Karnataka NewsPolitics

*ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಚನ್ನಪಟ್ಟಣ ಉಪಚುನಾವಣೆ ಅಖಾಡ ರಂಗೇರಿದೆ. ಅಭ್ಯರ್ಥಿಗಳ ಘೋಷಿಸುವ ಮೊದಲೇ ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡ ಭಾರಿ ಸದ್ದು ಮಾಡುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರ ನಡುವೆ ಪ್ರತಿಷ್ಠೆಯ ಕಾದಾಟ ಆರಂಭವಾಗಿದೆ.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ನಾನೇ ಎಂದು ಘೋಷಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವೀರಭದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ..ಶಿವಕುಮಾರ್, ಚನ್ನಪಟ್ಟಣ ಬೈ ಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿ ನಾನೇ ಎಂದು ಹೇಳಿದ್ದಾರೆ.

ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಗೊಂದಲ ಬೇಡ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ.ಶಿವಕುಮಾರ್

“ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರಗಲಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ನೆಲಮಂಗಲದ ವೀರಭದ್ರೇಶ್ವರ ದೇವಾಲಯದ ಬಳಿ ಡಿಸಿಎಂ ಅವರು ಗುರುವಾರ ಹೀಗೆ ಹೇಳಿದರು.

ಈ ಹಿಂದೆ ಚನ್ನಪಟ್ಟಣದಲ್ಲಿ ಸ್ಥಳೀಯ ಶಾಸಕರು ಧ್ವಜಾರೋಹಣ ನೆರವೇರಿಸಿಲ್ಲ ಎನ್ನುವ ಬಗ್ಗೆ ಕೇಳಿದಾಗ “ನಾನು ಕಳೆದ ಐದು ವರ್ಷಗಳಿಂದ ರಾಮನಗರದಲ್ಲಿ ಧ್ವಜಾರೋಹಣ ಮಾಡಿದ್ದೇನೆ. ಚನ್ನಪಟ್ಟಣದ ಬಗ್ಗೆ ಅಧಿಕಾರಿಗಳ ಬಳಿ ಕೇಳಿದಾಗ ಆರು ವರ್ಷಗಳಿಂದ ಯಾರೂ ಬಂದು ಧ್ವಜಾರೋಹಣ ನಡೆಸಿಲ್ಲ ಎಂದರು. ಅವರಿಗೆ ದೇಶದ ಮೇಲೆ ವಿಶ್ವಾಸವಿಲ್ಲ ಎಂದೆನಿಸುತ್ತದೆ. ಅವರು ಏನಾದರು ಮಾಡಿಕೊಳ್ಳಲಿ, ನಾನು ನನ್ನ ಕರ್ತವ್ಯ ಮಾಡಿದ್ದೇನೆ” ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಬಗ್ಗೆ ಒಂದಷ್ಟು ಸಚಿವರು ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಳಿದಾಗ “ನಿಲ್ಲಿಸುವ ಬಗ್ಗೆ ಯಾವ ಸಚಿವರು ಮಾತನಾಡುತ್ತಿಲ್ಲ. ಆದರೆ ಅನುಕೂಲ ಇರುವವರು ಬೇಡ ಎಂದು ಹೇಳುತ್ತಿದ್ದಾರೆ. ಅವರಿಗೂ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಬಗ್ಗೆ ಅಭಿಪ್ರಾಯ ಬರುತ್ತಿದೆ. ಇದರಬಗ್ಗೆ ಆನಂತರ ಯೋಚನೆ ಮಾಡುತ್ತೇವೆ. ಗ್ಯಾರಂಟಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ” ಎಂದು ಸ್ಪಷ್ಟ ಪಡಿಸಿದರು.

ಪ್ರಯತ್ನಕ್ಕಿಂತ ಪ್ರಾರ್ಥನೆಗೆ ಕಾರ್ಯಗಳು ಬೇಗ ಸಿದ್ದಿಸುತ್ತವೆ. ಈ ವರ್ಷ ದೇಶ, ರಾಜ್ಯಕ್ಕೆ ಉತ್ತಮ, ಮಳೆ ಬೆಳೆಯಾಗಲಿ, ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button