ಬರಿ ಮುಖ ತೋರಿಸಿ ತಿಂಡಿ ತಿಂದು ಹೋಗೋದಲ್ಲ; ಒಬ್ಬೊಬ್ಬರು 100 ಜನರನ್ನು ಕರೆತರಬೇಕು; ಭಾರತ್ ಜೋಡೋ ಯಾತ್ರೆಗೆ ಡಿ.ಕೆ.ಶಿ ತಾಕೀತು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಿದ್ದರಾಮಯ್ಯ ಅಮೃತ ಮಹೋತ್ಸವ ಬಿಜೆಪಿಯಲ್ಲಿ ನಡುಕ ಹುಟ್ಟಿಸಿತ್ತು. ಭಾರತ್ ಜೋಡೋ ಯಾತ್ರೆ ಕೂಡ ಅದೇ ರೀತಿ ನಡುಕ ಹುಟ್ಟಿಸಬೇಕು ಹೆಚ್ಚು ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಡಿದ ಡಿ.ಕೆ.ಶಿವಕುಮಾರ್, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ಮಹಿಳಾ ನಾಯಕಿಯರೊಬ್ಬರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಬಿಜೆಪಿಯಲ್ಲಿ ನಡುಕ ಹುಟ್ಟಿಸಿತ್ತು. ಹಾಗೇ ಭಾರತ್ ಜೋಡೋ ಪಾದಯಾತ್ರೆ ಕೂಡ ಆಗಬೇಕು ಎಂದರು.
ಕೇವಲ ಮುಖ ತೋರಿಸಿ ತಿಂಡಿ ತಿಂದು ಹೋಗೋದಲ್ಲ. ಪಾದಯಾತ್ರೆಯುದ್ದಕ್ಕೂ ಕೊನೆವರೆಗೂ ಇರಬೇಕು. ಪ್ರತಿಯೊಬ್ಬರೂ ಕೆಲ ದಿನಗಳ ಕಾಲ ಕಷ್ಟಪಡಿ. ಯಾರು ಬಂದಿದ್ರು ಯಾರು ಬಂದಿರಲಿಲ್ಲ ಎಂಬುದನ್ನು ಲೆಕ್ಕ ಹಾಕಿಸುತ್ತೇನೆ. ಎಲ್ಲದಕ್ಕೂ ಒಂದೊಂದು ಕಮಿಟಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೈಸೂರು ಜಿಲ್ಲೆಯವರು 10-15 ಸಾವಿರ ಜನರನ್ನು ಕರೆದುಕೊಂಡು ಬರಬೇಕು. ಸಿದ್ದರಾಮಯ್ಯ 5 ಸಾವಿರ ಜನರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಅದು ಕೇವಲ ದೂರದ ಜಿಲ್ಲೆಯ ಶಾಸಕರಿಗೆ ಮಾತ್ರ ಅನ್ವಯಿಸುತ್ತೆ. ಒಬ್ಬೊಬ್ಬ ನಾಯಕರೂ 100 ಜನರನ್ನು ಕರೆದುಕೊಂಡು ಬರಬೇಕು. ಈ ಮೂಲಕ ನೀವು ನಿಮ್ಮ ಮರ್ಯಾದೆ ಕಾಪಾಡಿಕೊಳ್ಳಿ. ನೀವು ಬರದಿದ್ದರೆ ಸಿದ್ದರಾಮಯ್ಯ ಮರ್ಯಾದೆ ಹೋಗುತ್ತೆ ಎಂದು ಹೇಳಿದ್ದಾರೆ.
ಟೀ ಶರ್ಟ್ ಮಾಡುವುದಿದ್ದರೆ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೋ ಹಾಕುವುದು ಬೇಡ. ಟೀ ಶರ್ಟ್ ಮೇಲೆ ರಾಹುಲ್ ಗಾಂಧಿ, ನಿಮ್ಮ ಫೋಟೋ ಹಾಕಿಸಿ. ಸಕ್ರಿಯವಾಗಿಲ್ಲದವರನ್ನು ಬಿಟ್ಟು ಬೇರೆಯವರನ್ನು ಸಿದ್ದಮಾಡಿ ಎಂದು ಹೇಳಿದ್ದಾರೆ.
ಕಾಲಕ್ಕೆ ತಕ್ಕಂತೆ ಎನ್ ಡಿ ಆರ್ ಎಫ್ ಮಾರ್ಗಸೂಚಿ ಬದಲಾಗಲಿ – ಚನ್ನರಾಜ್ ಹಟ್ಟಿಹೊಳಿ
https://pragati.taskdun.com/politics/let-ndrf-guidelines-change-with-time-channaraj-hattiholi/