*ಕಿತ್ತೂರಿನ ಧಣಿ, ಮಾಜಿ ಸಚಿವ ಇನಾಮದಾರ್ ಪಾರ್ಥಿವ ಶರೀರ ಸ್ವಗ್ರಾಮಕ್ಕೆ; ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಿನ್ನೆ ನಿಧನರಾದ ಮಾಜಿ ಸಚಿವರಾದ ಡಿ ಬಿ ಇನಾಮದಾರ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಸ್ವಗ್ರಾಮ ನೇಗಿನಹಾಳಕ್ಕೆ ಬೆಳಗ್ಗೆ 5 ಗಂಟೆಗೆ ತರಲಾಗಿದ್ದು, ಮನೆಯಲ್ಲಿ ಪೂಜಾ ವೀಧಾನಗಳನ್ನು ಮುಗಿಸಿ, 8 ಗಂಟೆಗೆ ಮನೆಯಿಂದ ಹೊರಟು ಅವರೇ ಸ್ಥಾಪಿಸಿದ ವಿಜಯ ಶ್ರೀ ವಿದ್ಯಾದಾಯಿನಿ ಸಂಘದ ಹೈಸ್ಕೂಲ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಮೆರವಣಿಗೆ ಮೂಲಕ ಸಂಚರಿಸಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮನಮನ ಸಲ್ಲಿಸಲಾಗುವದು. ಲಿಂಗಾಯತ ಧರ್ಮದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ.
ಮಾಜಿ ಸಚಿವರಾದ ಡಿ ಬಿ ಇನಾಮದಾರ ಅವರ ಪಾರ್ಥೀವ ಶರೀರದ ಮೇಲೆ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಡಿವಾಯ ಎಸ್ಪಿ ರವಿ ನಾಯಕ ಅವರು ರಾಷ್ಟ್ರಧ್ವಜವನ್ನು ಹೊದಿಸಿ ಅಂತಿಮನಮನ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಬಿ ಇನಾಮದಾರ್ ಅವರ ಪಾರ್ಥಿವಸರೀರದ ಅಂತಿಮ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಅವರು, ನನಗಿಂತ ವಯಸ್ಸಿನಲ್ಲಿ ಕಿರಿಯರು, ಅತ್ಯಂತ ಉತ್ಸಾಹಿ ಹಾಗೂ ಚಟುವಟಿಕೆಯಿಂದ ಇರುವಂತ ವ್ಯಕ್ತಿ. ಅಚಾನಕ್ಕಾಗಿ ಅನಾರೋಗ್ಯಕ್ಕೆ ತುತ್ತಾಗಿರುವದು ನನಗೂ ಶಾಕ್ ಆಗಿದೆ. ಕಿತ್ತೂರಿನ ಧಣಿ ಎಂದೇ ಗುರುತಿಸಿಕೊಂಡಿದ್ದ ಅವರು ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ವ್ಯಕ್ತಿಯಾಗಿದ್ದರು. ಅವರ ಸಾವು ನನಗೆ ಧಿಗ್ಭ್ರಮೆಯನ್ನುಂಟು ಮಾಡಿದೆ. ಪ್ರತಿದಿನ ಮಣಿಪಾಲ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಆರೋಗ್ಯದ ಕುರಿತು ಮಾಹಿತಿ ಪಡೆದು, ಗುಣಮಟ್ಟದ ಚಿಕಿತ್ಸೆ ನೀಡಿ ಅವರಿಗೇ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದಿದ್ದೆ. ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ಸಂಸದ ಡಾ.ಪ್ರಭಾಕರ ಕೋರೆ ಸಹ ಇನಾಮದಾರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ