Politics

*8300 ಕೋಟಿ scsp/tsp ಹಣ ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿ: ಇವರು ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ: ಸಿಎಂ* 

ಪ್ರಗತಿವಾಹಿನಿ ಸುದ್ದಿ: ಚುನಾವಣೆಯಲ್ಲಿ ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಮನುವಾದಿಗಳು ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು. 

ವಿಧಾನಸೌಧದ  ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ. ಆದರೆ ಸಂವಿಧಾನವನ್ನು ಮೊದಲಿಗೆ ವಿರೋಧಿಸಿದ್ದು ಇವರೇ. ಸಂವಿಧಾನದ ಜಾರಿಯನ್ನು ವಿರೋಧಿಸಿದ್ದವರೇ ಈ ಮನುವಾದಿಗಳು ಎಂದು ಟೀಕಿಸಿದರು. 

ಸಂವಿಧಾನ ಜಾರಿ ಆದ 75 ವರ್ಷಗಳ ಹಿಂದೆಯೇ ವೈರುದ್ಯ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದು ಅಂಬೇಡ್ಕರ್ ಹೇಳಿದ್ದರು. ಸಂವಿಧಾನದ ಆಶಯ ಈಡೇರಬೇಕಾದರೆ ಅಸಮಾನತೆ, ಅಸ್ಪ್ರಶ್ಯತೆ ಅಳಿಯಬೇಕು. ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರುವುದಿಲ್ಲ, ಅಸ್ಪೃಶ್ಯತೆ ಅಳಿಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅಂಬೇಡ್ಕರ್ ಇಲ್ಲದೇ ಹೋಗಿದ್ದರೆ ಎಲ್ಲರಿಗೂ ಶಿಕ್ಷಣ ದೊರೆಯುತ್ತಿರಲಿಲ್ಲ ಎಂದು ಸಿಎಂ ಹೇಳಿದರು.

Home add -Advt

ಬಜೆಟ್ ಗಾತ್ರ ಹೆಚ್ಚಾದಂತೆ scp/ tsp ಹಣ ಹೆಚ್ಚಾಗಬೇಕು. ಆದರೆ ಬಿಜೆಪಿ ಸರ್ಕಾರ ಕಡಿಮೆ ಮಾಡಿತು‌. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಯೋಜನಾಗಾತ್ರಕ್ಕೆ ತಕ್ಕಂತೆ ಹೆಚ್ಚಿಸಿದ್ದೀವಿ. ಈ ಬಾರಿ 42018 ಕೋಟಿ ರೂಪಯಿಯನ್ನು ನಾವು ತೆಗೆದಿಟ್ಟಿದ್ದೀವಿ. 8300 ಕೋಟಿ scsp/tsp ಹಣ ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿ. ಇವರು ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಅಂಬೇಡ್ಕರ್ ಅವರ ಆಶಯಗಳ ಜಾರಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಮ್ಮ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ವಿದ್ಯಾವಂತರೇ ಹೆಚ್ಚು ಜಾತಿವಾದಿಗಳಾಗುತ್ತಿರುವುದು ಸರಿಯಲ್ಲ. ಶಿಕ್ಷಣದ ಉದ್ದೇಶ ಜಾತಿವಾದಿಗಳಾಗುವುದಲ್ಲ. ಬಾಬಾ ಸಾಹೇಬ್ ಒಬ್ಬ ವ್ಯಕ್ತಿ ಇಡೀ ದೇಶದ ಶಿಕ್ಷಣ ವಂಚಿತ ನೂರಾರು ಜಾತಿ ಸಮುದಾಯಗಳಿಗೆ ಶಿಕ್ಷಣ ಸಿಗಲು ಕಾರಣಕರ್ತರಾದರು. ಮುಸಲ್ಮಾನರು ಶಿಕ್ಷಣದಿಂದ ವಂಚಿತರಾಗಬಾರದು, ಅವಕಾಶಗಳಿಂದ ವಂಚಿತರಾಗಬಾರದು, ಹೀಗಾಗಿ ಸಂವಿಧಾನ ಹೇಳಿದಂತೆ ನಾವು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಇಷ್ಟಕ್ಕೇ ಕಾಂಗ್ರೆಸ್ ಬರೀ ಮುಸಲ್ಮಾನರನ್ನು ಓಲೈಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 

ಬಹುತ್ವದ ದೇಶ ನಿರ್ಮಾಣಕ್ಕೆ, ಬ್ರಾತೃತ್ವದ ಸಮಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಸರಾಯಿ ಬೇಡ, ಶಾಲೆ ಬೇಕು ಎನ್ನುವುದು ದಲಿತ ಸಂಘರ್ಷ ಸಮಿತಿ ಹೋರಾಟದ ಘೋಷಣೆಯಾಗಿತ್ತು. ನಾನು ಉಪಮುಖ್ಯಮಂತ್ರಿ ಆದ ತಕ್ಷಣ ಊರು ಊರಲ್ಲಿ ವಸತಿ ಶಾಲೆ ಆರಂಭಿಸಿದೆ. ಮುಂದಿನ ಆರ್ಥಿಕ ವರ್ಷದ ಕೊನೆಯ ವೇಳೆಗೆ ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ತೆರೆದಿರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದಿನಿಂದ 32 ಜಿಲ್ಲೆಗಳಲ್ಲಿ ಒಟ್ಟು 33 ಡಿಸಿಆರ್ ಇ ಪೊಲೀಸ್ ಠಾಣೆಗಳು ಕಾರ್ಯಾರಂಭ ಮಾಡಲಿವೆ. ಸಾಂಕೇತಿಕವಾಗಿ ಒಂದು ಕೇಂದ್ರ ಡಿಸಿಆರ್ ಇ ಠಾಣೆಯನ್ನು ಉದ್ಘಾಟಿಸಿದ್ದೇನೆ ಎಂದು ಸಿಎಂ ಇದೇ ಸಂರ್ಭದಲ್ಲಿ ಘೋಷಿಸಿದರು.  (ಬೆಂಗಳೂರಿನಲ್ಲಿ ಎರಡು ಠಾಣೆ)

ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಮತ್ತು ಬೆಂಗಳೂರಿನಲ್ಲೂ ಆಂಧ್ರದ ಮಾದರಿಯನ್ನೂ ಮೀರಿದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

Related Articles

Back to top button