ತಮ್ಮನ ಜೊತೆ ಸೇರಿ ಗಂಡನನ್ನೇ ಬಡಿದು ಕೊಂದಳು

ಬೆಳಗಾವಿಯ ಲಕ್ಷ್ಮಿ ನಗರದಲ್ಲಿ ಘಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನು ಪತ್ನಿಯೇ  ತಮ್ಮನ ಜೊತೆ ಸೇರಿ ಅಟ್ಟಾಡಿಸಿ ಬಡಿದು ಕೊಂದಿದ್ದಾಳೆ.

ಬೆಳಗಾವಿಯ ಲಕ್ಷ್ಮಿ ನಗರದಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ. ಕಬ್ಬಿಣದ ರಾಡ್ ಹೊಡೆತ ತಾಳಲಾರದೆ ರಕ್ತದ ಮಡುವಿನಲ್ಲಿ ಬಿದ್ದ ಕಿರಣ ಲೋಕರೇ (28) ಎನ್ನುವ ವ್ಯಕ್ತಿ ಅಲ್ಲೇ ಸಾವನ್ನಪ್ಪಿದ್ದಾನೆ.
ಒಂದೇ ಓಣಿಯಲ್ಲಿ ವಾಸವಿದ್ದ ಕಿರಣ ಮತ್ತು ಸವಿತಾ 5 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹೊಂದಾಣಿಕೆಯಾಗದೆ ಕಳೆದ 2 ತಿಂಗಳಿನಿಂದ ದೂರವಾಗಿದ್ದರು. ಅವರಿಗೆ 2 ವರ್ಷದ ಗಂಡು ಮಗುವಿದೆ. ಸವಿತಾ ಮಗನೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು, ಕೆಲಸ ಮಾಡುತ್ತಿದ್ದಾಳೆ. ಆಕೆ ತವರು ಮನೆಗೆ ಬಂದಿರುವ ವಿಷಯ ತಿಳಿದ ಕಿರಣ ಮಗನನ್ನು ನೋಡಲೆಂದು ಸವಿತಾಳ ತವರು ಮನೆೆ ಬಂದಿದ್ದಾನೆ.

ಕಿರಣ ಬಂದಿರುವುದನ್ನು ನೋಡಿದ ಸವಿತಾ, ಅವಳ ತಮ್ಮ ಆಕ್ರೋಶಗೊಂಡು ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಕೈಗೆ ಸಿಕ್ಕ ಕಬ್ಬಿಣದ ರಾಡ್ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಬಡಿದಿದ್ದಾರೆ. ತಪ್ಪಿಸಿಕೊಳ್ಳಲು ಆತ ಯತ್ನಿಸಿದರೂ ಸಾಧ್ಯವಾಗದೆ ರಾಡ್ ಹೊಡೆತಕ್ಕೆ ನೆಲಕ್ಕುರುಳಿದ್ದಾನೆ. ರಕ್ತದ ಮಡುವಿನಲ್ಲೇ ಒದ್ದಾಡಿ ಸಾವನ್ನಪ್ಪಿದ್ದಾನೆ.
ಹೆಂಡತಿ ಸವಿತಾ, ಆಕೆಯ ತಮ್ಮ  ಜ್ಯೋತಿನಾಥನ ವಿರುದ್ಧ ಕಿರಣನ ತಾಯಿ ದೂರು ನೀಡಿದ್ದಾಳೆ.
ಸ್ಥಳಕ್ಕೆ ಶಹಾಪುರ ಸಿಪಿಐ ಜಾವೇದ ಮುಷಾಪುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.