Latest

ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊವಿಡ್ ಉಪಕರಣ ಖರೀದಿಯಲ್ಲಿ ತಾವು ಈ ಹಿಂದೆ ಮಾಡಿದ್ದ ಆರೋಪಕ್ಕಿಂತಲೂ ಇನ್ನೂ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ್ದು, ದಾಖಲೆ ಪ್ರಕಾರ ಬೇರೆ ಬೇರೆ ಇಲಾಖೆಗಳಿಂದ ಕೊರೋನಾಗಾಗಿ ಒಟ್ಟು 4,167 ಕೋಟಿ ರೂ ಖರ್ಚಾಗಿದೆ ಅದರಲ್ಲಿ ಸುಮಾರು 2000 ಕೋಟಿ ಅವ್ಯವಹಾರ ನಡೆದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೊರೋನಾ ನಿಯಂತ್ರಣಕ್ಕಾಗಿ ಒಟ್ಟು 4,167 ಕೋಟಿ ರೂ ಖರ್ಚಾಗಿದೆ ಎಂಬ ಬಗ್ಗೆ ಮಾಹಿತಿ ಇದೆ. ಆದರೆ, ಆರೋಗ್ಯ ಸಚಿವ ಶ್ರೀರಾಮುಲು 324 ಕೋಟಿ ರೂ ಖರ್ಚಾಗಿದೆ ಎನ್ನುತ್ತಾರೆ. ಡಿಸಿಎಂ ಅಶ್ವತ್ಥ ನಾರಾಯಣ ಅವರು ಬೇರೆ ಲೆಕ್ಕ ಹೇಳುತ್ತಾರೆ. ಇಲ್ಲಿ ಸುಳ್ಳು ಹೇಳುತ್ತಿರೋದು ಯಾರು? ಇಲ್ಲಿ ಕನಿಷ್ಠ 2 ಸಾವಿರ ಕೋಟಿ ರೂ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದ್ದಾರೆ.

ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ಆಗಿದೆ ಎಂದು ಬಲವಾಗಿ ಆರೋಪಿಸಿದ ಸಿದ್ದರಾಮಯ್ಯ ಅದಕ್ಕೆ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ಒಂದು ವೆಂಟಿಲೇಟರ್​ಗೆ 4 ಲಕ್ಷ ರೂನಂತೆ ಕೇಂದ್ರ ಸರ್ಕಾರ ಖರೀದಿ ಮಾಡಿದೆ. ತಮಿಳುನಾಡು 4.78 ಲಕ್ಷ ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ಆದರೆ ರಾಜ್ಯ ಸರ್ಕಾರ ಮಾರ್ಚ್ 22ರಂದು 5.6 ಲಕ್ಷ ರೂನಂತೆ ವೆಂಟಿಲೇಟರ್ ಖರೀದಿ ಮಾಡಿದೆ. ಅದಾದ ಬಳಿಕ ಮತ್ತೊಂದು ಬಾರಿ 12.32 ಲಕ್ಷ ರೂನಂತೆ ಖರೀದಿ ಮಾಡಿದೆ. ಏಪ್ರಿಲ್ 23ರಂದು 18.23 ಲಕ್ಷದಂತೆ ವೆಂಟಿಲೇಟರ್ ಖರೀದಿ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

ಪಿಪಿಇ ಕಿಟ್ ಖರೀದಿ ವಿಚಾರದಲ್ಲೂ ರಾಜ್ಯ ಸರ್ಕಾರ ವ್ಯಾಪಕ ಅವ್ಯವಹಾರ ನಡೆಸಿದೆ. ಒಂದು ಪಿಪಿಇ ಕಿಟ್​ಗೆ ಮಾರುಕಟ್ಟೆಯಲ್ಲಿ 330 ರೂ ಇದೆ. ಆದರೆ, ರಾಜ್ಯ ಸರ್ಕಾರ ಚೀನಾದ ಪಿಪಿಇ ಕಿಟ್​ಗಳನ್ನ 2,117 ರೂ ಕೊಟ್ಟು ಖರೀದಿ ಮಾಡಿದೆ. ಇವೆಲ್ಲವೂ ಕಳಪೆ ಗುಣಮಟ್ಟದ್ದೆಂದು ವೈದ್ಯರೇ ಅಸಮಾಧಾನಗೊಂಡಿದ್ದಾರೆ. ಸರ್ಕಾರ ದುಬಾರಿ ಬೆಲೆ ತೆತ್ತು ಕಳಪೆ ಪಿಪಿಇ ಕಿಟ್ ಖರೀದಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೆಡಿಕಲ್ ಕಿಟ್ ಖರೀದಿ ವಿಚಾರದಲ್ಲಿ ನಡೆದಿರುವ ಹಗರಣದ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button