Advertisement -Home Add

ಪಿಯುಸಿ ಫಲಿತಾಂಶದ ಹಿನ್ನೆಲೆ ಪಾರ್ಟಿಗೆ ತೆರಳಿದ್ದ ಯುವಕ ಅಪಘಾತಕ್ಕೆ ಬಲಿ

ಇನ್ನಿಬ್ಬರ ಸ್ಥಿತಿ ಗಂಭೀರ

 ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದಿದ್ದರಿಂದ ತನ್ನ ಮಿತ್ರರೊಡಗೂಡಿ ಪಾರ್ಟಿ ಮಾಡಲು ತೆರಳಿದ್ದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಜಾಂಬೋಟಿ -ಬೆಳಗಾವಿ ರಸ್ತೆಯಲ್ಲಿ ಶನಿವಾರ ಸಂಜೆ ವರದಿಯಾಗಿದೆ.
ಮೃತ ಯುವಕನನ್ನು ಬೆಳಗಾವಿ ತಾಲೂಕು ಬೆಳವಟ್ಟಿ ಗ್ರಾಮದ ರೋಹಿತ ನಾರಾಯಣ ಚಾಂದಿಲಕರ (೧೯) ಎಂದು ಗುರುತಿಸಲಾಗಿದ್ದು, ಈತನೊಟ್ಟಿಗೆ ಬೈಕ್‌ನಲ್ಲಿ ಪಾರ್ಟಿಗೆ ತೆರಳಿದ್ದ ಅದೇ ಗ್ರಾಮದ ಗಣೇಶ ಚೌಗುಲೆ ಮತ್ತು ಅಮರ ನಲವಡೆ ಗಂಭೀರವಾಗಿ ಗಾಯಗೊಂಡು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಪೈಕಿ ಗಣೇಶ ಎಂಬ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಬೆಳವಟ್ಟಿ ಗ್ರಾಮದ ಐದಾರು ಯುವಕರ ತಂಡ ಬೈಕ್‌ನಲ್ಲಿ ಜಾಂಬೋಟಿ ಬಳಿಯ ರೆಸಾರ್ಟ್ ಒಂದಕ್ಕೆ ತೆರಳಿ ಪಾರ್ಟಿ ಮಾಡಿದ್ದಾರೆ. ಬಳಿಕ ತಮ್ಮೂರಿಗೆ ಮರಳುವ ಮಾರ್ಗಮಧ್ಯದಲ್ಲಿ ರೋಹಿತ ಮತ್ತು ಆತನ ಸ್ನೇಹಿತರು ಪ್ರಯಾಣಿಸುತ್ತಿದ್ದ ಬೈಕ್ ಬೆಳಗಾವಿಯಿಂದ ಗೋವಾದತ್ತ ಹೊರಟಿದ್ದ ಸರಕು ಸಾಗಣೆ ಲಾರಿಗೆ ಗುದ್ದಿದೆ.

ಅಪಘಾತದ ರಭಸಕ್ಕೆ ರೋಹಿತ್ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಇಬ್ಬರು ಸ್ನೇಹಿತರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಖಾನಾಪುರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.