ಶ್ರೀಶೈಲಂನಲ್ಲಿ ಕನ್ನಡಿಗ ಭಕ್ತರು ಸಾವನ್ನಪ್ಪಿಲ್ಲ, ವದಂತಿಗಳನ್ನು ನಂಬಬೇಡಿ: ಕರ್ನೂಲ್ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ನೀಡಿರುವ ನಿಖರ ಮಾಹಿತಿ ಇಲ್ಲಿದೆ

ಪ್ರಗತಿವಾಹಿನಿ ಸುದ್ದಿ; ಕರ್ನೂಲ್: ಆಂಧ್ರದ ಶ್ರೀಶೈಲಂನಲ್ಲಿ ನಡೆದ ಗಲಭೆಯಲ್ಲಿ ಕನ್ನಡಿಗರು ಯಾರೂ ಮೃತಪಟ್ಟಿಲ್ಲ. ಇಬ್ಬರಿಗೆ ಗಾಯವಾಗಿದ್ದು ಅವರ ಆರೈಕೆ ನಡೆಯುತ್ತಿದೆ. ಕನ್ನಡಿಗರಿಗೆ ಎಲ್ಲ ರೀತಿಯ ಸುರಕ್ಷತೆ ಒದಗಿಸಲಾಗಿದೆ ಎಂದು ಕರ್ನೂಲ್ ಎಸ್. ಪಿ. ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಶ್ರೀಶೈಲಂ ಕರ್ನೂಲ್ ಜಿಲ್ಲೆಯ ವ್ಯಾಪ್ತಿಗೆ ಬರುತ್ತಿದ್ದು, ಗಲಭೆ ನಿಯಂತ್ರಣ ಮತ್ತು ಭಕ್ತರ ಸುರಕ್ಷತೆಗಾಗಿ ತನ್ನನ್ನು ನಿಯೋಜಿಸಲಾಗಿದ್ದು ಭಕ್ತರಿಗೆ ಬೇರಾವುದೇ ತೊಂದರೆಯಾಗಿಲ್ಲ. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವದಂತಿಗಳನ್ನು ನಂಬಬೇಡಿ
ಕರ್ನಾಟಕದಿಂದ ತೆರಳಿದ್ದ ಭಕ್ತರ ಪೈಕಿ ಓರ್ವ ಮೃತಪಟ್ಟಿದ್ದಾರೆಂದು ವದಂತಿ ಹಬ್ಬುತ್ತಿದೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಸುಧೀರ್‍ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದ ಬೀಳಗಿಯ ಶ್ರೀಶೈಲ ವಾಲಿಮಠ ಎಂಬ ಯಾತ್ರಿ ಮೃತಪಟ್ಟಿದ್ದಾಗಿ ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ. ಆದರೆ ಶ್ರೀ ಶೈಲ ವಾಲೀಮಠ ಅವರ ತಲೆಗೆ ಗಾಯವಾಗಿದ್ದು ಅವರಿಗೆ ನ್ಯೂರೊ ಸರ್ಜನ್‍ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.
ಅಲ್ಲದೆ ಹುನುಗುಂದ ತಾಲೂಕಿನ ಅಮಿನಗರದ ಗೋಪಾಲ ರುದ್ರಪ್ಪ ಅವರಿಗೆ ಗಾಯವಾಗಿದ್ದು ಅವರು ಈಗ ಸಂಪೂರ್ಣ ಚೇತಿರಿಸಿಕೊಂಡಿದ್ದಾರೆ. ಗೋಪಾಲ ಅವರನ್ನು ಶುಕ್ರವಾರ ಡಿಸ್ಚಾರ್ಜ್ ಮಾಡಲಾಗುತ್ತಿದೆ ಎಂದು ಎಸ್‍ಪಿ ವಿವರಿಸಿದ್ದಾರೆ.
ಆಂಧ್ರಪ್ರದೇಶ ಸರಕಾರ ಮತ್ತು ಡಿಜಿಪಿ ಆಂಧ್ರ ಪ್ರದೇಶ ಅವರು ಶ್ರೀಶೈಲಂನಲ್ಲಿ ಉಂಟಾಗಿದ್ದ ಸಂಘರ್ಷವನ್ನು ನಿಯಂತ್ರಿಸಿ ಭಕ್ತರಿಗೆ ಸುರಕ್ಷತೆ ಒದಗಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ತನಗೆ ವಹಿಸಿದ್ದು ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಗಾಯಾಳುಗಳ ಫೋಟೋವನ್ನೂ ಸಹ ಅವರು ಹಂಚಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸಿದ್ದರು
ಪ್ರಸ್ತುತ ಕರ್ನೂಲ್ ಎಸ್‍ಪಿ ಆಗಿದ್ದು ಶ್ರೀಶೈಲಂನಲ್ಲಿ ಉಂಟಾಗಿದ್ದ ಗಲಾಟೆಯ ನಿಯಂತ್ರಣದ ಜವಾಬ್ದಾರಿ ವಹಿಸಿಕೊಂಡಿರುವ ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿ 2018-19ರ ಸಾಲಿನಲ್ಲಿ ಬೆಳಗಾವಿ ಎಸ್‍ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡಿಗರ ಸಂಪರ್ಕ ಹೆಚ್ಚಿರುವ ಅವರು ಕನ್ನಡಿಗರಿಗೆ ತೊಂದರೆಯಾಗದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ವಿಶ್ವಾಸವನ್ನು ಕರ್ನಾಟಕದ ಭಕ್ತರು ವ್ಯಕ್ತಪಡಿಸಿದ್ದಾರೆ.
ಸುಧೀರ್ ಕುಮಾರ ರಡ್ಡಿ ಕಳಿಸಿರುವ ಸಂದೇಶ ಇಲ್ಲಿದೆ –
ಶ್ರೀಶೈಲಂ ನಲ್ಲಿ ಸಂಘರ್ಷ; ನೂರಾರು ವಾಹನಗಳು ಜಖಂ; ಪರಿಸ್ಥಿತಿ ಉದ್ವಿಗ್ನ