ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ನಡೆದಿರುವ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಹಾಗೂ ಇಡಿ ದಾಳಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಸಿಬಿಐ ದಾಳಿ ನಡೆದಿರಬಹುದು. ಹೀಗಾಗಿ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದರು.
ಸಮಾಜದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು. ಇದರಲ್ಲಿ ನಂಬಿಕೆ ಹೆಚ್ಚುವ ರೀತಿಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ಹೊರಬರಲಿ. ಇನ್ನು ತನಿಖೆಗೆ ಸಹಕಾರ ನೀಡುವುದಾಗಿ ಸ್ವತಃ ಡಿಕೆಶಿ ಹೇಳಿದ್ದಾರೆ. ಅದರಂತೆ ಅವರು ಸಹಕಾರ ನೀಡಲಿ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲು ಇದೊಂದು ಅವಕಾಶ. ಸಿಕ್ಕಿದ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಳ್ಳಲಿ ಎಂದು ಡಿಸಿಎಂ ಹೇಳಿದರು.
ಇಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಇದೊಂದು ರಾಜಕೀಯ ಪ್ರೇರಿತ ಎಂದು ಹೇಳುವ ಮೂಲಕ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ