ಆಕ್ಸಿಜನ್, ಬೆಡ್, ಅಗತ್ಯ ಔಷಧಿಗಳ ಪೂರ್ವಸಿದ್ಧತೆ ಮಾಡಿಕೊಳ್ಳಿ – ಬೆಳಗಾವಿ ಜಿಲ್ಲಾಧಿಕಾರಿ ಆದೇಶ
ಕೋವಿಡ್-೧೯ ನಿಯಂತ್ರಣ: ವಿವಿಧ ಕಾರ್ಯತಂಡಗಳ ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯಲ್ಲಿ ಕೋವಿಡ್-೧೯ ರೂಪಾಂತರ ಓಮಿಕ್ರಾನ್ ವೈರಸ್ ಹೆಚ್ಚಾಗುತ್ತಿದ್ದು, ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್, ಬೆಡ್, ಅಗತ್ಯ ಔಷಧಿಗಳ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಬೆಡ್, ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಜ.೭) ಕೋವಿಡ್-೧೯ ನಿಯಂತ್ರಣಕ್ಕಾಗಿ ನಿಯೋಜಿಸಿದ ವಿವಿಧ ಕಾರ್ಯತಂಡಗಳ ಪೂರ್ವ ಸಿದ್ಧತೆ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್-೧೯ ರೂಪಾಂತರ ವೈರಾಣು ರಾಜ್ಯದ ಎಲ್ಲೆಡೆ ವೇಗವಾಗಿ ಹರಡುತ್ತಿದ್ದು, ಗಡಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆ ಆಗುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಗೋವಾ, ಮಹಾರಾಷ್ಟ್ರ ಹಾಗೂ ಕೇರಳದಿಂದ ಬಂದ ಪ್ರಯಾಣಿಕರನ್ನು ಕಡ್ಡಾಯವಾಗಿ ಟೆಸ್ಟ್ ಗೆ ಒಳಪಡಿಸಿ, ಕ್ವಾರಂಟೈನ್ ಉಳಿದುಕೊಳ್ಳಲು ಸೂಚನೆ ನೀಡಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಈಗಾಗಲೇ ಕೋವಿಡ್ ನಿರ್ವಹಣಾ ತಂಡಗಳಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿಕೊಳ್ಳಲು ತಿಳಿಸಬೇಕು. ಗ್ರಾಮೀಣ ಭಾಗದಲ್ಲಿ ಹೋಮ್ ಐಸೋಲೇಶನ್ ಸಿದ್ಧತೆ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ ೫೫ ಪ್ರಕರಣಗಳು ದಾಖಲಾಗಿದ್ದು, ಕ್ರಮೇಣ ಹೆಚ್ಚುವ ಸಾಧ್ಯತೆಯಿದೆ ಹಾಗಾಗಿ ಹೆಚ್ಚು ಭಕ್ತಾದಿಗಳು ದರ್ಶನಕ್ಕೆ ಬರುವ ಜಿಲ್ಲೆಯ ಪ್ರಮುಖ ದೇವಸ್ಥಾನಗಳ ಪ್ರವೇಶ ನಿಬಂಧಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ೫೦% ರಷ್ಟು ಬೆಡ್ ಗಳ ವ್ಯವಸ್ಥೆ:
ಸರ್ಕಾರದ ಆದೇಶದಂತೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ೫೦% ರಷ್ಟು ಬೆಡ್ ಗಳ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಐಎಂಓ ಪದಾಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ಸಿಇಓ ಗಳ ಸಭೆ ಕರೆದು ಸರ್ಕಾರದ ಆದೇಶದ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಯಾವುದೇ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆ ಆಗದಂತೆ ಎಲ್ಲ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು. ಕೋವಿಡ್-೧೯, ಓಮಿಕ್ರಾನ್ ವೈರಸ್ ಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸಾಕಷ್ಟು ಮುತುವರ್ಜಿ ವಹಿಸಿಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮರ್ಪಕ ಆಕ್ಸಿಜನ್ ಪೂರೈಕೆಗೆ ಸಿದ್ಧತೆ:
ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಈಗಾಗಲೇ ೫ ತಾಲೂಕುಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲಾಗಿದೆ. ಆಕ್ಸಿಜನ್ ಘಟಕಗಳಲ್ಲಿ ಡ್ರೈ ರನ್ ಮಾಡಲು ಸೂಚನೆ ನೀಡಲಾಗಿದ್ದು, ಅಧಿಕಾರಿಗಳು ಈ ಕುರಿತು ಭೇಟಿ ನೀಡಿ ಆಕ್ಸಿಜನ್ ಘಟಕಗಳನ್ನು ಪರಿಶೀಲಿಸಬೇಕು.
ಕೋವಿಡ್ ಮೊದಲ ಹಾಗೂ ೨ನೇ ಅಲೆಯಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಅಧಿಕಾರಿಗಳ ಕಾರ್ಯವೈಖರಿ ಶ್ಲಾಘನೀಯ ಎಂದು ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ೩ನೇ ಅಲೆಯ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ಮಟ್ಟದ ಸಹಕಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.
ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಸ್ಥಳೀಯ ಹಾಸ್ಟೆಲ್ ಗಳನ್ನ ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಮಿತ್ರ ಆಪ್ ಮೂಲಕ ನೋಂದಣ ಮಾಡಿಕೊಂಡು, ಕೋವಿಡ್, ಓಮಿಕ್ರಾನ್ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಅವರಿಗೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕು. ಎ.ಬಿ.ಆರ್.ಕೆ ಅಪ್ರೋವಲ್ ನಂತರ ಎಲ್ಲ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಯೋಜನೆ ಮೂಲಕ ಉಚಿತ ಸೇವೆ ಒದಗಿಸಬೇಕು. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಆಗದಂತೆ ತಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ದುಡಗುಂಟಿ ತಿಳಿಸಿದರು.
ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶಶಿಕಾಂತ ಮುನ್ಯಾಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ವರವಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಒಂದೇ ದಿನ ಶತಕ ದಾಟಿತು ಕೊರೋನಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ