Kannada News

*ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ; ಮೂರು ವಿಷಯಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬೆಳಗಾವಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮೂರು ಪ್ರಮುಖ ವಿಚಾರ ತಿಳಿಸಿದರು. ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಕಾರ್ಯಕ್ರಮ ಪಾದಯಾತ್ರೆ ಬಳಿಕ ಮೊದಲ ಸಾರ್ವಜನಿಕ ಸಭೆಯನ್ನು ಬೆಳಗಾವಿಯಲ್ಲಿ ಮಾಡಲಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡ ಜಾಗದಿಂದಲೇ ನನ್ನ ಪಾದಯಾತ್ರೆಯ ಪ್ರಥಮ ಸಭೆ ನಡೆಸಬೇಕು ಎಂಬ ಕಾರಣಕ್ಕೆ ಬೆಳಗಾವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಮಾರ್ಚ್ 20ರಂದು ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸಲಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಯ ಉದ್ದೇಶ, ಅವರ ಅನುಭವ, ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ನೀಡಲೆಂದು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ನಾವು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದು, ಜನರು ಅತ್ಯಂತ ಪ್ರೀತಿ ವಿಶ್ವಾಸವನ್ನು ತೋರುತ್ತಿವೆ. ಇದಕ್ಕೆ ಮಾಧ್ಯಮಗಳ ಕ್ಯಾಮರಾ ಕಣ್ಣುಗಳೇ ಸಾಕ್ಷಿಯಾಗಿವೆ.

ಎರಡನೇ ವಿಚಾರ ನಮ್ಮ ಕರ್ನಾಟಕದ ಸ್ವಾಭಿಮಾನದ ಪ್ರಶ್ನೆ. ನಾವೆಲ್ಲ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಒಂದು ಸಂವಿಧಾನವಿದೆ. ಯಾವರಾಜ್ಯ್ದಲ್ಲಿ ಯಾವ ರೀತಿ ಹಕ್ಕನ್ನು ನೀಡಲಾಗಿದೆ ಎಂಬ ವಿಷಯದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದೇವೆ. ಆ ನಿಟ್ಟಿನಲ್ಲಿ ನಮ್ಮ ನೆಲ, ಜಲ, ಭಾಷೆ, ಗಡಿ ಇವೆಲ್ಲವೂ ನಿಗದಿಯಾಗಿದೆ. ಪ್ರೀತಿ ವಿಶ್ವಾಸದಿಂದ ಅಣ್ಣ-ತಮ್ಮಂದಿರಂತೆ ಜಾತಿ ಮತ ಬೇದ ಮರೆತು ಒಗ್ಗಟ್ಟಿನಿಂದ ಬದುಕುತ್ತಿದೇವೆ. ಈ ರಾಜ್ಯದಲ್ಲಿ ಯಾವುದೇ ಗಡಿವಿವಾದ ಇಲ್ಲ. ಈಗಾಗಲೇ ಗಡಿ ವಿವಾದಗಳು ಇತ್ಯರ್ಥವಾಗಿಗೆ. ನಮ್ಮ ರಾಜ್ಯ ಸುಭದ್ರವಾಗಿಯೇ ಇದೆ. ಬೆಳಗಾವಿ ಭಾಗದ ಜನರಿಗೆ ಶಕ್ತಿಕೊಡಬೇಕು ಈ ಭಾಗದಲ್ಲಿ ಸಮಸ್ಯೆಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸುವರ್ಣವಿಧಾನಸೌಧವನ್ನು ಕಟ್ಟಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ಆದರೆ ಬೆಳಗಾವಿ ಜಿಲ್ಲೆಗೆ, ಗಡಿ ಭಾಗದ ಜನರಿಗೆ ಒಂದು ಇತಿಹಾಸವಿದೆ ನಮಗೆ ಯಾವುದೇ ಅತಾರತಮ್ಯವಿಲ್ಲ. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಶಿವಸೇನಾ ಬೆಂಬಲಿತ ಬಿಜೆಪಿ ಸರ್ಕಾರವಿದೆ. ಅವರ ಯೋಜನೆ ಅವರು ಮಾಡಿಕೊಂಡು ಹೋಗಲಿ ನಮಗೆ ಅಭ್ಯಂತರವಿಲ್ಲ. ನಮ್ಮ ಕರ್ನಾಟಕದಲ್ಲಿಯೂ ಒಂದು ಬಿಜೆಪಿ ಸರ್ಕಾರವಿದೆ. ಇಂದು ಕನ್ನಡ ನಾಡಿನ ಜನರ ಸ್ವಾಭಿಮಾನವನ್ನು ಕೆಣಕುವ ಕೆಲಸ ಮಾಡುತ್ತಿದೆ. ಕನ್ನಡಿಗರ, ಕರ್ನಾಟಕದವರ ನೆಮ್ಮದಿ ಕೆಡಿಸಿ ಶಾಂತಿಭಂಗವನ್ನುಂಟು ಮಾಡುವ ಕೆಲಸಮಾಡಿದೆ.

ಇಂದು ಮಹಾರಾಷ್ಟ್ರ ಸರ್ಕಾರ ಬೆಳಗಾವಿಯ ಭಾಗದ 850 ಹಳ್ಳಿಗಳನ್ನು ಗುರುತಿಸಿ ಅನುದಾನ ಕೊಡುವುದಾಗಿ ಹೇಳಿ 54 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ಆದೇಶ ಹೊರಡಿಸಿದೆ. ನಮ್ಮ ರಾಜ್ಯದಲ್ಲಿ ಅವರು ಯೋಜನೆ ಜಾರಿಮಾಡುವ ಉದ್ದೇಶವೇನು? ಇದು ನಮ್ಮ ಸ್ವಾಭಿಮಾನದ ವಿಚಾರ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕನ್ನಡ ನಾಡಿನ ಜನರ ಸ್ವಾಭಿಮಾನವನ್ನು ಅಡವಿಡುವ ಕೆಲಸ ಅಮಡಿದ್ದಾರೆ. ನಿಮ್ಮ ಅಧಿಕಾರದ ಆಸೆಗಾಗಿ ಯಾರು ಬೇಕಾದರೂ ಬಂದು ಈರಾಜ್ಯದಲ್ಲಿ ಯೋಜನೆ ಜಾರಿ ಮಾಡಬಹುದು ಎಂಬ ನಿಟ್ಟಿನಲ್ಲಿ ನಡೆದುಕೊಂಡಿದ್ದೀರಿ. ಇದು ರಾಜ್ಯದ ಜನರಿಗೆ ಮಾಡಿರುವ ಅವಮಾನ. ತಕ್ಷಣ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾ ಮಾಡಲಿ. ಅಲ್ಲದೇ ಮಹಾರಾಷ್ಟ್ರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಮಾಡಬೇಕು ಎಂದು ಆಗ್ರಹಿಸಿದರು.

26 ಜನ ಲೋಕಸಭಾ ಸದಸ್ಯರಿದ್ದಾರೆ ಹಲವು ಮತ್ರಿಗಳಿದ್ದಾರೆ. ಅವರಿಗೆ ನಿಜವಾಗಿಯೂ ಸ್ವಾಭಿಮಾನವಿದ್ದಿದ್ದರೆ ಇಂತಹ ಕೆಲಸ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಇದು ಸಣ್ಣ ವಿಚಾರವಲ್ಲ ತಕ್ಷಣ ಅವರೆಲ್ಲರೂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಮೂರನೇ ವಿಚಾರವೆಂದರೆ ಬಿಜೆಪಿ ಹಿರಿಯ ನಾಯಕ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. 30 ವರ್ಷಗಳಕಾಲ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದವರು. ಹಿರಿಯ ವಕೀಲರು, ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕಾನೂನು ಸಲಹೆಗಾರರಾಗಿದ್ದವರು, ಬಿಜೆಪಿ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದವರು ಇಂದು ಯಾವ ಷರತ್ತುಗಳಿಲ್ಲದೇ ಕಾಂಗ್ರೆಸ್ ಗೆ ಬಂದಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬೇಸತ್ತು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬೆಳಗಾವಿಯಲ್ಲಿ ಮಾ.20 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯುವಕರ ರ್ಯಾಲಿ ನಡೆಸಿ ಸಮಾವೇಶ ನಡೆಸಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮಹಾರಾಷ್ಟ್ರ ಸರಕಾರದವರು ಅನಗತ್ಯವಾಗಿ ಮೇಲಿಂದ ಮೇಲೆ ಕಾಲು ಕೆದರುವ ಕೆಲಸ ಮಾಡುತ್ತಿದ್ದಾರೆ. ಇದೊಂದು ಷಡ್ಯಂತ್ರ ಆರೂವರೆ‌ ಕೋಟಿ ಕನ್ನಡಿಗರ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡುತ್ತಿದೆ. ಕರ್ನಾಟಕಕ್ಕೆ ಅನ್ಯಾಯವಾದರೂ ಕೂಡ ಮಹಾಜನ್ ವರದಿಯನ್ನು ಒಪ್ಪಿಕೊಂಡಿದ್ದರೂ ಕರ್ನಾಟಕದ 865 ಹಳ್ಳಿಗಳಲ್ಲಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿ ವ್ಯವಹಾರ ಮಾಡುತ್ತಿದೆ. ಇವರು ನಿಲುವನ್ನು ಕಟುವಾಗಿ ಖಂಡಿಸುತ್ತೇನೆ ಎಂದರು.

ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ,ಸಲೀಂ ಅಹ್ಮದ, ಕಾಂಗ್ರೆಸ್ ನಾಯಕರಾದ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ‌‌ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಸೇರಿದಂತೆ ‌ಇನ್ನಿತರರು ಉಪಸ್ಥಿತರಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button