ಜಾರಿ ನಿರ್ದೇಶನಾಲಯದಿಂದ ಡಿ.ಕೆ.ಶಿವಕುಮಾರ ಬಂಧನ
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ರಾಜ್ಯದ ಅತ್ಯಂತ ಪ್ರಭಾವಿ ರಾಜಕಾರಣಿ, ಮಾಜಿ ಸಚಿವ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಶಿವಕುಮಾರ ಅವರಿಗೆ ಸೇರಿದ್ದ ನವದೆಹಲಿಯ ಫ್ಲ್ಯಾಟ್ ಒಂದರಲ್ಲಿ 8.59 ಕೋಟಿ ರೂ. ಹಣ ಸಿಕ್ಕಿದ ಪ್ರಕರಣದಲ್ಲಿ ಕಳೆದ 4 ದಿನಗಳಿಂದ ವಿಚಾರಣೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ ಅಂತಿಮವಾಗಿ ಈಗ ಸ್ವಲ್ಪ ಹೊತ್ತಿಗೆ ಮೊದಲು ಬಂಧಿಸಿದೆ. ಬುಧವಾರ ಬೆಳಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಹಬ್ಬಕ್ಕೂ ಬಿಡಲಿಲ್ಲ
ಕಳೆದ ಶುಕ್ರವಾರ ಡಿ.ಕೆ.ಶಿವಕುಮಾರ ಅವರನ್ನು ವಿಚಾರಣೆಗೆ ಆಹ್ವಾನಿಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಹೊರತುಪಡಿಸಿ ಈ ಕ್ಷಣದವರೆಗೂ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಗಣೇಶ ಚತುರ್ಥಿಯ ದಿನ ವಿಚಾರಣೆಗೆ ವಿನಾಯಿತಿ ನೀಡಿ, ಹಿರಿಯರೊಂದಿಗೆ ಹಬ್ಬ ಆಚರಿಸಲು ಅವಕಾಶ ನೀಡಿ ಎನ್ನುವ ಕೋರಿಕೆಗೂ ಇಡಿ ಮನ್ನಣೆ ನೀಡಿರಲಿಲ್ಲ. ಹಾಗಾಗಿ ಡಿ.ಕೆ.ಶಿವಕುಮಾರ ಕಣ್ಣೀರು ಹಾಕಿದ್ದರು.
ನಾನು ಯಾವುದೇ ತಪ್ಪು ಮಾಡಿಲ್ಲ. ಕೊಲೆ ಮಾಡಿಲ್ಲ, ಅತ್ಯಾಚಾರ ಮಾಡಿಲ್ಲ. ಲಂಚ ಪಡೆದಿಲ್ಲ. ವಿಚಾರಣೆ ಮಾಡಿದರೆ ಮಾಡಲಿ, ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ ಹೇಳುತ್ತಲೇ ಇದ್ದರು. ಹಾಗೆಯೇ ವಿಚಾರಣೆಗೆ ಕರೆದಾಗಲೆಲ್ಲ ಹಾಜರಾಗುತ್ತಲೇ ಇದ್ದರು. 4 ದಿನ ವಿಚಾರಣೆ ನಡೆಸಿರುವುದನ್ನು ಗಮನಿಸಿ ಡಿ.ಕೆ.ಶಿವಕುಮಾರ ಅವರನ್ನು ಬಂಧಿಸುವ ಸಾಧ್ಯತೆ ಇಲ್ಲ ಎಂದುಕೊಳ್ಳಲಾಗಿತ್ತು.
ಇದೀಗ ನವದೆಹಲಿಯ ಇಡಿ ಕಚೇರಿ ಎದುರು ಹಾಜರಿರುವ ಡಿ.ಕೆ.ಶಿಕುಮಾರ ಅವರ ಮೂರಾರು ಬೆಂಬಲಿಗರಿಗೆ ಮತ್ತು ರಾಜ್ಯದಾದ್ಯಂತ ಇರುವ ಅವರ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ಆಗಿದೆ. ವಿಪರ್ಯಾಸವೆಂದರೆ ಕಾಂಗ್ರೆಸ್ ಪಕ್ಷಗದ ಮುಖಂಡರೇ ನಿರೀಕ್ಷೆಯಷ್ಟು ಡಿ.ಕೆ.ಶಿ ಬೆಂಬಲಕ್ಕೆ ನಿಲ್ಲಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ