*ಅನ್ನಭಾಗ್ಯ ಅಕ್ಕಿಯ ಜೊತೆಗೆ ಫುಡ್ ಕಿಟ್ ಅಥವಾ ಪರ್ಯಾಯ ಮಾರ್ಗ ಹುಡುಕಲು ಸಮೀಕ್ಷೆ: ಡಿಸಿಎಂ ಡಿ.ಕೆ.ಶಿವಕುಮಾರ್*

ಪಂಚ ಗ್ಯಾರಂಟಿ ಯೋಜನೆಗಳು ಭವಿಷ್ಯದ ಕಾಂಗ್ರೆಸ್ ಸರ್ಕಾರವನ್ನು ಕಾಪಾಡಲಿವೆ
ಪ್ರಗತಿವಾಹಿನಿ ಸುದ್ದಿ: ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪಂಚ ಗ್ಯಾರಂಟಿ ಯೋಜನೆಗಳೆ ಕಾಪಾಡುತ್ತವೆ ಎನ್ನುವ ವಿಶ್ವಾಸ ನನಗಿದೆ. ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಯನ್ನು ಉಂಟು ಮಾಡಿವೆ. ಆರ್ಥಿಕವಾದ ಶಕ್ತಿ ನೀಡಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ರಾಮನಗರದಲ್ಲಿ ಶನಿವಾರ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.
“ಬಿಜೆಪಿ ಮತ್ತು ಜನತಾದಳದವರು ಮುಂದಿನ ದಿನಗಳಲ್ಲಿ ಹೇಗಾದರೂ ಮಾಡಿ ಈ ಗ್ಯಾರಂಟಿ ಯೋಜನೆಗಳನ್ನು ಯಾರಿಗೂ ಸಿಗದಂತೆ ಮಾಡಬೇಕೆನ್ನುವ ಷಡ್ಯಂತ್ರ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳು ಉಳಿಯಬೇಕು ಎಂದರೆ ಕಾಂಗ್ರೆಸ್ ಸರ್ಕಾರ ಶಾಶ್ವತವಾಗಿ ಇರಬೇಕು. ಈ ನಿಟ್ಟಿನಲ್ಲಿ ನೀವುಗಳು ಕೆಲಸ ಮಾಡಬೇಕು” ಎಂದರು.
“ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರು ಗೆಲ್ಲಲು ಗ್ಯಾರಂಟಿ ಯೋಜನೆಗಳ ಯಶಸ್ಸೇ ಕಾರಣ. ಮಹಿಳೆಯರು ಮಾಡಿದ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ ಉಪಕಾರ ಸ್ಮರಣೆಯನ್ನು ಅವರು ಹೊಂದಿರುತ್ತಾರೆ. ಯಾವುದೇ ರಾಜ್ಯಕ್ಕೆ ಹೋದರು, ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಹೊಗಳುತ್ತಿದ್ದಾರೆ. ಜನರಿಗೆ ದೊಡ್ಡ ಉಪಕಾರ ಮಾಡಿದ್ದೀರಿ ಎಂದು ನನ್ನ ಬಳಿ ಹೇಳುತ್ತಿದ್ದಾರೆ” ಎಂದರು.
ಪಂಚಾಯ್ತಿ ಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ ನಡೆಸಿ
“ಗ್ಯಾರಂಟಿ ಅನುಷ್ಠಾನ ಸಮಿತಿ ಗಳಿಂದ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ಮೂರು ನಾಲ್ಕು ಜನರನ್ನು ಗುರುತಿಸಿ ಸನ್ಮಾನಿಸಬೇಕು. ಬೃಹತ್ ಸಮಾವೇಶ ನಡೆಸದೆ, ಚಿಕ್ಕದಾದ ಚೊಕ್ಕದಾದ ಸಮಾವೇಶ ನಡೆಸಬೇಕು” ಎಂದು ಸಲಹೆ ನೀಡಿದರು.
“ಯುವಕರ ಗುಂಪು ರಚಿಸಿ ಅವರಿಗೆ ಈ ಯೋಜನೆಗಳ ಬಗ್ಗೆ ಜ್ಞಾನ ಕೊಡಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಇದರ ಉಪಯೋಗವನ್ನು ಪ್ರಚಾರ ಮಾಡಬೇಕು. ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಗಂಡನಿಗೆ ಟ್ರ್ಯಾಕ್ಟರ್, ಬೈಕ್ ತೆಗೆದುಕೊಟ್ಟಿದ್ದಾರೆ. ಸ್ವಂತ ಉದ್ಯಮ ತೆರೆದು ಸ್ವಾವಲಂಬಿಯಾಗಿದ್ದಾರೆ. ಇದೆಲ್ಲವನ್ನು ಜನರಿಗೆ ಹೆಚ್ಚು, ಹೆಚ್ಚು ತಿಳಿಸಬೇಕು” ಎಂದರು.
“ಗ್ಯಾರಂಟಿ ಯೋಜನೆಗಳಿಂದ ಬದುಕು ಹೇಗೆ ಬದಲಾಯಿತು ಎಂದು ಫಲಾನುಭವಿಗಳಿಂದ ಅಭಿಪ್ರಾಯವನ್ನು ಹೇಳಿಸಬೇಕು. ಈ ಕಾರ್ಯಕ್ರಮವನ್ನು ಮಾದರಿಯಾಗುವಂತೆ ರೂಪಿಸಬೇಕು” ಎಂದು ತಿಳಿಸಿದರು.
“ಸಮಾಜದಿಂದ ಪಡೆದ ಹಣವನ್ನು ಸ್ವಾಹ ಮಾಡದೇ ಶಾಲೆ, ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ಎಂದು ಸಾಯಿಬಾಬಾ ಅವರು ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ದೇವೇಗೌಡರ ಸಮ್ಮುಖದಲ್ಲಿ ಹೇಳಿದ್ದರು. ಅದಕ್ಕೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಒಂದು ಲಕ್ಷ ಕೋಟಿಗೂ ಹೆಚ್ಚು ಹಣ ಹಂಚಿದ್ದೇವೆ” ಎಂದರು.
ಫುಡ್ ಕಿಟ್ ವಿತರಣೆ ಬಗ್ಗೆ ಸಮೀಕ್ಷೆ
“ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಣಿ ಆಗುತ್ತಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೆ. ಈ ಯೋಜನೆ ಮೂಲಕ ಅಕ್ಕಿ ಪಡೆಯುತ್ತಿರುವ ಒಬ್ಬ ಮಹಿಳೆಯ ಎಷ್ಟು ಅಕ್ಕಿ ಉಳಿತಾಯವಾಗುತ್ತದೆ ಎಂದು ವಿಚಾರಿಸಿದೆ. ತಿಂಗಳಲ್ಲಿ ಅರ್ಧ ಡಬ್ಬ ಅಕ್ಕಿ ಉಳಿಯಬಹುದು ಎಂದು ಆ ಮಹಿಳೆ ಹೇಳಿದರು. ಎಲ್ಲರೂ ಸಹ ಕೇವಲ ಅನ್ನವನ್ನು ಊಟ ಮಾಡುವುದಿಲ್ಲ ರಾಗಿ, ಚಪಾತಿ, ರೊಟ್ಟಿಯನ್ನು ಬಳಸುತ್ತಾರೆ. ಒಂದಷ್ಟು ರಾಜ್ಯಗಳಲ್ಲಿ ಫುಡ್ ಕಿಟ್ ನೀಡಲಾಗುತ್ತಿದೆ. ಇದರಲ್ಲಿ ಅಡುಗೆ ಎಣ್ಣೆ ಸೇರಿದಂತೆ ಇರುತ್ತವೆ. ಅಕ್ಕಿ ಕಾಳಸಂತೆಗೆ, ಹೋಟೆಲ್ ಗಳಿಗೆ ಹೋಗುವುದನ್ನು ತಡೆಯಬೇಕು. ಅಕ್ಕಿ ಮುಗ್ಗಲು ಹಿಡಿಯದಂತೆ ಮಾಡಬೇಕು ಹೀಗೆ ಅನೇಕ ಪರ್ಯಾಯ ಆಲೋಚನೆಯ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ” ಎಂದರು.
“ಒಂದಷ್ಟು ಜನ ಸರ್ಕಾರಿ ನೌಕರರು ಸಹ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅನುಕೂಲಸ್ಥರು ಸಹ ಗ್ಯಾರಂಟಿ ಯೋಜನೆಗಳ ಫಲವನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರವನ್ನು ನೀಡಲು ಒಂದಷ್ಟು ಜನ ಅನೇಕ ಸಲಹೆಗಳನ್ನು ನೀಡಿದ್ದಾರೆ. ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳನ್ನು ಯಾರು ಸಹ ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ನಗರಗಳಲ್ಲಿ ದುರುಪಯೋಗವಾಗುತ್ತಿದೆ” ಎಂದರು.
ಮಹಿಳೆಯರ ಗೌರವ ಹೆಚ್ಚಾಗಿದೆ
“ಗೃಹಲಕ್ಷ್ಮೀ ಯೋಜನೆಯಿಂದ ಮನೆಗಳಲ್ಲಿ ಮಹಿಳೆಯರ ಗೌರವ ಹೆಚ್ಚಾಗಿದೆ. ಮನೆಯಲ್ಲಿರುವ ಗಂಡಸು ಗೌರವ ನೀಡುತ್ತಿದ್ದಾನೆ. ಮಹಿಳೆಯರ ಸ್ವಾಭಿಮಾನ ಹಾಗೂ ಆತ್ಮಸ್ಥೈರ್ಯ ಹೆಚ್ಚಾಗಿದೆ. ಮಹಿಳೆಯಲ್ಲಿ ಉದ್ಯೋಗ ಪ್ರಮಾಣ ಹೆಚ್ಚಾಗಿದೆ” ಎಂದರು.
“ಯಾವುದೇ ಸಭೆಗೆ ಹೋದರು 40 ರಿಂದ 50,000 ಮಹಿಳೆಯರು ಸೇರುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ನಮ್ಮ ಬದುಕನ್ನು ಕಾಪಾಡಿದ್ದೀರಿ ಎಂದು ಕೈ ಮುಗಿದು ಹೇಳುತ್ತಾರೆ. ನಾವು ಧೈರ್ಯದಿಂದ ಇದ್ದೇವೆ. ಮಕ್ಕಳಿಗೆ ಊಟ ಕೊಡುತ್ತಿದ್ದೇವೆ, ಅವರ ಶಾಲಾ ಕಾಲೇಜು ಶುಲ್ಕ ಕಟ್ಟುತ್ತಿದ್ದೇವೆ, ಪುಣ್ಯಕ್ಷೇತ್ರಗಳ ಪ್ರವಾಸ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಬದುಕಿಗೆ ಧೈರ್ಯ ನೀಡಿವೆ. ಮಹಿಳೆಯರ ಆಶೀರ್ವಾದವೇ ನಮ್ಮ ಸರ್ಕಾರದ ಶಕ್ತಿ ಹಾಗೂ ಕಾರ್ಯಕರ್ತರ ದುಡಿಮೆಯೇ ಈ ಸರ್ಕಾರಕ್ಕೆ ಬಲ” ಎಂದರು.
ಲಂಚದ ಪಿಡುಗು ತೊಲಗಿಸಲು ಪ್ರಯತ್ನ
“ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಇ ಖಾತೆ, ಭೂಮಿ ಗ್ಯಾರಂಟಿ, ಕಂದಾಯ ಗ್ರಾಮಗಳ ಘೋಷಣೆ, ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಲಂಚ ಎನ್ನುವ ಪಿಡುಗು ದೂರ ಮಾಡಲು ಏನೇನು ಕೆಲಸ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಾವು ಸದಾ ಪ್ರಯತ್ನದಲ್ಲಿ ಇದ್ದೇವೆ” ಎಂದರು.
“ಜನರು ಉಪಕಾರ ಸ್ಮರಣೆಯನ್ನು ಬೇಗ ಮರೆಯುತ್ತಾರೆ ಆದಕಾರಣ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಪದೇ ಪದೇ ಕಾಂಗ್ರೆಸ್ ಸರ್ಕಾರದ ಉಪಯೋಗಗಳನ್ನು ಪ್ರಚಾರ ಮಾಡುತ್ತಲೇ ಇರಬೇಕು. ಉದಾಹರಣೆಗೆ ಈ ಹಿಂದೆ ಶಾಸಕರಾಗಿದ್ದ ಸಿ.ಎಂ.ಲಿಂಗಪ್ಪ ಅವರು ಯೋಜನೆಯಲ್ಲಿ ಬಡವರಿಗೆ ಭೂಮಿಗಳನ್ನು ಹಂಚಿಕೆ ಮಾಡಿದರು. ಅಂದು ಉಚಿತವಾಗಿ ಕೊಟ್ಟ ಭೂಮಿ ಇಂದು ಮೂರು- ನಾಲ್ಕು ಕೋಟಿ ಬೆಲೆ ಬಾಳುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಅಲ್ಲವೇ? ನಾವು ಇದಕ್ಕೆ ನಮ್ಮ ಮೇಲೆ ವಿಶ್ವಾಸವನ್ನಿಡಿ ಎನ್ನುವ ಕೂಲಿಯನ್ನು ಮಾತ್ರ ಕೇಳುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಶಕ್ತಿ ಕೊಟ್ಟರೆ ನಾವು ಜನರ ಬದುಕಿಗೆ ಶಕ್ತಿ ಕೊಡುತ್ತೇವೆ” ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ನಾನು ಮಾಡಲಿಲ್ಲ
“ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಡಿಕೆ ಶಿವಕುಮಾರ್ ಮಾಡಿದರು ಎಂಬುದಾಗಿ ಕಾರ್ಯಕ್ರಮದ ನಿರೂಪಕರು ಹೇಳುತ್ತಿದ್ದರು. ನಾನು ಈ ಕೆಲಸವನ್ನು ಮಾಡಿಲ್ಲ. ಇದ್ದ ಹೆಸರನ್ನು ಉಳಿಸಿದ್ದೇನೆ. ಈ ಹಿಂದೆ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ಹಾಗಿದ್ದರೆ ನಾವು ಬೆಂಗಳೂರಿಗೆ ಸೇರಿದವರಲ್ಲವೇ? ನಮ್ಮ ಗುರುತನ್ನು ನಾವು ಏಕೆ ಬಿಟ್ಟು ಕೊಡಬೇಕು. ನಮ್ಮನ್ನು ನೋಡಿ ಬೆಂಗಳೂರು ಉತ್ತರ ಜಿಲ್ಲೆಯೆಂದು ಮಾಡಿಕೊಳ್ಳುತ್ತಿದ್ದಾರೆ. ಬೇರೆಯವರು ಇಲ್ಲಿಗೆ ಏಕೆ ಬಂದು ರಾಜಕಾರಣ ಮಾಡಿದರು? ಅವರ ಊರಿನಲ್ಲಿಯ ಮಾಡಬಹುದಿತ್ತಲವೇ? ಇದೀಗ ನೀರು, ಭೂಮಿ, ಜನ ಎಲ್ಲವೂ ಚೆನ್ನಾಗಿದೆ ಎಂದು ಇಲ್ಲಿಗೆ ಬಂದಿದ್ದಾರೆ” ಎಂದರು.
“ನಾವು ವಿರೋಧ ಪಕ್ಷದಲ್ಲಿದ್ದಾಗ ಇಡೀ ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರ ಬದುಕಿನ ಬಗ್ಗೆ ನಾವು ಆಲೋಚನೆ ಮಾಡಿದೆವು. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದರು ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿತ್ತು. ಕೊರೋನಾ ಸಮಯದಲ್ಲಿ ಯಡಿಯೂರಪ್ಪನವರಿಗೆ ಹಾಗೂ ಬೊಮ್ಮಾಯಿ ಅವರಿಗೆ ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದೆವು. ದಿನಗೂಲಿ ಕಾರ್ಮಿಕರಿಂದ ಹಿಡಿದು ಆಟೋ ಚಾಲಕರು ಹಾಗೂ ಇತರೆ ಕಾರ್ಮಿಕರು ಆದಾಯವಿಲ್ಲದೆ ತತ್ತರಿಸಿ ಹೋಗಿದ್ದರು. ಬೆಲೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ. ಈ ಕಾರಣಕ್ಕಾಗಿಯೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ನೆರವಾದೆವು” ಎಂದು ಹೇಳಿದರು.
“ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಎಂದು ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಸರ್ಕಾರ ಹಾಗೂ ಪಕ್ಷ ನಿಮ್ಮನ್ನು ನಾಯಕರು ಎಂದು ಗುರುತಿಸಿದೆ. ಈಗಿನ ಧನ್ಯವಾದಗಳು ಕಾರ್ಯಕರ್ತರಿಗೆ ಕೊಟ್ಟಿರೋ ಸ್ಥಾನವನ್ನು ಹಿಂಪಡಿಯ ಬೇಕು ಎಂದು ಎರಡು ದಿನಗಳ ಕಾಲ ಸದನದಲ್ಲಿ ಗದ್ದಲ ಎಬ್ಬಿಸಿದರು. ಆದರೂ ನಾವು ನಿಮ್ಮ ಪರವಾಗಿ ನಿಂತು ನಿಮ್ಮನ್ನು ಕಾಪಾಡಿದ್ದೇವೆ” ಎಂದರು.
“ಬಿಜೆಪಿ ಕಾರ್ಯಕರ್ತರ ಜೊತೆಯಲ್ಲೂ ನೀವು ಸ್ನೇಹಪೂರ್ವಕವಾಗಿ ಇರಬೇಕು ಈಗ ಹೆಸರಿಗೆ ಮಾತ್ರ ಅವರ ಜೊತೆ ಇರುತ್ತಾರೆ. ಮುಂದೊಂದು ದಿನ ನಮ್ಮ ಜೊತೆ ಬಂದೇ ಬರುತ್ತಾರೆ. ಏಕೆಂದರೆ ಜನರಿಗೆ ಉಪಕಾರ ಸ್ಮರಣೆ ಎಂಬುದು ಇದ್ದೇ ಇರುತ್ತದೆ. ಪಕ್ಷದ ಹಾಗೂ ಅನುಷ್ಠಾನ ಸಮಿತಿಯ ಮಹಿಳೆಯರು ಇತರೆ ಮಹಿಳೆಯರ ಜೊತೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡಬೇಕು” ಎಂದು ಹೇಳಿದರು.
“ರಾಮನಗರದಲ್ಲಿ 100 ಎಕರೆಯಲ್ಲಾದರೂ ಬಡವರಿಗೆ ನಿವೇಶನ ಹಂಚಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ಈ ಹಿಂದೆ ಮೆಡಿಕಲ್ ಕಾಲೇಜು ಕಿತ್ತು ಕೊಳ್ಳಲಾಯಿತು ಎಂದು ಸುಖ ಸುಮ್ಮನೆ ಆರೋಪ ಮಾಡಲಾಯಿತು” ಎಂದರು.