Latest

ಕೊರೋನಾ ರೋಗವೂ… ಖಾಸಗಿ ಕ್ಲಿನಿಕ್ ಗಳೂ… ವಾಸ್ತವದ ಮೇಲೊಂದು ಕ್ಷಕಿರಣ

ಕೊರೋನಾ ರೋಗಿಯ ಚಿಕಿತ್ಸೆ ಮಾಡಿದರೆ ಖಾಸಗಿ ಕ್ಲಿನಿಕ್ ಗಳು ರೋಗಿಗಿಂತ ಹೆಚ್ಚಾಗಿ ಹೈರಾಣಾಗುತ್ತವೆ. ಏಕೆ? ಓದಿ ಈ ಲೇಖನ

ಕೊರೋನಾ ರೋಗಿಗಳನ್ನು ಪರೀಕ್ಷಿಸಿ ಎಂದು ಸರಕಾರ ಖಾಸಗಿ ವೈದ್ಯರಿಗೆ ಆಗ್ರಹದ ಜೊತೆಗೆ ಸೂಚನೆಯನ್ನು ನೀಡುತ್ತದೆ.
ಆದರೆ ವಾಸ್ತವಿಕವಾಗಿ ಒಂದು ವಿಚಾರ ಮಾಡೋಣ, ಒಂದು ವೇಳೆ ಒಂದು ಖಾಸಗಿ ಕ್ಲಿನಿಕ್ನಲ್ಲಿ ಒಬ್ಬ ಕೊರೋನಾ ರೋಗಿ ಬಂದು ಹೋಗಿದ್ದಾನೆ ಅಥವಾ ಖಾಸಗಿ ವೈದ್ಯ ಪರೀಕ್ಷಿಸಿ  ಆ  ರೋಗಿಯ ಗಂಟಲು ಪರೀಕ್ಷೆಗೆ ಸರಕಾರಿ ವ್ಯವಸ್ಥೆಗೆ ಕಳುಹಿಸಿಕೊಟ್ಟಿದ್ದಾರೆ ಎಂದಾದರೆ ಮುಂದಾಗುವ ವಿದ್ಯಮಾನಗಳ ಬಗ್ಗೆ ಒಮ್ಮೆ ಯೋಚಿಸೋಣ. ಆ ರೋಗಿಗೆ ರೋಗ  ಧೃಡಪಟ್ಟಿತ್ತು ಎಂದಾದರೆ ಅರ್ಧಗಂಟೆಯಲ್ಲಿ ಆ ಕ್ಲಿನಿಕ್ ಅಥವಾ ಆಸ್ಪತ್ರೆಯ ಒಂದು ಮಹಡಿಯನ್ನು ಸೀಲ್ ಡೌನ್  ಮಾಡಲಾಗುತ್ತದೆ.
ಸೀಲ್ ಡೌನ್ ಅಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ, ಆ ಕ್ಲಿನಿಕ್ ನಲ್ಲಿ ಇರುವ ಎಲ್ಲಾ ಸಿಬ್ಬಂದಿ ವೈದ್ಯರು ಹಾಗೂ ಆ ವೇಳೆಗೆ ಇರುವ ರೋಗಿಗಳನ್ನು ಕಟ್ಟಡದಿಂದ ಹೊರ ಕಳುಹಿಸಿ ಕಟ್ಟಡಕ್ಕೆ ಬೀಗ ಹಾಕಲಾಗುತ್ತದೆ. ಹಾಗೂ ಕೆಲವೊಂದು ಸಂದರ್ಭದಲ್ಲಿ  ಯಾರೂ ಒಳಗೆ ಹೋಗದಂತೆ ಪೊಲೀಸ್ ಪಹರೆಯನ್ನು ಕೊಡಲಾಗುತ್ತದೆ. ಅಂದರೆ 48 ಗಂಟೆಗಳ ಕಾಲ ಈ ಕಟ್ಟಡದಲ್ಲಿ ಯಾರೂ ಒಳಗೆ ಪ್ರವೇಶಿಸಬಾರದು ಎಂಬ ಉದ್ದೇಶದಿಂದ ಇದನ್ನು ಸೀಲ್ ಡೌನ್  ಮಾಡಲಾಗುತ್ತದೆ.
ಅಷ್ಟೊತ್ತಿಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ,  ಫೇಸ್ಬುಕ್ ಪೇಜುಗಳಲ್ಲಿ, ವಾಟ್ಸಾಪ್ ಗಳಲ್ಲಿ , ಮರುದಿನ ಪತ್ರಿಕೆಗಳಲ್ಲಿ ಈ ಕ್ಲಿನಿಕ್, ಆಸ್ಪತ್ರೆ ಸೀಲ್ ಡೌನ್ ಮಾಡಲಾಗಿದೆ ಎಂದು ಬರೆಯಲಾಗುತ್ತದೆ.
ವೈದ್ಯರು ಹಾಗೂ ಸಿಬ್ಬಂದಿಯನ್ನು ಅವರವರ ಮನೆಯಲ್ಲಿಯೇ ಇರುವಂತೆ ಹೊರಗೆ ತಿರುಗಾಡಿದಂತೆ ಸೂಚಿಸಲಾಗುತ್ತದೆ ಹಾಗೂ ಈ ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗುತ್ತದೆ.
ಈತನ್ ಮಧ್ಯದಲ್ಲಿ ಕ್ಲಿನಿಕ್, ಆಸ್ಪತ್ರೆ ಎದುರು ಪೊಲೀಸ್ ಜೀಪು, ಕಂದಾಯ ಇಲಾಖೆ ಜೀಪುಗಳು ಕಾಣತೊಡಗುತ್ತವೆ. ಅಷ್ಟರಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಿಂದಿನ ಎರಡು ದಿನ ಹಾಗೂ ಆ ದಿನ ಉಪಸ್ಥಿತರಿರುವ ರೋಗಿಗಳ ದೂರವಾಣಿ, ಸಂಖ್ಯೆ , ಹೆಸರು, ವಿಳಾಸಕ್ಕಾಗಿ ಗಡಿಬಿಡಿ ಪ್ರಾರಂಭಿಸುತ್ತಾರೆ‌. ಇದನ್ನು ತೆಗೆದುಕೊಂಡು ಮುಂದೇನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿಯದು.
ಅಂತೂ ಇಂತೂ ಎಲ್ಲರನ್ನ ಸರಕಾರಿ ಆಸ್ಪತ್ರೆಗೆ ನಿಗದಿತ ಸಮಯಕ್ಕೆ ಬರಲು ಹೇಳಲಾಗುತ್ತದೆ. ಅಲ್ಲಿ ಅವರ ಗಂಟಲು ಪರೀಕ್ಷೆಗಾಗಿ ಮಾದರಿಯನ್ನು ಪಡೆದುಕೊಳ್ಳಲಾಗುತ್ತದೆ.
ಆ ದಿನ ಸಾಯಂಕಾಲದ ಒಳಗೆ ಈ ಸಿಬ್ಬಂದಿ ಹಾಗೂ ವೈದ್ಯರ ಮನೆಯ ಬಾಗಿಲಿಗೆ ಯಾರೂ ಪ್ರವೇಶಿಸಬಾರದು, ಕೋರೋನ ೧೯ ಭಿತ್ತಿ ಪತ್ರವನ್ನು ಆಶಾ ಕಾರ್ಯಕರ್ತರು ಹಾಗೂ ನಿಗದಿತ ಅಧಿಕಾರಿಗಳು ರಾರಾಜಿಸುವಂತೆ ಮಾಡುತ್ತಾರೆ. ಹಾಗೂ ರಸ್ತೆಯಿಂದ ಹೋಗುವ ಎಲ್ಲ ಜನರು ಕೂಡ ಕಳ್ಳ ಖದೀಮರನ್ನು ನೋಡಿದಂತೆ ಆ ಮನೆಯ ಕಡೆಗೆ ತಿರುಗಿ ತಿರುಗಿ ನೋಡುತ್ತಾರೆ.
ಆನಂತರ ವೈದ್ಯರು ಹಾಗೂ ಸಿಬ್ಬಂದಿಯ ಗಂಟಲು ಪರೀಕ್ಷೆಯ ಫಲಿತಾಂಶದ ಕಡೆಗೆ ಪ್ರತಿದಿನವೂ ಲಕ್ಷ್ಯ ಹೋಗುತ್ತದೆ, ಸಿಬ್ಬಂದಿಗಳು ವೈದ್ಯರಿಗೆ ಸರ್ ಬಂತ  ಅಂತ
ಪ್ರಶ್ನೆಗಳನ್ನು ಕೇಳ ತೊಡಗುತ್ತಾರೆ. ಅಲ್ಲದೆ ವೈದ್ಯರು ಹಾಗೂ ಸಿಬ್ಬಂದಿ ಸಂಬಂಧಿಗಳಿಗೆ ಸಾರ್ವಜನಿಕರು ಈ ಪರೀಕ್ಷೆ ಫಲಿತಾಂಶ ಬಂತಾ  ಇಲ್ವಾ ಯಾವಾಗ ಬರುತ್ತದೆ, ನಾಳೆ ಬರುತ್ತದಾ ಎಂದು ಪ್ರಶ್ನೆಗಳ ಸುರಿಮಳೆ ಸುರಿಯುತ್ತಾರೆ.
ಈ ಮಧ್ಯೆ ಅಪ್ಪಿತಪ್ಪಿ ಯಾರಾದರೂ ಒಬ್ಬರು ತಮ್ಮ ಮನೆಯಿಂದ ಹೊರಗಡೆ ಕಾಣಿಸಿಕೊಂಡರೆ ಪೊಲೀಸರಿಗೆ ದೂರವಾಣಿಯ ಮೂಲಕ ದೂರು ಹೋಗುವುದಂತೂ ಖಂಡಿತ, ಆಗ ಪೊಲೀಸ್ ಸಿಬ್ಬಂದಿಗಳು ಈ ಮನೆಗಳ ಎದುರಿಗೆ ಪ್ರತ್ಯಕ್ಷರಾಗಿ ಕರೊನಾ ನಿಮಿತ್ತದ ವಿಶೇಷ ಏಕವಚನದ ಭಾಷೆಯನ್ನು ಪ್ರದರ್ಶಿಸಿ ಹೋಗುತ್ತಾರೆ.
ಹೀಗೆ ನಾಲ್ಕೈದು ದಿನ ಕಳೆದುಬಿಡುತ್ತದೆ, ಆಗ ಒಮ್ಮೆ ಒಂದು ಸುದ್ದಿ ಬರುತ್ತದೆ. ಫಲಿತಾಂಶ ಬಂದಿದೆ ನಕಾರಾತ್ಮಕವಾಗಿ ಇದೆ, ಕೊರೊನಾ ಇಲ್ಲ ಎಂಬ ಸುದ್ದಿ. ಆದರೆ ಇದು ಅನಧಿಕೃತ ಹೇಳುವ ಮಾಹಿತಿಯು ಅದರೊಟ್ಟಿಗೆ ಬರುತ್ತದೆ.
ಇಷ್ಟರಲ್ಲಿ ಯಾವುದೇ ಸರಕಾರಿ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ಗಂಟಲು ದ್ರವ ಪರೀಕ್ಷೆಗೆ ಕೇಂದ್ರಕ್ಕೆ ಹೋದಲ್ಲಿ ಈ ಮೇಲೆ ಹೇಳಿದವರ ಪರೀಕ್ಷೆಯ ಫಲಿತಾಂಶ ಬಂದಾಗಲೇ ಖರೆ.
ಆ ಬಳಿಕ ಇನ್ನೊಂದು ಎರಡು ಮೂರು ದಿನಗಳ ನಂತರ ಅಧಿಕೃತ ಮಾಹಿತಿ ಲಭ್ಯವಾಗುತ್ತದೆ.
ಇಲ್ಲಿವರೆಗೆ  ವೈದ್ಯನ ಆಸ್ಪತ್ರೆ ಅಥವಾ ಕ್ಲಿನಿಕ್ನ ಬಾಡಿಗೆ ಸಿಬ್ಬಂದಿಗಳ ವೇತನ ಇವೆಲ್ಲವೂ ವೈದ್ಯನ ಹೆಗಲಿಗೆ ಇರುತ್ತದೆ. ಈ ಬಗ್ಗೆ ವಿಚಾರ ಮಾಡಲು ಯಾರಿಗೂ ಪುರುಸೊತ್ತು ಇರುವುದಿಲ್ಲ.
ಆ ಬಳಿಕ ಒಂದು ದಿನ ಅಧಿಕೃತ ಫಲಿತಾಂಶ ಮುದ್ರಿತ ರೂಪದಲ್ಲಿ ಎಲ್ಲ ಜನರಿಗೂ ತಲುಪುತ್ತದೆ. ಜೊತೆಗೆ ಸರಕಾರಿ ವ್ಯವಸ್ಥೆಯಲ್ಲಿರುವ ಅಧಿಕಾರಿಗಳಿಂದ ಇಷ್ಟು ದಿನಗಳವರೆಗೆ ನೀವು ರೋಗಿಗಳನ್ನು ಪರೀಕ್ಷಿಸುವಂತಿಲ್ಲ ಎಂಬ ಸೂಚನೆ ಕಡ್ಡಾಯವಾಗಿ ಪಾಲಿಸಲೇಬೇಕು ಎಂಬ ಮಾತು. ಜೊತೆಗೆ ಆ ಕ್ಲಿನಿಕ್ ಎಲ್ಲಾ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಇರಲು ಸೂಚಿಸಲಾಗುತ್ತದೆ.
ನೆನಪಿಡಿ ಈ ಮಧ್ಯೆ ವೈದ್ಯರು ಹಾಗೂ ಸಿಬ್ಬಂದಿಗಳ ಫಲಿತಾಂಶ ಕೋರೋನಾ ರೋಗ ಇಲ್ಲ ಎಂಬುದು ಸಾಬೀತಾಗಿರುತ್ತದೆ. ಆದರೆ ಈಗಾಗಲೆ ಸಾಕಷ್ಟು ಅಪಪ್ರಚಾರ ಆಗಿರುವುದರಿಂದ ರೋಗಿಗಳೂ ಆ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಾರೆ.
ಆದರೆ ಸರಕಾರಿ ಸೇವೆಯಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿ ಗಳಿಗೆ ಯಾವುದೇ ಕಟ್ಟಲೆಗಳು ಇರುವುದಿಲ್ಲ.
ಇರಲಿ ನಾವು ವಾಸ್ತವಿಕ ಅಂಶದ ಕಡೆಗೆ ಮೊದಲಿಂದಲೂ ಲಕ್ಷ್ಯ ಕೊಡುತ್ತಿದ್ದೇವೆ
ಒಮ್ಮೆ ಯೋಚಿಸಿ ಒಂದು ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಇತರ ರೋಗಿಗಳಿಗೆ ಪರೀಕ್ಷಿಸದೇ ಮನೆಯಲ್ಲಿಯೇ ಇರುವುದು ಎಷ್ಟು  ಸೂಕ್ತ ಸಂಗತಿ ? ಅದರಲ್ಲೂ ಕೋರೋನಾ  ರೋಗ ಇಲ್ಲ ಎಂದಾದ ಮೇಲೂ !
ಇದೇ ರೀತಿಯಾದ ನಿಯಮ ಕಟ್ಟಳೆಗಳು ಖಾಸಗಿಯವರಿಗೆ ಮಾತ್ರ ಎಂದಾದರೆ ಅವರು ರೋಗಿಗಳಿಗೆ ಹೇಗೆ ಸೇವೆ ನೀಡಲು ಸಾಧ್ಯ?
ಸರಕಾರಿ ವ್ಯವಸ್ಥೆ  ರೋಗಿಗಳಿಗೆ  ವ್ಯವಸ್ಥೆ ಮಾಡಲಾಗದೇ ಖಾಸಗಿ ವೈದ್ಯರ ಕಡೆಗೆ ಬೊಟ್ಟು ತೊರಿಸಲಾಗುತ್ತಿದೆ.
ಕೊರೊನಾ ಮಹಾಮಾರಿ ಭಾರತಕ್ಕೆ ಬಂದಿದ್ದು ಹೌದು. ಆದರೆ ವಿಶ್ವ ಆರೋಗ್ಯ ಸಂಸ್ಥೆ, ICMR  ಸಂಸ್ಥೆಗಳು ವಿದೇಶಿ ವ್ಯವಸ್ಥೆಗೆ ಇರುವ ನಿಯಮಾವಳಿ ಕಟ್ಟಳೆಗಳನ್ನು ಭಾರತದಲ್ಲಿ ಹೇಳಲು ಪ್ರಯತ್ನ ಮಾಡುತ್ತಿದೆ.
ಇದೇ ರೀತಿ ಮುಂದುವರಿದಲ್ಲಿ ಮುಂದಿನ ಒಂದು ತಿಂಗಳೊಳಗೆ ಐವತ್ತು ಸಾವಿರ ಜನಸಂಖ್ಯೆ ಇರುವ ಚಿಕ್ಕ ಪಟ್ಟಣಗಳಲ್ಲಿ ಯಾವುದೇ ಖಾಸಗಿ ವೈದ್ಯರು ರೋಗಿಗಳನ್ನು ಪರೀಕ್ಷಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ, ಯಾಕೆಂದರೆ ಅಷ್ಟರಲ್ಲಿ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕೊರಂಟೈನ್ ಸೂಚಿಸಲಾಗಿರುತ್ತದೆ.
ಆಗ ರೋಗಿಗಳನ್ನು ಕಾಪಾಡುವವರು ಯಾರು ಎನ್ನುವುದನ್ನು ನಿಮ್ಮ ನಿಮ್ಮ ವಿಚಾರಕ್ಕೆ ಬಿಡುತ್ತಿದ್ದೇನೆ
ಹಾಗಾಗಿ ಭಾರತದ ಪರಿಸ್ಥಿತಿಗೆ ಅನುಕೂಲವಾಗುವಂತಹ ಅತಿ ಅವಶ್ಯ ಇರುವಂತಹ ನಿಯಮಾವಳಿಗಳು ಕಟ್ಟಳೆಗಳನ್ನು ಸೂಚಿಸುವುದು ಹಾಗೂ ಅನುಸರಿಸುವ ಅವಶ್ಯಕತೆ ಇದೆ.
 ಇವತ್ತಿನ ಪರಿಸ್ಥಿತಿಗೆ ಬಗ್ಗೆ ಸ್ವದೇಶಿ  ಜಪ ಮಾಡುವ ಸರಕಾರ ಭಾರತೀಯ ಪರಿಸ್ಥಿತಿಗೆ ಅನುಸಾರವಾಗಿ ಯೋಚಿಸುವ, ಸೂಚಿಸುವ ಅವಶ್ಯಕತೆ ಇದೆ.
(ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರೊಬ್ಬರ ಮನೋಗಥ)
(ಇದಕ್ಕೆ ಪ್ರತಿಕ್ರಿಯೆ ನೀಡಬಹುದು – [email protected], Watsapp – 8197712235)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button