ಜನವರಿ 25ರೊಳಗೆ ಕೋವಿಡ್ ಕೇಸ್ ಮತ್ತಷ್ಟು ಉತ್ತುಂಗಕ್ಕೆ; ಸರ್ಕಾರಕ್ಕೆ ತಜ್ಞರ ಎಚ್ಚರಿಕೆ : ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು, ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ವರ್ಚುವಲ್ ಸಭೆ ನಡೆಯಿತು.
ಸಭೆಯಲ್ಲಿ ರಾಜ್ಯದ ಕೊರೊನಾ ಸ್ಥಿತಿಗತಿ, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಪರಿಣಾಮ, ಕೊರ್ನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳು, ಜ.31ವರೆಗೆ ಈಗಿರುವ ನಿಯಮ ಮುಂದುವರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, 5-6 ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ಕಡಿಮೆಯಾಗಿದ್ದು, ಆ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಶುಕ್ರವಾರದವರೆಗೂ ರಾಜ್ಯಾದ್ಯಂತ ಈಗಿರುವ ನಿಯಮಗಳೇ ಯಥಾವತ್ತು ಮುಂದುವರೆಯಲಿದೆ. ಜ.21ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ಸಭೆ ಬಳಿಕ ಮತ್ತಷ್ಟು ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದರು.
ರಾಜ್ಯದಲ್ಲಿ ಜನವರಿ 25-26ರ ವೇಳೆಗೆ ಮೂರನೇ ಅಲೆ ಪೀಕ್ ಹಂತ ತಲುಪುವ ಸಾಧ್ಯತೆ ಇದೆ. ಆ ಬಳಿಕ ಕೋವಿಡ್ ಕೇಸ್ ಸಂಖ್ಯೆ ಕಡಿಮೆಯಾಗಬಹುದು ಎಂದು ತಜ್ಞರು ಸಭೆಯಲ್ಲಿ ಎಚ್ಚರಿಸಿದ್ದಾರೆ. ಆ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರದವರೆಗೆ ಪರಿಸ್ಥಿತಿ ಪರಿಶೀಲಿಸಿ ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇನ್ನ್ಉ ಶಾಲಾ-ಕಾಲೇಜುಗಳ ಬಗ್ಗೆಯೂ ಮುಂದಿನ ಸಭೆಯಲ್ಲೇ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಲಾಕ್ ಡೌನ್ ಮಾಡುವುದಿಲ್ಲ. ಹಾಗಂತ ಹೋಟೆಲ್, ಥಿಯೇಟರ್ ಅಥವಾ ಇನ್ಯಾರಿಗೋ ಸಹಾಯ ಮಾಡಲೆಂದು ನಿಯಮ ಸಡಿಸಲು ಸಾಧ್ಯವಿಲ್ಲ. ರಾಜ್ಯದ ಆರುವರೆ ಕೋಟಿ ಜನರ ಜನರ ಜೀವ, ಆರೋಗ್ಯ ಮುಖ್ಯ. ಪ್ರಾಣ ರಕ್ಷಣೆ ನಮ್ಮ ಗುರಿ. ಕೇಂದ್ರ ಸರ್ಕಾರ, ವಿಶ್ವಸಂಸ್ಥೆ ಹಾಗೂ ನಮ್ಮ ಕಾರ್ಯಪಡೆ ಸಮಿತಿ ಸದಸ್ಯರ ಶಿಫಾರಸು ಆಧರಿಸಿ ಆ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ದಿನಾಂಕ 17-1-2022ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ಕುರಿತ ಪರಿಶೀಲನಾ ಸಭೆಯ ಮುಖ್ಯಾಂಶಗಳು:
1. ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಕೊಡಲು ಸೂಚಿಸಲಾಯಿತು.. ಹೆಚ್ಚು ಸಿಬ್ಬಂದಿ ನಿಯೋಜಿಸಲು ಸೂಚಿಸಿದರು.
2. ಜನ ಟ್ರಯಾಜಿಂಗ್ ಗೆ ದಾಖಲಾಗುವುದನ್ನು ನಿಯಂತ್ರಿಸಲು ಸಲಹೆ ನೀಡಿದರು.
3. ಹೋಮ್ ಐಸೊಲೇಷನ್ ಕಾಲ್ಸ್ ಹೆಚ್ಚಿಸಲು ಸೂಚಿಸಲಾಯಿತು. ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು.
4. ಅಂತೆಯೆ ಮನೆಯವರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದರು.
5. ಔಷಧಿ ಕಿಟ್ ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸೂಚಿಸಿದರು.
6. ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆಯಲು ಸಲಹೆ ನೀಡಿದರು.
7. ಸ್ಥಳೀಯ ವೈದ್ಯರು ಕನ್ಸಲ್ಟೇಷನ್ ಮಾಡುವಂತಾಗಬೆಕು.
8. ಸೋಂಕಿತ ಮಕ್ಕಳ ಕುರಿತು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ಹೇಳಬೇಕು. ಔಷಧಿ ಕಿಟ್ ಗಳನ್ನು ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು.
9. ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು.
10. ಆಕ್ಸಿಜನ್ ಪ್ಲಾಂಟ್ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ.
11. ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
12. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸಬೇಕು.
13. ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
14. ಔಷಧಿಗಳನ್ನು ಕೂಡಲೇ ಒದಗಿಸಬೇಕು. ಅವುಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ವಹಿಸಲು ಸೂಚಿಸಿದರು.
15. ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.
16. ಭಾರತ ಸರ್ಕಾರದ ನಿಯಮಾವಳಿಗಳಂತೆ ಐ.ಸಿ.ಎಂ.ಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಲು ಅನುಸರಿಸಲು ಸೂಚಿಸಿದರು.
17 ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಲಾಯಿತು.
18. 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಸೂಚಿಸಲಾಯಿತು.
—
ಜನವರಿ 31ವರೆಗೆ 144ನೇ ಸೆಕ್ಷನ್ ವಿಸ್ತರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ