GIT add 2024-1
Laxmi Tai add
Beereshwara 33

*ಇಡಿ ಪ್ರಕರಣ ರದ್ದು: ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಧೀಶರಿಗೆ ಸಾಷ್ಟಾಂಗ ನಮನಗಳು ಎಂದ ಡಿ.ಕೆ.ಶಿವಕುಮಾರ್*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: “ನಾವು ನೀರಿನ ವಿಚಾರವಾಗಿ ಬಹಳ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದು, ಏನಾದರೂ ಆಗಲಿ ನಾವು ಬೆಂಗಳೂರಿಗೆ ನೀರನ್ನು ಒದಗಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ವಿಧಾನಸೌಧದಲ್ಲಿ ಬರ ಕುರಿತ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಿಷ್ಟು;

“ಬೆಂಗಳೂರಿನಲ್ಲಿ ಈ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ನಾವು ಮೇಕೆದಾಟು ಯೋಜನೆ ಆಗ್ರಹಿಸಿ ನೀರಿಗಾಗಿ ನಡಿಗೆ ಪಾದಯಾತ್ರೆ ಮಾಡಿದೆವು.

ಬೆಂಗಳೂರಿನ ಪರಿಸ್ಥಿತಿಯನ್ನು ಕಂಡು ಕೇಂದ್ರ ಸರ್ಕಾರ ಈಗಲಾದರೂ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಸಮಸ್ಯೆಗೆ ಪರಿಹಾರ ನೀಡಬೇಕು ಒತ್ತಾಯಿಸುತ್ತೇನೆ.

ಬರ ಪರಿಸ್ಥಿತಿಯಲ್ಲಿ ನೀರಿನ ಅಭಾವವನ್ನು ನೀಗಿಸಲು. ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಸೇರಿದಂತೆ ಎಲ್ಲಾ ಸಚಿವರು ಹಾಗೂ ಅಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಗರದಲ್ಲಿ ನೀರು ಇಲ್ಲದಿದ್ದರೆ 15 ಕಿ. ಮೀ ಸುತ್ತಮುತ್ತಲ ನೀರಿನ ಮೂಲಗಳನ್ನು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ.

ಇದೇ ರೀತಿ ಬೆಂಗಳೂರಿನಲ್ಲೂ ಸೂಚನೆ ನೀಡಿದ್ದೇವೆ. ಬೆಂಗಳೂರಿನಲ್ಲಿ ಕುಡಿಯುವ ನೀರು ಕೊರತೆ ನೀಗಿಸಲು ಹೊಸಕೋಟೆ, ರಾಮನಗರ, ಚನ್ನಪಟ್ಟಣ, ಮಾಗಡಿ, ರಾಮನಗರದಿಂದ ದೊಡ್ಡ ಟ್ಯಾಂಕರ್ ನಲ್ಲಿ ನೀರು ತರಲು ಸೂಚಿಸಿದ್ದೇವೆ.

ಕೆಲವು ಟ್ಯಾಂಕರ್ ಗಳು ₹600ಕ್ಕೂ ನೀರು ನೀಡುತ್ತಿದ್ದಾರೆ. ಮತ್ತೆ ಕೆಲವರು 3 ಸಾವಿರಕ್ಕೂ ನೀಡುತ್ತಿದ್ದಾರೆ. ಹೀಗಾಗಿ ಎಲ್ಲರನ್ನೂ ನೋಂದಣಿ ಮಾಡಿಕೊಳ್ಳಲು ತಿಳಿಸಿದ್ದೇವೆ. ಎಲ್ಲರ ನೋಂದಣಿ ನಂತರ ಎಲ್ಲವನ್ನೂ ಒಂದು ವ್ಯವಸ್ಥೆ ಮೂಲಕ ನೀಡಲಾಗುವುದು. ನೀರನ್ನು ಎಷ್ಟು ದೂರದಿಂದ ತರಲಾಗಿದೆ ಎಂದು ನೋಡಿ ದರ ನಿಗದಿ ಮಾಡುತ್ತೇವೆ.”

ನೀರಿನ ಟ್ಯಾಂಕರ್ ವಶಕ್ಕೆ ತೆಗೆದುಕೊಳ್ಳುವುದರಿಂದ ಕೆಲವು ಅಪಾರ್ಟ್ಮೆಂಟ್ ಗಳಿಗೆ ಸಮಸ್ಯೆ ಎದುರಾಗಲಿದೆ ಎಂಬ ವಿಚಾರವಾಗಿ ಕೇಳಿದಾಗ, “ನಾವು ಎಲ್ಲರಿಗೂ ನೆರವು ನೀಡುತ್ತೇವೆ. ಅಪಾರ್ಟ್ಮೆಂಟ್ ಗಳಿಗೂ ನಾವು ನೀರನ್ನು ಪೂರೈಸುತ್ತೇವೆ. ಅಪಾರ್ಟ್ಮೆಂಟ್ ನಿವಾಸಿಗಳಾಗಲಿ, ಕೊಳಗೇರಿ ನಿವಾಸಿಗಳಾಗಲಿ ಎಲ್ಲರಿಗೂ ನೆರವಾಗುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

Emergency Service

ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಧೀಶರಿಗೆ ಸಾಷ್ಟಾಂಗ ನಮನಗಳು:

ತಮ್ಮ ವಿರುದ್ಧದ ಇಡಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬಗ್ಗೆ ಕೇಳಿದಾಗ, “ನನ್ನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನನಗೆ ರಿಲೀಫ್ ಕೊಟ್ಟಿದೆ ಎಂಬ ಮಾಹಿತಿ ಬಂದಿದೆ. ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಧೀಶರಿಗೆ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ. ನ್ಯಾಯ ಪೀಠದಿಂದ ಅನ್ಯಾಯ ಆಗುವುದಿಲ್ಲ ಎಂದು ನಂಬಿದ್ದೆ. ಅದರಂತೆ ನ್ಯಾಯ ಸಿಕ್ಕಿದ್ದು ಸಂತೋಷವಾಗಿದೆ. ನನ್ನ ಪರವಾಗಿ ನಿಂತ ನಮ್ಮ ನಾಯಕರು, ಸ್ನೇಹಿತರು, ದೇಶದಾದ್ಯಂತ ನನಗೆ ಒಳ್ಳೆಯದನ್ನು ಬಯಸಿದ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ.

ನ್ಯಾಯಾಲಯದ ಆದೇಶ ಪ್ರತಿ ಸಿಕ್ಕ ನಂತರ ಪೂರ್ಣಪ್ರಮಾಣದ ಹೇಳಿಕೆ ನೀಡುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ಸಿಕ್ಕ ಅತ್ಯಂತ ಸಂತೋಷದ ದಿನ ಇಂದು. ಸಿಬಿಐನವರು ಈಗಲೂ ಏನೆಲ್ಲಾ ಮಾಡುತ್ತಿದ್ದಾರೆ ಎಂದು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಅವರು ಮೇಲ್ಮನವಿ ಹಾಕಲಿ. ಅವರು ಎಲ್ಲಾ ರೀತಿಯ ಹೋರಾಟ ಮಾಡಲಿ. ನಾನು ಸಿದ್ಧನಿದ್ದೇನೆ” ಎಂದು ತಿಳಿಸಿದರು.

ಈ ತೀರ್ಪಿನಿಂದ ನಿಮಗೆ ಬಲ ದೊಡ್ಡ ಬಲ ಸಿಕ್ಕಿದೆಯೇ ಎಂದು ಕೇಳಿದಾಗ, “ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನ್ನ ಮನೆ ಮೇಲೆ ಐಟಿ ದಾಳಿ ನಡೆದ ಮೊದಲ ದಿನದಿಂದಲೂ ನಾನು ಆತ್ಮವಿಶ್ವಾಸದಿಂದ ಎದುರಿಸಿದ್ದೆ. ಈಗಲೂ ಆತ್ಮವಿಶ್ವಾಸದಲ್ಲಿ ಇದ್ದೇನೆ, ಮುಂದೆಯೂ ಇರುತ್ತೇನೆ. ಅವರು ನನಗೆ ಎಷ್ಟು ತೊಂದರೆ ಕೊಡಲು ಪ್ರಯತ್ನಿಸುತ್ತಾರೋ ನಾನು ರಾಜಕೀಯವಾಗಿ ಅಷ್ಟೇ ಎತ್ತರಕ್ಕೆ ಬೆಳೆಯುತ್ತೇನೆ ಎಂಬ ವಿಶ್ವಾಸವಿದೆ. ಸರ್ಕಾರ ತನಿಖೆಯ ಅನುಮತಿ ಹಿಂಪಡೆಡಿದ್ದರೂ ಸಿಬಿಐ ನನ್ನ ಆಪ್ತರಿಗೆ ಕಿರುಕುಳ ಮುಂದುವರಿಸಿದೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ” ಎಂದು ತಿಳಿಸಿದರು.

ನಿಮ್ಮ ವಿರೋಧಿಗಳಿಗೆ ಏನು ಹೇಳುತ್ತೀರಿ ಎಂದಾಗ, “ನನಗೆ ಯಾರೂ ವಿರೋಧಿಗಳಿಲ್ಲ. ಇದು ಪ್ರಕೃತಿ ನಿಯಮ. ನಮಗೆ ತೊಂದರೆ ಕೊಡುವವರೆಲ್ಲರೂ ನಮಗೆ ಒಂದು ರೂಪ ನೀಡುತ್ತಿರುತ್ತಾರೆ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನಮಗೆ ಇಂತಹ ಏಟು ಬಿದ್ದಾಗ ನಾವು ಉತ್ತಮ ರೂಪ ಪಡೆಯುತ್ತೇವೆ” ಎಂದು ತಿಳಿಸಿದರು.

ಡಿಸಿಎಂ ಹಾಗೂ ಸಿಎಂ ಕಚೇರಿಗೆ ಬೆದರಿಕೆ ಇ- ಮೇಲ್:

ನಿಮಗೆ ಹಾಗೂ ಮುಖ್ಯಮಂತ್ರಿ ಕಚೇರಿಗೆ ಬೆದರಿಕೆ ಇ ಮೇಲ್ ಬಂದಿರುವ ಬಗ್ಗೆ ಕೇಳಿದಾಗ, “ಎರಡು ಮೂರು ದಿನಗಳ ಹಿಂದೆಯೇ ಬಂದಿದ್ದು, ಇದನ್ನು ಬಹಿರಂಗಗೊಳಿಸಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ತಿಳಿಸಿದರು.

ಬೆದರಿಕೆ ಇ ಮೇಲ್ ನಲ್ಲಿ ಏನಿದೆ ಎಂದು ಕೇಳಿದಾಗ, “ಶಾಹಿರ್ ಖಾನ್10786 ಎಂಬ ಇ ಮೇಲ್ ಮೂಲಕ ನಮಗೆ 5 ಮಿಲಿಯನ್ ಡಾಲರ್ ಹಣ ಹಾಕದಿದ್ದರೆ ಬಸ್, ರೈಲು, ದೇವಾಲಯ, ಹೋಟೆಲ್ ಸೇರಿದಂತೆ ಕರ್ನಾಟಕದಾದ್ಯಂತ ಸ್ಫೋಟ ನಡೆಸುತ್ತೇವೆ. ಅಂಬಾರಿ ಉತ್ಸವ್ ಬಸ್ ಸ್ಫೋಟಗೊಳಿಸಿ ಮತ್ತೊಂದು ಟ್ರೇಲರ್ ತೋರಿಸುತ್ತೇವೆ. ನಂತರ ನಮ್ಮ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುತ್ತೇವೆ ಎಂದು ಎರಡು ಮೇಲ್ ಗಳಲ್ಲಿ ತಿಳಿಸಿದ್ದಾನೆ. ಇದು ಬೋಗಸ್ ಅಥವಾ ನಿಜವೋ ಗೊತ್ತಿಲ್ಲ. ನಾವು ಮೇಲ್ ಬಂದ ಕೂಡಲೇ ಪೊಲೀಸರಿಗೆ ಕಳುಹಿಸಿದ್ದು ಅವರು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.

Bottom Add3
Bottom Ad 2