಾಗೂ ಎಮ್‌ಆರ‍್ಸಿ ಸಂಸ್ಥೆಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕರು ಪ್ರಶಸ್ತಿಗಳನ್ನು ವಿತರಿಸಿದರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ ಹೊಸಮನಿ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಪೊಲೀಸ ಆಯುಕ್ತ ಡಾ. ಕೆ. ತ್ಯಾಗರಾಜನ್, ಜಿಲ್ಲಾ ಪಂಚಾಯತ ಸಿಇಓ ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಮೇಶ ಜಾರಕಿಹೊಳಿ ಭಾಷಣದ ಪೂರ್ಣ ವಿವರ ಹೀಗಿದೆ:
ದೇಶದ ಪ್ರತಿಷ್ಠಿತ “ಪದ್ಮಭೂಷಣ” ನಾಗರಿಕ ಪುರಸ್ಕಾರಕ್ಕೆ ಭಾಜನರಾಗಿರುವ ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿ, ನಾಟಕಕಾರರಾದ ಡಾ.ಚಂದ್ರಶೇಖರ್ ಕಂಬಾರ ಅವರಿಗೆ ನಾಡಿನ ಸಮಸ್ತ ಜನರ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಬೆಳಗಾವಿ ಜಿಲ್ಲೆ ವಿಸ್ತಾರದಲ್ಲೂ ವಿನ್ಯಾಸದಲ್ಲೂ ಚಾರಿತ್ರಿಕವಾಗಿ ತನ್ನದೇ ಆದ ಮಹತ್ವವನ್ನು ದಾಖಲಿಸಿದೆ. ಸ್ವಾಭಾವಿಕವಾಗಿಯೇ ಜಿಲ್ಲೆಯ ನಾಗರೀಕರು ರಾಷ್ಟ್ರಾಭಿಮಾನಿಗಳು. ಸ್ವಾತಂತ್ರ್ಯದ ಪೂರ್ವದಲ್ಲಿಯೇ ನಮ್ಮ ಜಿಲ್ಲೆಯ ಹೋರಾಟಗಾರರ ಕೊಡುಗೆ ಅನುಪಮವಾದುದು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಿಂದ ಹಿಡಿದು ಗಂಗಾಧರರಾವ್ ದೇಶಪಾಂಡೆಯವರ ತನಕ ಸಾವಿರಾರು ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು.
ಇದು ಗಾಂಧಿಯಂತಹ ಮಹಾತ್ಮರು ನಡೆದಾಡಿದ ನೆಲ. ಅದಕ್ಕೂ ಪೂರ್ವದಲ್ಲಿ ಚನ್ನಮ್ಮ, ರಾಯಣ್ಣರು ಸ್ವಾಭಿಮಾನಕ್ಕಾಗಿ ಆತ್ಮ ಸಮರ್ಪಣೆ ಮಾಡಿಕೊಂಡ ನೆಲ. ಮಧ್ಯಯುಗದ ಚರಿತ್ರೆಯಲ್ಲಿ ಶರಣರು ನಡೆದಾಡಿದ ವೀರ ತಪೋಭೂಮಿಯಿದು. ಇಂತಹ ಉತ್ಕøಷ್ಟ ಜನ್ಮಭೂಮಿ ಬೆಳಗಾವಿಯದು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ.
1950 ರ ಜನವರಿ 26 ರಂದು ನಮ್ಮ ದೇಶವು ಗಣರಾಜ್ಯವಾಯಿತು. ಸಂವಿಧಾನವನ್ನು ವಿಧಿಬದ್ಧವಾಗಿ ಒಪ್ಪಿಕೊಂಡ ಈ ದಿನ ಭಾರತೀಯರೆಲ್ಲರಿಗೂ ಹೆಮ್ಮೆಯ ದಿನವಾಗಿದೆ. ನಮಗೆಲ್ಲರಿಗೂ ಸಾರ್ವಭೌಮ ಅಧಿಕಾರ ಕಲ್ಪಿಸಿಕೊಟ್ಟ ಮಹತ್ವದ ದಿನ ಇದಾಗಿದೆ.
ಡಾ. ಬಿ.ಆರ್.ಅಂಬೇಡ್ಕರ್ ಅವರಂಥಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಹಗಲಿರುಳೆನ್ನದೆ ಚಿಂತಿಸಿ, ರಚಿಸಿದ ಭವ್ಯಭಾರತದ ಸತ್ಸಂಕಲ್ಪವಿದಾಗಿದೆ. ಗಣತಂತ್ರ ಭಾರತವು ಭಾರತದ ಪ್ರತಿ ಪ್ರಜೆಗೂ ಪರಮಾಧಿಕಾರವನ್ನು ಘೋಷಿಸಿದೆ. ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ನೀಡುವುದರ ಮೂಲಕ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದೆ.
ಬೆಳಗಾವಿ ಜಿಲ್ಲೆ ಕರ್ನಾಟಕದ ಜಿಲ್ಲೆಗಳಲ್ಲಿ ಹಿರಿದಾದ ಸ್ಥಾನಪಡೆದಿದೆ. ಇಲ್ಲಿನ ಜನರು ಧರ್ಮ-ಭಾಷೆಯ ಸಹಿಷ್ಣುಗಳು. ಸುಸಂಸ್ಕೃತರು. ವಿನಯ ಸಂಪನ್ನರು. ಸುಶಿಕ್ಷಿತರು. ಸಾಮರಸ್ಯದ ಹಾಗೂ ಸಹಕಾರ ತತ್ವದ ಆಧಾರದ ಮೇಲೆ ನಂಬಿಕೆಯಿಟ್ಟವರು.  ಗಣರಾಜ್ಯದ ಹಾಗೂ ಸಂವಿಧಾನದ ಮೇಲೆ ಗೌರವ ಇಟ್ಟವರು. ಇಲ್ಲಿ ಎಲ್ಲಾ ಭಾಷೆ, ಧರ್ಮ ಹಾಗೂ ಸಮುದಾಯಗಳವರು ಪರಸ್ಪರ ಅರ್ಥಮಾಡಿಕೊಂಡು ಬದುಕುತ್ತಿರುವರು.
ಜಿಲ್ಲೆಯ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿಗಳಾದ  ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ಕೆಲವು ಮಹತ್ವದ ಯೋಜನೆಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ.
ಪ್ರವಾಹ ಮತ್ತು ಕೋವಿಡ್‍ನಿಂದ ತತ್ತರಿಸಿದ ಜಿಲ್ಲೆಯು ಇದೀಗ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ಸಂತಸದ ತಂದಿದೆ. ಬೆಳಗಾವಿಯ ಬಿಮ್ಸ್ ಸೇರಿದಂತೆ ಜಿಲ್ಲೆಯ 13 ಕೇಂದ್ರಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಈಗಾಗಲೇ ಕೋವಿಶಿಲ್ಡ್ ಲಸಿಕಾಕರಣ ಆರಂಭಿಸಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಉಂಟಾಗಿದ್ದ ಬೆಳೆಹಾನಿಗೆ ಸಂಬಂಧಿಸಿದಂತೆ 98 ಸಾವಿರ 278 ರೈತರ ಖಾತೆಗೆ 74 ಕೋಟಿ 71 ಲಕ್ಷ ರೂಪಾಯಿ ಬೆಳೆಪರಿಹಾರ ನೇರವಾಗಿ ಜಮಾ ಮಾಡಲಾಗಿದೆ.
ಪ್ರವಾಹದಿಂದ ಉಂಟಾಗಿರುವ ಮನೆಹಾನಿಗೆ ಸಂಬಂಧಿಸಿದಂತೆ 6 ಸಾವಿರ 97 ಫಲಾನುಭವಿಗಳ ಮಾಹಿತಿಯನ್ನು ರಾಜೀವ ಗಾಂಧೀ ವಸತಿ ನಿಗಮದ ತಂತ್ರಾಂಶದಲ್ಲಿ ಈಗಾಗಲೇ ಅಳವಡಿಸಲಾಗಿದೆ. ಮನೆಹಾನಿ ಪರಿಹಾರ ನೀಡಲು ಜಿಲ್ಲೆಗೆ 31 ಕೋಟಿ 29 ಲಕ್ಷ ಹಣ ಬಿಡುಗಡೆಯಾಗಿದ್ದು, ಈ ಹಣವನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಮೂಲಸೌಕರ್ಯಗಳ ದುರಸ್ತಿಗೆ 20 ಕೋಟಿ 26 ಲಕ್ಷ ರೂಪಾಯಿ ಬಿಡುಗಡೆಯಾಗಿರುತ್ತದೆ.
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 133.00 ಮಿಲಿ ಮೀಟರ್ ಸಾಮಾನ್ಯ ಮಳೆ ಪ್ರಮಾಣಕ್ಕೆ ಹೋಲಿಸಲಾಗಿ, ಜಿಲ್ಲೆಯಲ್ಲಿ 144 ಮಿಲಿ ಮೀಟರ್ ಮಳೆ ದಾಖಲಾಗಿದ್ದು, ಜಿಲ್ಲೆಯಾದ್ಯಂತ ಉತ್ತಮ ಹಿಂಗಾರು ಮಳೆ ವರದಿ ಆಗಿರುತ್ತದೆ.
ಪ್ರಸ್ತುತ ಸಾಲಿನ ಹಿಂಗಾರಿನಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಮಳೆ ಕೊರತೆಯಾದರೂ 3.11 ಲಕ್ಷ ಹೆಕ್ಟೇರ್, ಅಂದರೆ 96 ಪ್ರತಿಶತ ಪ್ರದೇಶದಲ್ಲಿ ಹಿಂಗಾರು ಬೆಳೆಗಳ ಬಿತ್ತನೆ ಪ್ರಗತಿಯಾಗಿದೆ.
ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಒಟ್ಟು 1.55 ಲಕ್ಷ ರೈತರಿಗೆ 48,592 ಕ್ವಿಂಟಲ್ ಮತ್ತು ಹಿಂಗಾರು ಹಂಗಾಮಿನಲ್ಲಿ 0.89 ಲಕ್ಷ ರೈತರಿಗೆ 22,577 ಕ್ವಿಂಟಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗಿದ್ದು, ಅದಕ್ಕಾಗಿ ರೂ. 1560 ಲಕ್ಷಗಳ ಸಹಾಯಧನವನ್ನು ಪಾವತಿಸಲಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 94 ಸಾವಿರ 600 ಟನ್ ರಸಗೊಬ್ಬರದ ನಿಗದಿಯಾಗಿದ್ದು, ಡಿಸೆಂಬರ್ ಅಂತ್ಯದವರೆಗೆ ನಿಗದಿಯಾದ 73 ಸಾವಿರ 97 ಟನ್ ಪೈಕಿ 89 ಸಾವಿರ 745 ಟನ್ ಪೂರೈಕೆಯಾಗಿದ್ದು,  ರಸಗೊಬ್ಬರದ ಕೊರತೆ ಇರುವುದಿಲ್ಲ.
 ರೈತರ ಆದಾಯವನ್ನು ಹೆಚ್ಚಿಸಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ ಕೇಂದ್ರ ಸರ್ಕಾರದಿಂದ ರೂ. 6000/- ಹಾಗೂ ರಾಜ್ಯ ಸರ್ಕಾರದಿಂದ ರೂ. 4000/- ಗಳನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.
ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಜಿಲ್ಲೆಯ 5.36 ಲಕ್ಷ ರೈತ ಕುಟುಂಬಗಳಿಗೆ 864.83 ಕೋಟಿ ರೂ.ಗಳನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕೋವಿಡ್-19 ಸಂದರ್ಭದಲ್ಲಿ ಹಾನಿಗೊಳಗಾದ ಹೂ, ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಪರಿಹಾರಧನವನ್ನು ನೀಡಲಾಗಿದ್ದು, ಒಟ್ಟು 11,437 ರೈತರಿಗೆ ಹಂಚಿಕೆ ಮಾಡಲಾಗಿದೆ.
2019-20 ನೇ ಸಾಲಿನಲ್ಲಿ ವಿಮೆ ಯೋಜನೆಗಳಡಿ ಜಿಲ್ಲೆಯ 1976 ರೈತರಿಗೆ ಒಟ್ಟು 17.62 ಕೋಟಿ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 68,565 ಅಂತ್ಯೋದಯ ಕುಟುಂಬಗಳು ಮತ್ತು 10,75,073 ಆದ್ಯತಾ ಬಿ.ಪಿ.ಎಲ್ ಕುಟುಂಬಗಳಿದ್ದು, ಅದರಲ್ಲಿ 34.22 ಲಕ್ಷ ಸದಸ್ಯರು ಇರುತ್ತಾರೆ.
ಮುಖ್ಯ ಮಂತ್ರಿ ಅನಿಲಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 11,885 ಫಲಾನುಭವಿಗಳನ್ನು ಗುರುತಿಸಿದ್ದು, ಅವರಿಗೆ ಉಚಿತವಾಗಿ ಸ್ಟೋವ್ ಮತ್ತು ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು  ಇಲಾಖೆಯಿಂದ ಒದಗಿಸಲಾಗಿದೆ.
ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ, ಮೆಡಿಕಲ್ ಆಕ್ಸಿಜನ್ ಪೈಪಲೈನ್ ವ್ಯವಸ್ಥೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇವುಗಳಿಗಾಗಿ ಒಟ್ಟು ರೂ.230.74 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 1ನೇ ಏಪ್ರೀಲ್ 2020 ರಿಂದ 31ನೇ ಡಿಸೆಂಬರ್ 2020 ರ ಅಂತ್ಯದವರೆಗೆ ಒಟ್ಟು 24721 ಫಲಾನುಭವಿಗಳಿಗೆ ರೂ.44.85 ಕೋಟಿ ವಿನಿಯೋಗಿಸಲಾಗಿದೆ. ಅದರಂತೆ ಈ ಯೋಜನೆಯಡಿ ಕೊರೋನಾ ಸೋಂಕಿತ 1913 ಜನರಿಗೆ ರೂ. 60.39 ಕೋಟಿ ವಿನಿಯೋಗಿಸಿ ಚಿಕಿತ್ಸೆ ನೀಡಲಾಗಿದೆ.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ದಿ:13.01.2021 ರಂದು ಸೀರಮ್ ಇಂಡಿಯಾ ಕಂಪನಿಯಿಂದ ಒಂದು ಲಕ್ಷ ನಲವತ್ತೇಳು ಸಾವಿರ ಡೋಸ್ ಕರೋನಾ ಲಸಿಕೆ ಸರಬರಾಜಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 41 ಸಾವಿರ 292 ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿರುವ 41 ಸಾವಿರ 292 ಜನರ ಪೈಕಿ ಈಗಾಗಲೇ 15 ಸಾವಿರ 83 ಜನರಿಗೆ ಲಸಿಕೆ ನೀಡಲಾಗಿದ್ದು, ಇನ್ನುಳಿದವರಿಗೆ ಆದಷ್ಟು ಬೇಗನೇ ಲಸಿಕೆ ನೀಡಲಾಗುವುದು. ಎರಡನೇ ಹಂತದ ನೋಂದಣಿ ಕಾರ್ಯ ಕೂಡ ಆರಂಭಿಸಲಾಗಿದೆ.
ಜಿಲ್ಲೆಯಲ್ಲಿ ಮಾರ್ಚ್ -2020 ರಿಂದ ಜನವರಿ 25, 2021 ರವರೆಗೆ ಒಟ್ಟಾರೆ 4 ಲಕ್ಷ 61 ಸಾವಿರ 654 ಜನರ ಗಂಟಲುದ್ರವದ ‌ಮಾದರಿ ಸಂಗ್ರಹಿಸಲಾಗಿದೆ.
ಇದರಲ್ಲಿ 26 ಸಾವಿರ 656 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುತ್ತದೆ.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ 5331 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮಾತೃವಂದನಾ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 1 ಲಕ್ಷ 7ಸಾವಿರಗಳು ಫಲಾನುಭವಿಗಳಿಗೆ ರೂ.43.4 ಕೋಟಿ ಮೊತ್ತವನ್ನು ಸಂದಾಯ ಮಾಡಲಾಗಿದೆ.
ಭಾಗ್ಯಲಕ್ಷ್ಮೀ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಇಲ್ಲಿಯವರೆಗೆ 2,55,833 ಫಲಾನುಭವಿಗಳಿಗೆ ಮಂಜೂರಿ ನೀಡಿದ್ದು, ಇಲ್ಲಿಯವರೆಗೆ 2,42,145 ಬಾಂಡ್‍ಗಳನ್ನು ವಿತರಣೆ ಮಾಡಲಾಗಿದೆ.
2020-21 ನೇ ಸಾಲಿಗೆ 1 ರಿಂದ 10 ತರಗತಿಯ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಷೂ ಮತ್ತು ಸಾಕ್ಸ್ ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ 1 ರಿಂದ 10 ನೇ ತರಗತಿಯ ಒಟ್ಟು 4.49 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಗಿದೆ.
ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ 34.76 ಲಕ್ಷ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ.
ಚಿಕ್ಕೋಡಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಒಟ್ಟು 34.76 ಲಕ್ಷ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ.
ಬೆಳಗಾವಿ ಜಿಲ್ಲೆಯ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 2009-10 ನೇ ಸಾಲಿನಿಂದ ಇಲ್ಲಿಯವರೆಗೆ 969 ನಿರುದ್ಯೋಗಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು 20.55 ಕೋಟಿ ರೂಪಾಯಿ ವೆಚ್ಚದಲ್ಲಿ ಸಹಾಯಧನವನ್ನು ವಿತರಿಸಲಾಗಿದೆ.
ಬೆಳಗಾವಿ ಜಿಲ್ಲೆಯು ಸಹಕಾರ ಜಿಲ್ಲೆಯಾಗಿದ್ದು, ರಾಜ್ಯದಲ್ಲಿ ಸಹಕಾರ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ.
ರೈತರ ರೂ. 1.00 ಲಕ್ಷಗಳ ವರೆಗಿನ ಸಾಲ ಮನ್ನಾ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಒಟ್ಟು 2 ಲಕ್ಷ 87 ಸಾವಿರ ರೈತರ ಸಾಲ ರೂ. 1 ಸಾವಿರ 1 ನೂರಾ 62 ಕೋಟಿ ಮನ್ನಾ ಆಗುವ ಬಗ್ಗೆ ಅಂದಾಜಿಸಲಾಗಿದೆ. ಈವರೆಗೆ ಜಿಲ್ಲೆಯ 2 ಲಕ್ಷ 60 ಸಾವಿರ ರೈತರ 1 ಸಾವಿರ 20 ಕೋಟಿ ಬಿಡುಗಡೆಯಾಗಿರುತ್ತದೆ.
ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. 2020-21 ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ 3 ಲಕ್ಷ ರೈತರಿಗೆ ರೂ. 1 ಸಾವಿರ 5 ನೂರು ಕೋಟಿ ಬೆಳೆ ಸಾಲ ವಿತರಿಸಲಾಗಿದೆ.
2020-21 ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 35 ಸಾವಿರ 200 ರೈತ ಸದಸ್ಯರಿಂದ 2 ಕೋಟಿ 99 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಒಟು ರೂ. 14 ಕೋಟಿ 97 ಲಕ್ಷ ಪ್ರೋತ್ಸಾಹಧನವನ್ನು ರೈತರಿಗೆ ನೀಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 169 ಕೊಳಗೇರಿ ಪ್ರದೇಶಗಳು ಅಧಿಕೃತವಾಗಿ ಘೋಷಣೆಯಾಗಿರುತ್ತವೆ. ಇನ್ನುಳಿದ 24 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸದರಿ ಕೊಳಗೇರಿ ಪ್ರದೇಶಗಳ ಘೋಷಣೆ ಪ್ರಸ್ತಾವನೆಗಳನ್ನು ಕೇಂದ್ರ ಕಛೇರಿಗೆ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮೂರು ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಗಳ ಮುಖಾಂತರ  ಕೆ.ಎಸ್.ಎಸ್.ಐ.ಡಿ.ಸಿ., ಕೆ.ಐ.ಎ.ಡಿ.ಬಿ. ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಮುಖಾಂತರ ಅನುಷ್ಠಾನಗೊಳ್ಳುವ  133 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ರೂ. 300 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಹಾಗೂ 2135 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಈ ಹಿಂದಿನ ಮರಳು ನೀತಿಯನ್ವಯ ಒಟ್ಟು 42 ಮರಳು ಬ್ಲಾಕುಗಳನ್ನು ಗುರುತಿಸಲಾಗಿದ್ದು 12 ಬ್ಲಾಕುಗಳಿಗೆ ಗುತ್ತಿಗೆ ಮಂಜೂರಾತಿ ನೀಡಲಾಗಿರುತ್ತದೆ.
ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಜಲ್ಲಿ, ಮರಳಿನ ಕೊರತೆಯಾಗದಂತೆ ಮತ್ತು ಸಾರ್ವಜನಿಕರಿಗೆ ಎಟುಕುವ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ನಗರೋತ್ಥಾನ (ಮುನಿಸಿಪಾಲಿಟಿ)-3ರ ಯೋಜನೆಯಡಿ ಬೆಳಗಾವಿ ಜಿಲ್ಲೆಯ 32 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ರೂ.241 ಕೋಟಿ ಅನುದಾನ ಹಂಚಿಕೆಯಾಗಿರುತ್ತದೆ. ಈ ಕುರಿತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 366 ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆ ಪಡೆದುಕೊಳ್ಳಲಾಗಿದ್ದು, ಈ ಪೈಕಿ 275 ಕಾಮಗಾರಿಗಳು ಪೂರ್ಣಗೊಂಡಿದ್ದು, 60 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
31 ಕಾಮಗಾರಿಗಳು ಪ್ರಾರಂಭಿಕ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸಿ ಮುಕ್ತಾಯಗೊಳಿಸಲಾಗುವುದು.
ರಾಜ್ಯ ಹಣಕಾಸು ಆಯೋಗದಡಿ 2015-16ನೇ ಸಾಲಿನಿಂದ 2020-21ನೇ ಸಾಲಿನವರೆಗೆ ರೂ.325.85 ಕೋಟಿಗಳು ಹಂಚಿಕೆಯಾಗಿದ್ದು, ಇದರಲ್ಲಿ 4172 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿ 2015-16ನೇ ಸಾಲಿನಿಂದ 2019-20ನೇ ಸಾಲಿನವರೆಗೆ ರೂ.333.42 ಕೋಟಿಗಳು ಹಂಚಿಕೆಯಾಗಿದ್ದು, ಇದರಲ್ಲಿ 4343 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 3821 ಕಾಮಗಾರಿಗಳು ಪೂರ್ಣಗೊಂಡಿದ್ದು, 418 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಬೆಳಗಾವಿ ಮಹಾನಗರ ಪಾಲಿಕೆಯ ಆಯ್ದ 10 ವಾರ್ಡ್‍ಗಳಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಉಳಿದ 48 ವಾರ್ಡ್‍ಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಕುರಿತು ವಿಶ್ವ ಬ್ಯಾಂಕಿನ ಧನ ಸಹಾಯದ ಆಧಾರದ ಮೇಲೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಗುತ್ತಿಗೆಯ ಒಪ್ಪಂದದಂತೆ ಮುಂಬರುವ 5 ವರ್ಷ ಕಾಲಮಿತಿಯಲ್ಲಿ ಎಲ್ಲಾ ವಾರ್ಡಗಳಿಗೆ ನಿರಂತರ ನೀರು ಸರಬರಾಜು ಸೌಲಭ್ಯವನ್ನು ಕಲ್ಪಿಸಲಾಗುವುದು. ಈ ಹಂತದ ಕಾಮಗಾರಿಯ ಸಲುವಾಗಿ ರೂ. 571 ಕೋಟಿಗಳ ಮೊತ್ತವನ್ನು ನಿಗದಿಪಡಿಸಲಾಗಿದೆ.
ಪಾಲಿಕೆಗೆ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ರೂ 125 ಕೋಟಿಗಳು ಮಂಜೂರಾಗಿರುತ್ತದೆ. ಕಾಮಗಾರಿಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವದು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು ರೂ. 165 ಕೋಟಿ ಅಂದಾಜು ವೆಚ್ಚದಲ್ಲಿ ಕಣಬರ್ಗಿ ಗ್ರಾಮದ 160 ಎಕರೆ ಕ್ಷೇತ್ರದ ವಿಸ್ತೀರ್ಣದಲ್ಲಿ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಿಲಾಗಿರುತ್ತದೆ. ಯೋಜನೆ ಸಂಖ್ಯೆ-61 ಹೊಸ ಬಡಾವಣೆಗೆ ಈಗಾಗಲೇ ಮಾನ್ಯ ಸರಕಾರದಿಂದ ಅನುಮೋದನೆ ನೀಡಲಾಗುತ್ತಿದೆ.
ಅಂತರ ರಾಷ್ಟ್ರೀಯ ಮಟ್ಟದ ಹಾಕಿ ಮೈದಾನವನ್ನು ನಿರ್ಮಿಸುವ ಉದ್ದೇಶದಿಂದ ಕಣಬರ್ಗಿ ಗ್ರಾಮದ ಬಳಿ ಸುಮಾರು 40,000 ಚದರ ಮೀಟರ್ ಜಾಗವನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗಿದ್ದು, ಅಂದಾಜು 300 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು.
ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ 50:50 ಅನುಪಾತದ ಅನುದಾನದಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಸುಂದರ ಮತ್ತು ಸ್ವಚ್ಛ ಬೆಳಗಾವಿ ನಗರ ನಿರ್ಮಾಣಕ್ಕಾಗಿ ಈ ಯೋಜನೆಯಡಿ ಇದುವರೆಗೆ 494 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 366 ಕೋಟಿ ರೂಪಾಯಿ ಖರ್ಚು ಮಾಡಲಾಗಿರುತ್ತದೆ.
ಸ್ಮಾರ್ಟ್‍ಸಿಟಿ ಮಿಷನ್ ಯೋಜನೆಯಡಿ 930 ಕೋಟಿ ರೂಪಾಯಿ ಅನುದಾನದಡಿ 101 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 27 ಕಾಮಗಾರಿ ಪೂರ್ಣಗೊಂಡಿರುತ್ತವೆ.
ಸಾರ್ವಜನಿಕ ಆರೋಗ್ಯ, ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕಾಗಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತಿದ್ದು, ಡಿಸೆಂಬರ್ 2021 ರ ವೇಳೆಗೆ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ.
ಬಹುಮುಖ್ಯವಾಗಿ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಹಂತದಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳಲ್ಲೂ ಕೆರೆ ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.
ಪ್ರಸ್ತುತ 3572 ಕೋಟಿ ರೂಪಾಯಿ ಮೊತ್ತದ ತುಬಚಿ-ಬಬಲೇಶ್ವರ, 24.60 ಕೋಟಿ ರೂಪಾಯಿ ಮೊತ್ತದ ಚಚಡಿ; 22.54 ಕೋಟಿ ಮೊತ್ತದ ಮುರಗೋಡ, 544 ಕೋಟಿ ರೂಪಾಯಿ ಮೊತ್ತದ ವೀರಭದ್ರೇಶ್ವರ, 1319 ಕೋಟಿ ರೂಪಾಯಿ ಮೊತ್ತದ ಬಸವೇಶ್ವರ (ಕೆಂಪವಾಡ), 107 ಕೋಟಿ ಮೊತ್ತದ ಗೊಡಚಿನಮಲ್ಕಿ ಹಾಗೂ 566 ಕೋಟಿ ರೂಪಾಯಿ ಮೊತ್ತದ ಸಾಲಾಪುರ ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ.
ಇದಲ್ಲದೇ ಅಂದಾಜು 903 ಕೋಟಿ ರೂಪಾಯಿ ವೆಚ್ಚದ ಘಟಪ್ರಭಾ ಎಡ ದಂಡೆ ಕಾಲುವೆ ಆಧುನೀಕರಣ; 635 ಕೋಟಿ ರೂಪಾಯಿ ಮೊತ್ತದಲ್ಲಿ ಬಳ್ಳಾರಿ ನಾಲಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
2020-21 ನೇ ಸಾಲಿನಲ್ಲಿ ಗೋಕಾಕ ತಾಲ್ಲೂಕಿನ ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಯ 990 ಕೋಟಿ ರೂಪಾಯಿ ಮೊತ್ತದ ವಿಸ್ತøತ ಯೋಜನಾ ವರದಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಸದರಿ ಯೋಜನೆಯ ಅಂದಾಜು ಮೊತ್ತಕ್ಕೆ ತಾಂತ್ರಿಕ ಮಂಜೂರಾತಿಯನ್ನು ಕೂಡ ನೀಡಲಾಗಿದ್ದು, ಟೆಂಡರ್ ಕರೆಯಲಾಗಿದೆ.
ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಹೆಚ್ಚಿಸುವುದರ ಜತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅನೇಕ ಹೊಸ ಯೋಜನೆಗಳನ್ನು ಆಯವ್ಯಯದಲ್ಲಿ ಘೋಷಿಸಲಾಗಿದೆ.
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿರುವ ನಮ್ಮ ಸರಕಾರವು ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಕೃಷಿಕರು, ಕಾರ್ಮಿಕರು, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಹೀಗೆ ಎಲ್ಲ ವರ್ಗದ ಹಿತರಕ್ಷಣೆಗೆ ಬದ್ಧವಾಗಿದೆ. ಗಣತಂತ್ರ ವ್ಯವಸ್ಥೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನಿಟ್ಟುಕೊಂಡು ಎಲ್ಲರೂ ಸಹಬಾಳ್ವೆಯಿಂದ ಬದುಕೋಣ. ಗಣತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button