ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈಗಾಗಲೇ 6 ಬಾರಿ ಬಜೆಟ್ ಮಂಡಿಸಿ ಅನುಭವವಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪ್ರಸಕ್ತ ಸಾಲಿನ ಬಜೆಟ್ ಅತ್ಯಂತ ವೀಕೆಸ್ಟ್ ಬಜೆಟ್ ಶಕ್ತಿ, ಧ್ವನಿ, ಹಣ, ದಿಕ್ಕು, ದೆಸೆ ಏನೂ ಇಲ್ಲದ ಬಜೆಟ್ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್ಗಿಂತಲೂ ದುರ್ಬಲವಾಗಿದೆ ಎಂದು ಹರಿಹಾಯ್ದರು. ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು ಖಾರ ಇರುತ್ತೆ. ಈ ಬಜೆಟ್ನಲ್ಲಿ ಖಾರವೂ ಇಲ್ಲ, ಉಪ್ಪೂ ಇಲ್ಲ, ಶಕ್ತಿಯೂ ಇಲ್ಲ ಎಂದು ವ್ಯಂಗ್ಯ ಮಾಡಿದರು.
ಯಡಿಯೂರಪ್ಪ ಅವರು ಹುರುಪಿನಲ್ಲಿ ಸರ್ಕಾರ ಮಾಡಿದರು. ಆದರೆ ಆ ಹುರುಪು ಅವರ ಬಜೆಟ್ನಲ್ಲಿ ಕಾಣಿಸುತ್ತಿಲ್ಲ. ಜಿಎಸ್ಟಿ ವಿಫಲವಾಗಿದೆ ಎಂದು ಬಜೆಟ್ ಪುಸ್ತಕದಲ್ಲೇ ಯಡಿಯೂರಪ್ಪ ಬರೆದುಕೊಂಡಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮಂಡಿಸಿದ್ದ ಬಜೆಟ್ಟೇ ದುರ್ಬಲ ಅಂದುಕೊಂಡಿದ್ದೆ. ಅದಕ್ಕಿಂತ ದುರ್ಬಲ ಬಜೆಟ್ ಅನ್ನು ಯಡಿಯೂರಪ್ಪ ನೀಡಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯಕ್ಕೂ ಶಕ್ತಿ ಕೊಡಲಿಲ್ಲ. ಜನರಿಗೂ ಶಕ್ತಿ ಕೊಡಲಿಲ್ಲ. ಇದು ರಾಜ್ಯಕ್ಕೆ ದೊಡ್ಡ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ