ಪ್ರಗತಿವಾಹಿನಿ ಸುದ್ದಿ; ಹಾವೇರಿ: ಜಿಲ್ಲೆಯಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವ ಕುರಿತು ತಪಾಸಣೆ ನಡೆಸಿ ವರದಿ ನೀಡಲು ವೈದ್ಯರು ಮತ್ತು ಪರಿಣಿತರ ವಿಶೇಷ ತಂಡ ಈ ವಾರದಲ್ಲಿ ಹಾವೇರಿಗೆ ಬರಲಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ತಂಡ ಕಳುಹಿಸಿಕೊಡುವ ಸಂಬಂಧ ಈಗಾಗಲೇ ಆರೋಗ್ಯ ಸಚಿವರಿಗೆ ಪತ್ರವನ್ನು ಬರೆದಿದ್ದೇನೆ ಹಾಗೂ ಮೌಖಿಕವಾಗಿಯೂ ಮನವಿ ಮಾಡಿದ್ದೇನೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಪೋಸಿಟಿವಿಟಿ ರೇಟ್ ಶೇ.5 ಕ್ಕಿಂತ ಕಡಿಮೆಯಾಗಿದೆ. ಆರ್ ಟಿ ಪಿ ಸಿ ಆರ್ ಟೆಸ್ಟ್ ಸಂಖ್ಯೆ ಹೆಚ್ಚು ಮಾಡಿದ್ದೇವೆ. ಆದರೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚು ಇದೆ. ಈ ಹಿನ್ನೆಲೆಯಲ್ಲಿ ವೈದ್ಯರ ಮತ್ತು ಪರಿಣಿತರ ವಿಶೇಷ ತಂಡವನ್ನು ಹಾವೇರಿಗೆ ಕಳುಹಿಸಿಕೊಡಬೇಕು. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವು ಏಕೆ ಆಗ್ತಾಯಿದೆ? ಏನೆಲ್ಲ ಕಾರಣ ? ಸಾವುಗಳ ಸಂಖೆಯ ಕುರಿತು ಆಡಿಟ್ ಮಾಡಬೇಕು. ಮುಂದಿನ ದಿನಗಳಲ್ಲಿ ಸಾವುಗಳು ಸಂಭವಿಸದಂತೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು? ಏನೆಲ್ಲ ಸೂಚನೆಗಳನ್ನು ನೀಡಬೇಕು ಎಂಬುದರ ಕುರಿತು ಹಾವೇರಿ ಗೆ ಬಂದು ಇಲ್ಲಿನ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಬೇಕೆಂದು ಆರೋಗ್ಯ ಸಚಿವರಿಗೆ ಕೋರಿದ್ದೇನೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಈ ವಾರದಲ್ಲಿ ಆ ವಿಶೇಷ ತಂಡ ಹಾವೇರಿಗೆ ಬರಲಿದೆ. ಎಲ್ಲರ ಜೊತೆಗೆ ಮಾತನಾಡಿ ದಾಖಲೆಗಳನ್ನು ಚೆಕ್ ಮಾಡಿ ಅದರ ಆಧಾರದ ಮೇಲೆ ವರದಿಯನ್ನು ನೀಡುತ್ತದೆ. ವರದಿಯ ಶಿಫಾರಸುಗಳನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಸಚಿವ ಬೊಮ್ಮಾಯಿ ವಿವರಿಸಿದರು.
ನಾಯಕತ್ವ ಬದಲಾವಣೆ ಚರ್ಚೆ ಸರ್ಕಾರದ ಇಮೇಜಿಗೆ ಧಕ್ಕೆ ಎಂದ ಶೆಟ್ಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ