ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಾಳಯದ ಸಂಭ್ರಮ ಮನೆಮಾಡಿದೆ. ಇಡೀ ಬೆಳಗಾವಿ ಕಾಂಗ್ರೆಸ್ ಮಯವಾಗಿದ್ದು, ಅಗ್ರಗಣ್ಯ ನಾಯಕರು ಕುಂದಾನಗರಿಗೆ ದೌಡಾಯಿಸುತ್ತಿದ್ದಾರೆ.
ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಎಐಸಿಸಿಯು ನೂರರ ನೆನಪನ್ನು ಸಂಭ್ರಮದಿಂದ ಆಚರಿಸುತ್ತಿದೆ. ಕುಂದಾನಗರಿ ಬೆಳಗಾವಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದು ಎರಡು ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈಗಾಗಲೆ ಹಲವು ನಾಯಕರು ಆಗಮಿಸಿದ್ದು, ಮಧ್ಯಾಹ್ನದ ವೇಳೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸೇರಿದಂತೆ ಹಲವಾರು ನಾಯಕರು ಕಾಂಗ್ರೆಸ್ ಕಾರ್ಯಕಾರಾಣಿ ಸಭೆಯಲ್ಲಿ ಭಾಗಿಯಾಗಲು ಪ್ರಮುಖ ನಾಯಕರು ಬೆಳಗಾವಿ ಜಿಲ್ಲೆಗೆ ಬಂದಿಳಿಯಲಿದ್ದಾರೆ.
ಇವತ್ತು ಮಧ್ಯಾಹ್ನ 3 ಗಂಟೆಗೆ ಸಿಬ್ಬುಸಿ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ದೇಶಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಇದ ಬಗ್ಗೆ ಈ ಸಭೆಯಲ್ಲಿ ಚಿಂತನ ಮಂಥನ ನಡೆಯಲಿದೆ.
ಶುಕ್ರವಾರ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಾರ್ವಜನಿಕ ಸಮಾವೇಶ ನಡೆಯಲಿದೆ. ಅದಕ್ಕೂ ಮೊದಲು ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮವೂ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ.
ಇನ್ನು, ರಾಜಸ್ಥಾನ ಮಾಜಿ ಡಿಸಿಎಂ ಸಚಿನ್ ಪೈಲೆಟ್ ಇದೊಂದು ಐತಿಹಾಸಿಕ ಕಾರ್ಯಕರ್ಮವಾಗಿದ್ದು, ದೇಶಕ್ಕೆ ದೊಡ್ಡ ಸಂದೇಶ ಸಾರಲಾಗುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ಕೈ ನಾಯಕಿ ಸೌಮ್ಯ ರೆಡ್ಡಿ ಮಾತನಾಡಿ, ಮಹಿಳೆಯರ ಪರವಾಗಿರೋದು ಕಾಂಗ್ರೆಸ್ ಪಕ್ಷ. ಹೆಣ್ಣುಮಕ್ಕಳಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಈ ಕಾರ್ಯಕ್ರಮ ಇತಿಹಾಸ ಪುಟ ಸೇರಲಿದೆ ಎಂದು ಬಣ್ಣಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ