ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಹಳೇ ಬೈಕ್ ಗೆ ಹೊಚ್ಚ ಹೊಸ ರೂಪ ಕೊಡಿಸಿದ್ದು, ಹಳೇ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು ಎಂದು ಸಂತಸ ಹಂಚಿಕೊಂಡಿದ್ದಾರೆ.
1981ರ ಮಾಡೆಲ್ ಹಳೇ ಯೆಝ್ಡಿ ರೋಡ್ ಕಿಂಗ್ ಬೈಕ್ ನ್ನು ಡಿ.ಕೆ.ಶಿವಕುಮಾರ್ ಇನ್ನೂ ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಮೊದಲ ಬೈಕ್ ಆಗಿದ್ದರಿಂದ ಆ ಬೈಕ್ ನ ಮೇಲೆ ಡಿ.ಕೆ.ಶಿವಕುಮಾರ್ ಗೆ ವಿಶೇಷ ಕಾಳಜಿ. ಅಲ್ಲದೇ ಅದು ಅವರಿಗೆ ಲಕ್ಕಿ ಬೈಕ್ ಕೂಡ ಆಗಿದೆ. ಕಳೆದ 30 ವರ್ಷಗಳಿಂದ ಆ ಬೈಕ್ ನನ್ನು ಮನೆಯಲ್ಲಿಯೇ ಹಾಗೇ ಇರಿಸಿದ್ದರು. ಇದೀಗ ಸುಪ್ರೀತ್ ಎಂಬ ಯುವಕ ಈ ಬೈಕ್ ನ್ನು ಹೊಸ ಬೈಕ್ ನ್ನಾಗಿ ಪರಿವರ್ತಿಸಿದ್ದಾನೆ. 2 ಲಕ್ಷ ರೂಪಾಯಿ ವೆಚ್ಚದಲ್ಲಿ ಹಳೇ ಬೈಕ್ ಹೊಸ ರೂಪ ತಾಳಿದೆ. ಇಂದು ಈ ಬೈಕ್ ನ್ನು ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖುಷಿ ಹಂಚಿಕೊಂಡಿದ್ದಾರೆ.
ಕಾಲೇಜ್ ಡೇಸ್ ನಲ್ಲಿ ಬೈಕ್ ಕ್ರೇಜ್ ಸಾಮಾನ್ಯ, ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು. ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಮೊದಲ ಬೈಕ್ ಅನ್ನು ಹೊಸ ವಿನ್ಯಾಸದಲ್ಲಿ ಕಂಡು ಪುಳಕಿತರಾದ ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರತಿಯೊಬ್ಬರಿಗೂ ತಮ್ಮ ಜೀವನದ ಮೊದಲ ಬೈಕ್ ಜತೆಗೆ ವಿಶೇಷ ಬಾಂಧವ್ಯ, ಭಾವನಾತ್ಮಕ ಸಂಬಂಧ ಇರುತ್ತದೆ. ಬಹು ವರ್ಷಗಳ ನಂತರ ಮತ್ತೆ ತಮ್ಮ ಬೈಕ್ ಅನ್ನು ಕಂಡರೆ ನೂರೆಂಟು ನೆನಪುಗಳು ಗರಿ ಬಿಚ್ಚಿಕೊಳ್ಳುತ್ತವೆ. ಕಣ್ಮುಂದೆ ಹಾದು ಹೋಗುತ್ತವೆ. ಅಂತಹ ಘಳಿಗೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಸಾಕ್ಷಿಯಾದರು.
ವಿಂಟೇಜ್ ಬೈಕ್ ಪ್ರೇಮಿಯಾಗಿರುವ ಸುಪ್ರೀತ್ ಎಂಬುವವರು ಭಾನುವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಡಿಸಿಎಂ ಅವರ ಅವರು ಕಾಲೇಜು ದಿನಗಳಲ್ಲಿ ಬಳಸಿದ್ದ ಯಜ್ಡಿ (Yezde) ಬೈಕ್ (ನಂಬರ್ CAE 7684) ಅನ್ನು ಮರುವಿನ್ಯಾಸ ಮಾಡಿ ಸದಾಶಿವನಗರದ ನಿವಾಸಕ್ಕೆ ತಂದು ನಿಲ್ಲಿಸಿದಾಗ ಅದನ್ನು ಕಂಡ ಶಿವಕುಮಾರ್ ಅವರು ಪುಳಕಿತರಾದರು.
ತಾವೇ ಬೈಕ್ ಕಿಕ್ ಮಾಡಿ ಸ್ಟಾರ್ಟ್ ಮಾಡಿ ಖುಷಿಪಟ್ಟರು. “ನಾನು ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಬೈಕ್ ಇದು, ಕನಕಪುರದ ಮನೆಯಲ್ಲಿ ಧೂಳು ಹಿಡಿದಿತ್ತು. ಸುಮಾರು 40 ವರ್ಷಗಳ ನಂತರ ನನ್ನ ಸ್ನೇಹಿತರು ಅದಕ್ಕೆ ಹೊಸ ರೂಪ ಕೊಟ್ಟು ತಂದಿದ್ದಾರೆ” ಎಂದು ಆನಂದ ತುಂದಿಲರಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ