ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ನಮ್ಮ ಪಕ್ಷದ ಬೆಂಬಲವಿದೆ. ಕೊರೋನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸರ್ವಪಕ್ಷ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಕ್ರಮಕ್ಕೆ ನಮ್ಮ ಬೆಂಬಲವಿದೆ. ಆದರೆ ಈ ಪಿಡುಗು ನಿವಾರಣೆ ವಿಚಾರದಲ್ಲಿ ಡಿಸಿಎಂಗಳು, ಸಚಿವರ ನಡುವೆ ಸಮನ್ವಯ ಇಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ, ಭಯ ಮೂಡಿಸುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಹೋಗುವುದಿಲ್ವ. ಆದರೆ ಅವರಲ್ಲಿ ಸಮನ್ವಯ ತರುವ ಜವಾಬ್ದಾರಿ ಸಿಎಂ ಆಗಿ ನಿಮ್ಮದು. ಇಲ್ಲದಿದ್ದರೆ ಜನ ಮತ್ತಷ್ಟು ಹೆದರಿ ಹೋಗುತ್ತಾರೆ ಎಂದು ಹೇಳಿದರು.
ಸಾಮಾನ್ಯ ಜನ, ಕೊರೋನಾ ಸೋಂಕು ನಿವಾರಣೆಗೆ ಹೋರಾಡುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಯಾರಿಗೂ ಮಾಸ್ಕ್ ಸಿಗುತ್ತಿಲ್ಲ. ಇದನ್ನು ಉಚಿತವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಕ್ಷಕರಿಗೇ ಸುರಕ್ಷೆ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ದಿನನಿತ್ಯದ ವಸ್ತುಗಳು, ಆಹಾರ ಸಿಗದೆ ಜನ ಕಂಗಾಲಾಗಿದ್ದಾರೆ. ಇಲ್ಲಿ ಇರಲೂ ಆಗದೆ, ತಮ್ಮೂರಿಗೆ ಹೋಗಲು ಆಗದೆ ಪರಿತಪಿಸುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ಪರಿಹಾರ ಕಲ್ಪಿಸಬೇಕು. ಕೊರೋನಾ ನಿಯಂತ್ರಣ, ಪರಿಸ್ಥಿತಿ ನಿರ್ವಹಣೆಗೆ ಸರಕಾರದ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯ (WHO) ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕೇ ಹೊರತು ಸರಕಾರದ ಪ್ರತಿನಿಧಿಗಳ, ಯಾವುದೋ ರಾಜಕೀಯ ಪಕ್ಷದ ತತ್ವ, ಸಿದ್ಧಾಂತ, ರಾಜಕೀಯ ಲಾಭಕ್ಕೆ ಬಳಕೆ ಆಗಬಾರದು. ಕೊರೋನಾ ಇಡೀ ರಾಜ್ಯದ, ದೇಶದ, ವಿಶ್ವದ ಸಮಸ್ಯೆ. ಬರೀ ಆಡಳಿತರೂಢ ಸರಕಾರದ, ಪಕ್ಷದ ಸಮಸ್ಯೆ ಅಲ್ಲ. ಇದು ಎಲ್ಲರ ಸಮಸ್ಯೆ. ಎಲ್ಲರೂ ಒಗ್ಗೂಡಿ ಹೋರಾಡಬೇಕು. ಈ ವಿಚಾರದಲ್ಲಿ ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂಬುದಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ