ವಿಧಾನ ಪರಿಷತ್ ಚುನಾವಣೆ-2022
ಪಶ್ಚಿಮ ಶಿಕ್ಷಕರ ಕ್ಷೇತ್ರ-ಬಸವರಾಜ ಹೊರಟ್ಟಿ; ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ; ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಗೆಲುವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರ ಮತ್ತು ಕರ್ನಾಟಕ ಪಶ್ಚಿಮ ಮತಕ್ಷೇತ್ರಗಳ ಚುನಾವಣೆಯ ಫಲಿತಾಶ ಪ್ರಕಟಗೊಂಡಿದ್ದು, ಈ ಎರಡು ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತಲಾ ಒಂದು ಸ್ಥಾನ ಗಳಿಸಿವೆ. ವಾಯವ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಮುಕ್ತಾಯದ ಹಂತದಲ್ಲಿದ್ದು, ಹನುಮಂತ ನಿರಾಣಿ ನಿರಾಯಾಸ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ.
ಅದೇ ರೀತಿ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ್ ಹುಕ್ಕೇರಿ ಅವರು ಗೆಲುವು ಸಾಧಿಸಿದ್ದಾರೆ.
ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರದ ವಿವರ:
ಕರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ ಹುಕ್ಕೇರಿ ಅವರು 11,460 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ ಅವರು 6,405 ಮತಗಳನ್ನು ಪಡೆದುಕೊಂಡಿದ್ದಾರೆ.
ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 21,402 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 1,270 ಮತಗಳು ಅಸಿಂಧುವಾಗಿವೆ ಮತ್ತು 20,132 ಸಿಂಧು ಮತಗಳಿದ್ದವು.
ಅಭ್ಯರ್ಥಿ ಗೆಲುವಿಗೆ 10,067 ಮತಗಳ ಕೋಟಾ ನಿಗದಿಪಡಿಸಲಾಗಿತ್ತು.
ಅಭ್ಯರ್ಥಿಗಳು ಪಡೆದ ಮತಗಳ ವಿವರ:
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪ್ರಕಾಶ ಹುಕ್ಕೇರಿ, 11460 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅರುಣ ಶಹಾಪೂರ ಅವರು 6405 ಮತಗಳನ್ನು ಪಡೆದಿದ್ದಾರೆ.
ಜೆಡಿಎಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಲೋಣಿ 544 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಪ್ಪಾಸಾಹೇಬ ಕುರಣೆ- 9, ಚಂದ್ರಶೇಖರ ಗುಡಸೆ- 101, ದೇಸಾಯಿ ಜಯಪಾಲ ರಾಜಾರಾಮ- 10, ಬನ್ನೂರು ಎನ್. ಬಿ -1009, ಬಸಪ್ಪ ಮಣಿಗಾರ -39, ಶ್ರೀಕಾಂತ ಪಾಟೀಲ- 19, ಶ್ರೀನಿವಾಸಗೌಡ ಗೌಡರ- 524, ಶ್ರೇನಿಕ್ ಅಣ್ಣಾಸಾಹೇಬ್ ಜಂಗಟೆ -8 ಹಾಗೂ ಚಿಕ್ಕನರಗುಂದ ಸಂಗಮೇಶ- 4 ಮತಗಳನ್ನು ಪಡೆದಿದ್ದಾರೆ.
ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ವಿವರ:
ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಅವರು 9266 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಸವರಾಜ ಗುರಿಕಾರ ಅವರು 4597 ಮತಗಳನ್ನು ಪಡೆದುಕೊಂಡರು.
ಒಟ್ಟು 15,583 ಮತಗಳು ಚಲಾವಣೆಗೊಂಡಿದ್ದು, ಅದರಲ್ಲಿ 1,223 ಮತಗಳು ಅಸಿಂಧುವಾಗಿವೆ ಮತ್ತು 14,360 ಸಿಂಧು ಮತಗಳಿದ್ದವು. ಗೆಲುವಿನ ಕೋಟಾ 7,181 ನಿಗದಿಪಡಿಸಲಾಗಿತ್ತು.
ಅಭ್ಯರ್ಥಿಗಳು ಪಡೆದ ಮತಗಳ ವಿವರ:
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ 9,266; ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಸವರಾಜ ಗುರಿಕಾರ 4,597; ಶ್ರೀಶೈಲ ಗಡದನ್ನಿ-273; ಎಂ. ಪಿ ಕರಬಸಪ್ಪ -60; ಕೃಷ್ಣವಾಣಿ- 58; ಪ್ರೊ.ಎಫ್.ವಿ ಕಲ್ಲನ ಗೌಡರ- 27 ಹಾಗೂ ವೆಂಕನಗೌಡ ರಂಗನಗೌಡ ಗೋವಿಂದಗೌಡರ ಅವರು 79 ಮತಗಳನ್ನು ಪಡೆದಿದ್ದಾರೆ.
ವಾಯವ್ಯ ಪದವೀಧರ ಕ್ಷೇತ್ರ –
ಬಿಜೆಪಿಯ ಹನುಮಂತ ನಿರಾಣಿ 44,815 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸುನೀಲ ಸಂಕ ಅವರು 10,122 ಮತಗಳನ್ನು ಪಡೆದಿದ್ದಾರೆ. 3ನೇ ಸ್ಥಾನದಲ್ಲಿರುವ ದೀಪಿಕಾ ಎಸ್ 453 ಮತ ಪಡೆದಿದ್ದಾರೆ. ಜಿ.ಸಿ.ಪಾಟೀಲ 194, ಯಲ್ಲಪ್ಪ ಮಹಾದೇವಪ್ಪ ಕಲಕುತ್ರಿ 221 ಮತ, ಆದರ್ಶ ಕುಮಾರ ಸಿದ್ದಯ್ಯ ಪೂಜಾರಿ 370, ಗಟಿಗೆಪ್ಪ ಮಲ್ಲಪ್ಪ ಮಗದುಂ 68, ಬಜಂತ್ರಿ ನಿಂಗಪ್ಪ ಮಾರುತಿ 167, ಬಾಗಿ ಭೀಮಸೇನ್ ಬಾಳಪ್ಪ 168, ಸುಭಾಷ್ ರಂಗಪ್ಪ ಕೋಟೆಕಲ್ 166 ಹಾಗೂ ಆರ್ ಆರ್ ಪಾಟೀಲ 172 ಮತಗಳನ್ನು ಪಡೆದಿದ್ದಾರೆ.
ಮೂರೂ ಮತಕ್ಷೇತ್ರಗಳ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದಲ್ಲಿ ಬೆಳಗಾವಿ ವಿಭಾಗದ ಏಳೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಪೊಲೀಸ್ ಬಂದೋಬಸ್ತ್ ನೇತೃತ್ವ ವಹಿಸಿದ್ದರು.
ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ವಿಜೇತ ಅಭ್ಯರ್ಥಿಯಾಗಿರುವ ಬಿಜೆಪಿಯ ಬಸವರಾಜ ಹೊರಟ್ಟಿ ಅವರಿಗೆ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಪ್ರಮಾಣಪತ್ರವನ್ನು ವಿತರಿಸಿದರು.
ಗೆಲುವಿನ ನಗೆ ಬೀರಿದ ಪ್ರಕಾಶ ಹುಕ್ಕೇರಿ
ಹೊರಟ್ಟಿ ಗೆಲುವು ಬಹುತೇಕ ಖಚಿತ: ಅಧಿಕೃತ ಘೋಷಣೆ ಬಾಕಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ