ಸ್ಮಾರ್ಟ್ ಸಿಟಿ ರಸ್ತೆಯಲ್ಲಿ 7 ಕಡೆ ಬಿರುಕು: ಡಾಂಬರ್ ಹೊಯ್ದು ಮುಚ್ಚಲು ಯತ್ನ -Pragativahini Exclusive
Pragativahini Exclusive
ಸ್ಮಾರ್ಟ್ ಸಿಟಿ ರಸ್ತೆಯಲ್ಲಿ 7 ಕಡೆ ಬಿರುಕು: ಟಾರ್ ಹೊಯ್ದು ಮುಚ್ಚಲು ಯತ್ನ
ಪುನರ್ ನಿರ್ಮಿಸಲು ಸೂಚನೆ: ಮತ್ತೆ 28 ದಿನ ಬಂದ್ ಆಗಲಿದೆ ಕಾಂಗ್ರೆಸ್ ರಸ್ತೆ
ಎಂ.ಕೆ.ಹೆಗಡೆ, ಬೆಳಗಾವಿ –
ಬೆಳಗಾವಿ ಸ್ಮಾರ್ಟಿ ಸಿಟಿ ಯೋಜನೆ ಯಾಕೋ ಬಾಲಗೃಹಪೀಡೆ ಹಾಗೂ ವಿವಾದಗಳಿಂದ ಮುಕ್ತವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಯೋಜನೆ ಘೋಷಣೆಯಾಗಿ ಹತ್ತಿರ ಹತ್ತಿರ ನಾಲ್ಕೂವರೆ ವರ್ಷವಾದರೂ ಇನ್ನೂ ನಾಲ್ಕು ಕೋಟಿ ರೂ. ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ನಡೆದ ಕಾಮಗಾರಿಯೂ ಸ್ಮಾರ್ಟ್ ಆಗುತ್ತಿಲ್ಲ.
ಸ್ಮಾರ್ಟ್ ಯೋಜನೆಯಲ್ಲಿ ಬೆಳಗಾವಿ ಆಯ್ಕೆಯಾದಾಗ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತಮ್ಮ ಮನೆಗೇ ಸಾವಿರ ಕೋಟಿ ರೂ. ಬಂದಷ್ಟು ಜನ ಖುಷಿಪಟ್ಟಿದ್ದರು. ಬೆಳಗಾವಿ ಇನ್ನು ಸ್ಮಾರ್ಟ್ ಆಗಲಿದೆ ಎಂದೇ ಪರಿಭಾವಿಸಿದ್ದರು.
ಇದನ್ನೂ ಓದಿ – ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು?
ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದಾಗಿನಿಂದ ಎಲ್ಲ ತೊಂದರೆಗಳನ್ನೂ ಸಹಿಸಿಕೊಂಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ರಸ್ತೆ ಆರಂಭವಾದಾಗಿನಿಂದ ಜನರು, ವಾಹನ ಸವಾರರು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಮುಂದಾಗಬಹುದಾದ ನಗರದ ಸ್ಮಾರ್ಟ್ ನೆಸ್ ಕಲ್ಪಿಸಿಕೊಂಡು ಸುಮ್ಮನಿದ್ದಾರೆ.
ಕಾಂಗ್ರೆಸ್ ರಸ್ತೆಯ ಒಂದು ಕಡೆ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಿ 3 ತಿಂಗಳು ಕಳೆದಿದೆ. ಅಲ್ಲಿ ಕೆಲಸವೇ ನಡೆಯುತ್ತಿಲ್ಲ. ಅರ್ಧಮರ್ಧ ಕೆಲಸ ಮಾಡಿ ನಿಲ್ಲಿಸಲಾಗಿತ್ತು. ಯಾವಾಗ ಶಾಸಕ ಅಭಯ ಪಾಟೀಲ ಖಡಕ್ ವಾರ್ನಿಂಗ್ ನೀಡಿದರೋ ಆಗ ಚುರುಕಿನಿಂದ ಒಂದಿಷ್ಟು ಕೆಲಸ ಮಾಡಿದರು. ಆದರೂ ಅಭಯ ಪಾಟೀಲ ಕೊಟ್ಟ ಡೆಡ್ ಲೈನ್ ಗೆ ರಸ್ತೆ ಬಿಟ್ಟು ಕೊಡಲಿಲ್ಲ.
ಇದನ್ನೂ ಓದಿ – ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಗೆ 41ನೇ ಸ್ಥಾನ
7 ಕಡೆ ಬಿರುಕು
ಗೋಗಟೆ ವೃತ್ತದಿಂದ 3ನೇ ರೈಲ್ವೆ ಗೇಟ್ ವರೆಗಿನ ಕಾಂಗ್ರೆಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಕಡೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರೆ ಇನ್ನೊಂದು ಕಡೆ ಸಂಚಾರ ಬಂದ್ ಮಾಡಲಾಗಿದೆ.
ವಿಪರ್ಯಾಸವೆಂದರೆ, ಈ ಕಾಮಗಾರಿಯಲ್ಲಿ 7 ಕಡೆ ಬಿರುಕು ಕಾಣಿಸಿಕೊಂಡಿದೆ. ಕಾಮಗಾರಿ ಉದ್ಘಾಟನೆಯಾಗುವ ಮುನ್ನವೇ ಬಿರುಕು ಕಾಣಿಸಿದೆ. ಅದರಲ್ಲೂ 2ನೇ ರೈಲ್ವೆ ಗೇಟ್ ನಿಂದ 3ನೇ ರೈಲ್ವೆ ಗೇಟ್ ಕಡೆ ಹೋಗುವ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಕಾಮಗಾರಿ ಪೂರ್ಣಗೊಂಡು ಇನ್ನೇನು ಸಂಚಾರಕ್ಕೆ ತೆರೆಯಬೇಕು ಎನ್ನುವಾಗಲೇ ಬಿರುಕು ಉಂಟಾಗಿದೆ. ಸುಮಾರು 30 ಮೀಟರ್ ದೂರ ಬಿರುಕು ಉಂಟಾಗಿದ್ದು, ಡಾಂಬರ್ ಹಾಕಿ ಮುಚ್ಚಲು ಯತ್ನಿಸಲಾಗಿದೆ.
ಇದನ್ನೂ ಓದಿ – ಮಂದಗತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ: ಸಚಿವರಿಂದ ಹಿಗ್ಗಾಮುಗ್ಗಾ ತರಾಟೆ
ಇದು ಶಾಸಕ ಅಭಯ ಪಾಟೀಲ ಅವರ ಗಮನಕ್ಕೆ ಬಂದಿದೆ. ಅವರು ಗೋಗಟೆ ವೃತ್ತದಿಂದ 3ನೇ ರೈಲ್ವೆ ಗೇಟ್ ವರೆಗೆ ಮತ್ತು 3ನೇ ರೈಲ್ವೆ ಗೇಟ್ ನಿಂದ ಗೋಗಟೆ ವೃತ್ತದವರೆಗೆ ನಡೆದುಕೊಂಡೇ ಹೋಗಿ ಕಾಮಗಾರಿ ತಪಾಸಣೆ ನಡೆಸಿದ್ದಾರೆ. ಕಾಮಗಾರಿಯಲ್ಲಿನ ದೋಷ ಅವರಿಗೂ ಕಾಣಿಸಿದೆ.
ದೊಡ್ಡ ಬಿರುಕು ಕಾಣಿಸಿಕೊಂಡ ಸ್ಥಳದಲ್ಲಿ ಸಂಪೂರ್ಣ ರಸ್ತೆ ಕಟ್ ಮಾಡಿ ಹೊಸದಾಗಿ ನಿರ್ಮಿಸುವಂತೆ ಅಭಯ ಪಾಟೀಲ ಆದೇಶಿಸಿದ್ದಾರೆ. ಅಲ್ಲಿಯವರೆಗೂ ಗುತ್ತಿಗೆದಾರರಿಗೆ ಪೇಮೆಂಟ್ ಮಾಡದಂತೆ ಅವರು ಕಟ್ಟಪ್ಪಣೆ ಮಾಡಿದ್ದಾರೆ.
ರಸ್ತೆ ಕಟ್ ಮಾಡಿ ಹೊಸದಾಗಿ ನಿರ್ಮಿಸಬೇಕೆಂದರೆ ಮತ್ತೆ ಕನಿಷ್ಠ 28 ದಿನ ಕ್ಯೂರಿಂಗ್ ಗೆ ಬೇಕಾಗುತ್ತದೆ. ಈ ಅವಧಿಯಲ್ಲಿ ಮತ್ತೆ ರಸ್ತೆ ಬಂದ್ ಮಾಡಲೇಬೇಕು. ಹಾಗಾಗಿ ಜನರ ಪರದಾಟ ಸಧ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.
ಪ್ರಭಾವಿ ಗುತ್ತಿಗೆದಾರ
ಕಾಂಗ್ರೆಸ್ ರಸ್ತೆ ಕಾಮಗಾರಿ ಗುತ್ತಿಗೆ ಹೈದರಾಬಾದ್ ಮೂಲದ ಕಂಪನಿಗೆ ಸಿಕ್ಕಿದೆ. ಕಂಪನಿಯ ಮಾಲಿಕರು ರಾಜಕೀಯ ಪ್ರಭಾವ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್ ಕರ್ನಾಟಕದ ಸಂಸದರೊಬ್ಬರ ಸಂಬಂಧಿ ಎನ್ನಲಾಗುತ್ತಿದೆ.
ಈ ಪ್ರಭಾವ ಇರುವ ಹಿನ್ನೆಲೆಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಇದ್ದಂತಿದೆ. ಆದರೆ, ಎಲ್ಲ ದೋಷಗಳನ್ನೂ ಸರಿಪಡಿಸಲು ಸೂಚಿಸಿರುವ ಶಾಸಕ ಅಭಯ ಪಾಟೀಲ, ಇಲ್ಲವಾದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ನಾನು ನಡೆದುಕೊಂಡೇ ಹೋಗಿ ಸಂಪೂರ್ಣ ಕಾಂಗ್ರೆಸ್ ರಸ್ತೆ ತಪಾಸಣೆ ನಡೆಸಿದ್ದೇನೆ. 7 ಕಡೆಗಳಲ್ಲಿ ಬಿರುಕು ಕಾಣಿಸಿದೆ. ಡಾಂಬರ್ ಹಾಕಿ ಮುಚ್ಚಲು ಯತ್ನಿಸಿರುವುದೂ ಗೊತ್ತಾಗಿದೆ. ರಸ್ತೆ ಕಟ್ ಮಾಡಿ ಹೊಸದಾಗಿ ನಿರ್ಮಿಸಲು ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ದೋಷಪೂರ್ಣ ರಸ್ತೆಯನ್ನು ಹಾಗೆ ಬಿಡುವುದಕ್ಕೆ ಅವಕಾಶಕೊಡುವುದಿಲ್ಲ. ಸರಿಪಡಿಸದೆ ಪೇಮೆಂಟ್ ಮಾಡಲೂ ಕೊಡುವುದಿಲ್ಲ.
-ಅಭಯ ಪಾಟೀಲ, ಶಾಸಕ
ಇವುಗಳನ್ನೂ ಓದಿ – 4 ವರ್ಷ, 4 ಎಂಡಿ, 4 ಕೋಟಿ!
ಶಿರೀನ್ ನದಾಫ್ ಸ್ಮಾರ್ಟ್ ಸಿಟಿ ಎಂಡಿ
ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆ: 4 ವರ್ಷದಲ್ಲಿ 4 ಕೋಟಿ ರೂ. ಕಾಮಗಾರಿ!
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಸಮಗ್ರ ಚಿತ್ರಗಳು ಇಲ್ಲಿದೆ….
(ನಿಮ್ಮ ಪ್ರತಿಕ್ರಿಯೆಗಳನ್ನು ವಾಟ್ಸಪ್ -8197712235, e mail – [email protected] ಗೆ ಕಳಿಸಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ