ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಭೀತಿ ಇದೀಗ ಬೆಂಗಳೂರಿಗೂ ಆವರಿಸಿದೆ. ಸೋಂಕು ಪೀಡಿತ ಹೈದರಾಬಾದ್‌ನ 24 ವರ್ಷದ ವ್ಯಕ್ತಿ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹೈದ್ರಾಬಾದ್ ಮೂಲದ ಟೆಕ್ಕಿಯಾಗಿರುವ ವ್ಯಕ್ತಿ ದುಬೈನಿಂದ ಬಂದಿದ್ದು, ಎರಡು ದಿನ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಬಳಿಕ ಹೈದರಾಬಾದ್ ಗೆ ತೆರಳಿದ್ದಾರೆ. ಇಲ್ಲಿಂದ ಹೋದ ಬಳಿಕ ಕೊರೊನಾ ಲಕ್ಷಣಗಳು ವ್ಯಕ್ತಿಯಲ್ಲಿ ಕಾಣಿಸಿದ್ದವು. ಹೀಗಾಗಿ ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಈ ವೇಳೆ ಪರೀಕ್ಷೆಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ. ಆದರೆ ಈ ವ್ಯಕ್ತಿ ಏರ್ಪೊರ್ಟಿಗೆ ಬರುವ ವೇಳೆ ಆತನಿಗೆ ರೋಗದ ಯಾವುದೇ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಇರಲಿಲ್ಲ. ಹಾಗಾಗಿ, ಏರ್ಪೋರ್ಟ್ ಸ್ಕ್ರೀನಿಂಗ್ ವೇಳೆ ಆತನ ಆರೋಗ್ಯದ ಮೇಲೆ ಅನುಮಾನ ಹುಟ್ಟಲಿಲ್ಲ. ಜ್ವರ ಹಿನ್ನಲೆಯಲ್ಲಿ ಫೆ.20ರಂದು ವ್ಯಕ್ತಿ ಸಿಕಂದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸೋಂಕು ಪತ್ತೆಯಾಗಿದೆ.
ಇವರ ಸಂಪರ್ಕಕ್ಕೆ ಬಂದಿದ್ದ ಜನರನ್ನು ಗುರುತಿಸುವ ಮತ್ತು ಅವರನ್ನು ಐಸೋಲೇಷನ್ ವಾರ್ಡ್‌ಗಳಿಗೆ ಶಿಫ್ಟ್ ಮಾಡುವ ಕೆಲಸದಲ್ಲಿ ತೆಲಂಗಾಣ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಇವರು ಸಿಕಂದರಾಬಾದ್‌ನ ಅವಿಭಕ್ತ ಕುಟುಂಬಕ್ಕೆ ಸೇರಿದ್ದು, ಕುಟುಂಬಸ್ಥರು, ಬಸ್‌ನಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸಿದ್ದ 27 ಪ್ರಯಾಣಿಕರು, ಸಿಕಂದರಾಬಾದ್‌ನ ಅಪೋಲೋ ಆಸ್ಪತ್ರೆಯ 20 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ವ್ಯಕ್ತಿ ಕೆಲಸ ಮಾಡಿದ್ದ ಬೆಂಗಳೂರಿನ ಕಂಪನಿಗೆ ಮಾಹಿತಿ ನೀಡಲಾಗಿದ್ದು, ನಿಗಾ ವಹಿಸುವಂತೆ ಎಚ್ಚರಿಸಲಾಗಿದೆ. ಇದೇ ವೇಳೆ ಟೆಕ್ಕಿಯಿಂದಲೇ ಮಾಹಿತಿ ಸಂಗ್ರಹಿಸಿ ಆತನ ಸಂಪರ್ಕಕ್ಕೆ ಬಂದಿರುವವರನ್ನು ಹುಡುಕಿ ಜನರೊಂದಿಗೆ ಸೇರುವುದನ್ನು ತಪ್ಪಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಟೆಕ್ಕಿ ಬೆಂಗಳೂರಿನಲ್ಲಿಯೂ ಓಡಾಡಿರುವುದಲ್ಲದೆ, ಅಲ್ಲಿನ ಜನರೊಂದಿಗೆ ಸಂಪರ್ಕ ಬೆಳೆಸಿದ್ದಾರೆ. ಈ ಬಗ್ಗೆ ಕರ್ನಾಟಕ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ