Latest

*ಅಪಾರ್ಟ್ ಮೆಂಟ್ ಗಳ ಸಮಸ್ಯೆ ನಿವಾರಣೆಗೆ ಕಾಂಗ್ರೆಸ್ ರೂಪುರೇಷೆ; ಎರಡನೇ ಹಂತಗಳ ನಗರಗಳ ಅಭಿವೃದ್ಧಿಗೆ ಕ್ರಮ; ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ಹಳ್ಳಿಯಿಂದ ಬಂದಿದ್ದರೂ ಬೆಂಗಳೂರಿನ ನಿವಾಸಿಯಾಗಿದ್ದಾನೆ. ಇಲ್ಲಿನ ಸಮಸ್ಯೆಗಳನ್ನು ಅರಿತಿದ್ದೇನೆ. ಬೆಂಗಳೂರು ನಾಗರೀಕರು ಅದರಲ್ಲೂ ಅಪಾರ್ಟ್ ಮೆಂಟ್ ನಿವಾಸಿಗಳು ಸುರಕ್ಷಿತವಾಗಿ ಜೀವಿಸಲು ಬಯಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಅಪಾರ್ಟ್ಮೆಂಟ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಹಿಂದೆ ನಿವೇಶನಗಳನ್ನು ಹಂಚುವ ಪದ್ಧತಿ ಇತ್ತು. ಆದರೆ ಈಗ ಅಪಾರ್ಟ್ ಮೆಂಟ್ ಗಳು ಹೆಚ್ಚುತ್ತಿವೆ. ನಾವು ಬೆಂಗಳೂರು ಹಾಗೂ ಅದರ ನಾಗರೀಕರನ್ನು ಕಾಪಾಡಿಕೊಳ್ಳಬೇಕು. ಶೇ.39 ರಷ್ಟು ತೆರಿಗೆ ರೂಪದ ಆದಾಯ ಇಲ್ಲಿಂದಲೇ ಉತ್ಪಾದನೆಯಾಗುತ್ತಿದೆ. ಜ್ಞಾನವಂತರು, ಪ್ರಜ್ಞಾವಂತರು, ಬುದ್ಧಿವಂತರು, ಸುಶಿಕ್ಷಿತರು ಶೇ.80 ರಷ್ಟು ಮಂದಿ ಅಪಾರ್ಟ್ ಮೆಂಟ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ರಕ್ಷಣೆ ಭರವಸೆ ನೀಡಬೇಕಾಗಿದೆ. ಈ ಹಿಂದೆ ರೇರಾ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆದರೆ ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ದೃಢ ಸಂಕಲ್ಪ ಮಾಡಿ ರೇರಾ ತಂದು ಹಂತ ಹಂತವಾಗಿ ಸುಧಾರಣೆ ಮಾಡಲಾಗುತ್ತಿದೆ.

ನೀರು, ವಿದ್ಯುತ್, ರಕ್ಷಣೆ ಹಾಗೂ ತೆರಿಗೆ ಇವು ಪ್ರಮುಖ ಅಂಶಗಳಾಗಿವೆ. ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದೇ ಬೆಂಗಳೂರಿಗೆ 22 ಟಿಎಂಸಿ ಕುಡಿಯುವ ನೀರು ಲಭ್ಯವಾಗಲಿ ಎಂದು. ಬೆಂಗಳೂರಿನ ಶೇ.70ರಷ್ಟು ಅಪಾರ್ಟ್ಮೆಂಟ್ ಗಳಲ್ಲಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ನೀರಿಗಾಗಿ ವೆಚ್ಚ ಹೆಚ್ಚುತ್ತಿದೆ. ಇದನ್ನು ನೀಗಿಸಲು ನಾವು ಮೇಕೆದಾಟು ಯೋಜನೆಗೆ ಆಗ್ರಹಿಸುತ್ತಿದ್ದೇವೆ. ಈ ಯೋಜನೆ ಆದರೆ ನೀರು, ವಿದ್ಯುತ್ ಎರಡೂ ಸಮಸ್ಯೆಗೆ ಪರಿಹಾರ ನೀಡಬಹುದಾಗಿದೆ ಎಂದರು.

ಭಾರತವನ್ನು ನೋಡಬೇಕಾದರೆ ಬೆಂಗಳೂರಿನ ಮೂಲಕ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಾತನ್ನು ಸ್ವತಃ ಅಟಲ್ ಬಿಹಾರಿ ವಾಜಪೇಯಿ ಅವರೇ ಹೇಳಿದ್ದರು. ಇಲ್ಲಿರುವ ಜನ ಬಹಳ ವಿದ್ಯಾವಂತ ಹಾಗೂ ಬುದ್ಧಿವಂತರಿದ್ದಾರೆ. ಇಲ್ಲಿರುವ ಮಾನವ ಸಂಪನ್ಮೂಲ ಅತ್ಯುತ್ತಮವಾಗಿದೆ. ಸ್ವಾತಂತ್ರ್ಯ ಬಂದ ನಂತರ ನೆಹರೂ ಅವರ ನಾಯಕತ್ವದಲ್ಲಿ ಇಲ್ಲಿ ಅನೇಕ ಸಾರ್ವಜನಿಕ ಉದ್ದಿಮೆ ಸ್ಥಾಪಿಸಿದ್ದರು.

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು ಹೈದರಾಬಾದ್ ಹಾಗೂ ಸಿಂಗಾಪುರ ವ್ಯವಸ್ಥೆ ಅಧ್ಯಯನ ಮಾಡಲಾಗಿದೆ. ಈ ಹಿಂದೆ ಜೆ.ಹೆಚ್ ಪಟೇಲ್ ಅವರು ಮೋನೋ ರೈಲಿಗೆ ಅನುಮತಿ ನೀಡಿದ್ದರು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಸಿಎಂ ಕೃಷ್ಣಾ ಅವರ ಜತೆ ವಾಗ್ವಾದ ಮಾಡಿ ವಿದೇಶಕ್ಕೆ ಹೋಗಿ ಮೆಟ್ರೋ ಯೋಜನೆ ಅಧ್ಯಯನ ಮಾಡಿ ಮೆಟ್ರೋ ಜಾರಿಗೆ ತರಲು ತೀರ್ಮಾನಿಸಿದೆವು ಎಂದರು.

ಸಂಚಾರ ದಟ್ಟಣೆ ಬೆಂಗಳೂರಿನ ಸಮಸ್ಯೆಯಾಗಿದೆ. ಎರಡನೇ ಹಂತದ ನಗರಗಳನ್ನು ಅಭಿವೃದ್ಧಿ ಮಾಡಿ ಬೆಂಗಳೂರಿನ ಮೇಲೆ ಹೊರೆ ಇಳಿಸಬೇಕು. ಅಪಾರ್ಟ್ ಮೆಂಟ್ ಗಳ ಸಮಸ್ಯೆಗಳ ಪಟ್ಟಿ ಮಾಡಲಾಗಿದ್ದು, ನಿಮಗೆ ಸಹಾಯ ಮಾಡಲು ನಾವು ಈ ಸಭೆ ಮಾಡುತ್ತಿದ್ದೇವೆ. ಈ ವರ್ಗದ ಜನರ ಪರವಾಗಿ ಕೆಲಸ ಮಾಡಲು ಕಾಂಗ್ರೆಸ್ ಸಿದ್ಧವಿದೆ. ಎಲ್ಲ ವ್ಯವಸ್ಥೆ ಕಾನೂನು ರೀತಿಯಲ್ಲಿ ರೂಪುಗೊಳ್ಳಬೇಕು. ನಿಮ್ಮ ಮನೆಯ ಅಭಿವೃದ್ಧಿ ರಕ್ಷಣೆಗೆ ಪೂರಕವಾಗಿ ನೀವು ನಿಮ್ಮ ಸಲಹೆಗಳನ್ನು ನೀಡಬೇಕು.

ಅಪಾರ್ಟ್ಮೆಂಟ್ ನಿರ್ವಹಣೆಯಲ್ಲಿ ಪಾರದರ್ಶಕತೆ ತರಬೇಕು. ಸಂಚಾರ ದಟ್ಟಣೆ ವಿಚಾರವಾಗಿ ನಾವು ವಿಭಿನ್ನ ಕಾರ್ಯಕ್ರಮ ರೂಪಿಸಿದ್ದು, ನಾವು ಈಗ ಆ ವಿಚಾರ ಹೇಳಿದರೆ ಬಿಜೆಪಿಯವರೂ ಅದನ್ನು ಕಾಪಿ ಮಾಡುತ್ತಾರೆ. ಹೀಗಾಗಿ ಈಗ ನಾವು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ.

ಬೆಲೆ ಏರಿಕೆ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೆರವಾಗಲು ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ, ಮನೆಯೊಡತಿಗೆ 2000 ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದ್ದೇವೆ. ಇದೇ ರೀತಿ ಹಲವು ಯೋಜನೆ ರೂಪಿಸಿದ್ದೇವೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ನಾನು ಇಂಧನ ಸಚಿವನಾಗಿದ್ದವನು ಇದು ಸಾಧ್ಯವಿದೆ. ಇದನ್ನು ಹೇಗೆ ಜಾರಿ ಮಾಡಬೇಕು ಎಂದು ನಮಗೆ ಗೊತ್ತಿದೆ. ಸರ್ಕಾರದ ಬೊಕ್ಕಸದಿಂದ ಹಣ ಖರ್ಚಾಗಬಹುದು. ಆದರೆ ಜನರಿಗೆ ಸಹಾಯ ಮಾಡುವುದು ಬಹಳ ಮುಖ್ಯ.

ಅಪಾರ್ಟ್ಮೆಂಟ್ ಗಳು ಕೂಡ ತೆರಿಗೆ ನೀಡುತ್ತಿದ್ದಾರೆ. ಪಾಲಿಕೆ ನಿಮ್ಮಿಂದ ವಸೂಲಿ ಮಾಡುತ್ತಿದೆಯೇ ಹೊರತು ನಿಮಗೆ ಪ್ರತಿಯಾಗಿ ಏನನ್ನೂ ಮಾಡುತ್ತಿಲ್ಲ. ನಾನು ಇನ್ನೊಂದು ದಿನ ನಿಮ್ಮ ಜತೆ ಕೂತು ಚರ್ಚೆ ಮಾಡಲು ಸಿದ್ಧನಿದ್ದೇನೆ. ಬೆಂಗಳೂರು ದೇಶಕ್ಕೆ ಹೃದಯವಿದ್ದಂತೆ ಇದನ್ನು ನಾವು ಬೆಳೆಸಿ ಉಳಿಸಿಕೊಳ್ಳಬೇಕು. ಇಲ್ಲಿರುವ ಮಾನವ ಸಂಪನ್ಮೂಲಗಳನ್ನು ನಾವು ಬಳಸಿಕೊಳ್ಳಬೇಕು.

ನಮಗೆ ಮತ ಹಾಕಿ ಎಂದು ಕೇಳಲು ಈ ಸಭೆಗೆ ಕರೆದಿಲ್ಲ. ನಿಮ್ಮ ಮತಕ್ಕಿಂತ ನಿಮ್ಮ ಜ್ಞಾನ, ಸಲಹೆ ಬಹಳ ಮುಖ್ಯವಿದೆ. ಕಾಂಗ್ರೆಸ್ ಪಕ್ಷ ನಿಮ್ಮ ಜತೆ ನಿಲ್ಲಲಿದೆ ಎಂಬ ಭರವಸೆ ಇದ್ದರೆ ಮಾತ್ರ ನೀವು ನಮಗೆ ಬೆಂಬಲ ನೀಡಿ. ನಿಮ್ಮ ಧ್ವನಿ ನಮ್ಮ ಧ್ವನಿಯಾಗಬೇಕು ಎಂದು ಈ ಘಟಕ ಆರಂಭಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುತ್ತೇವೆ. ಈ ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡುವುದು ನಮ್ಮ ಗುರಿ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button