*ನಾಲ್ಕು ಗ್ಯಾರಂಟಿಗಳು ಜಾರಿಯಾಗಿವೆ; ಯುವನಿಧಿ ಯೋಜನೆಯೂ ಶೀಘ್ರವೇ ಜಾರಿ; ಡಿಸಿಎಂ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ನಮ್ಮ ಸರಕಾರ ಗ್ಯಾರಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ನಮ್ಮ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಿನ್ನೆ ಮಮತಾ ಬ್ಯಾನರ್ಜಿ, ಸ್ಟಾಲಿನ್ ಅವರು ಸಿಕ್ಕಾಗ ನಮ್ಮ ಯೋಜನೆಗಳನ್ನು ಅವರ ರಾಜ್ಯದಲ್ಲಿ ಜಾರಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು. ಇದು ಕರ್ನಾಟಕದ ಮಾಡೆಲ್ ಆಗಿದೆ ಎಂದರು.
ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದಾಗ ಅವರು ಈ ವರ್ಷ ಎಷ್ಟು ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೀರಿ ಎಂದು ಕೇಳಿದರು. ಪ್ರತಿ ವರ್ಷ ಒಂದು ಎರಡು ಯೋಜನೆ ಜಾರಿ ಮಾಡುತ್ತಾರೆ ಎಂದು ಅವರು ಭಾವಿಸಿದ್ದರು. ನಾವು ಒಂದೇ ವರ್ಷದಲ್ಲಿ ಈ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದೆ. ಅದರಂತೆ ಬಜೆಟ್ ನಲ್ಲಿ ಹಣ ಮೀಸಲಿಟ್ಟು ಜಾರಿಗೆ ಮುಂದಾಗಿದ್ದೇವೆ. ಬಿಜೆಪಿ ಯವರು 600 ಭರವಸೆ ನೀಡಿ 550 ಈಡೇರಿಸಲಿಲ್ಲ. ನಾವು ಆ ರೀತಿ ಮಾಡುವುದಿಲ್ಲ. ಈಗಾಗಲೇ ನಾಲ್ಕು ಯೋಜನೆ ಜಾರಿ ಆಗಿದ್ದು, ಯುವನಿಧಿ ಯೋಜನೆ ಜಾರಿಗೆ ಇನ್ನು 4-5 ತಿಂಗಳು ಕಾಲಾವಕಾಶವಿದೆ.
ದೇವರು ಕೇವಲ ಅವಕಾಶ ನೀಡುತ್ತಾನೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ಆಗಬೇಕಾದರೆ ಮಹಿಳೆಯರು ಹಾಗೂ ಯುವಕರಿಂದ ಮಾತ್ರ ಸಾಧ್ಯ. ಹೀಗಾಗಿ ಅವರಿಗೆ ಶಕ್ತಿ ತುಂಬುವ ಕಾರ್ಯಕ್ರಮ ಮಾಡುತ್ತೇವೆ ಎಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನವೇ ಹೇಳಿದ್ದೆ.
ಶಿಕ್ಷಕರಿಗೆ ಮಾಡುವ ಸಹಾಯ ಸಹಾಯವಲ್ಲ, ಅದು ಪುಣ್ಯ. ಸಹೋದರ, ಸಹೋದರಿಯರಿಗೆ ಮಾಡುವ ಸಹಾಯ ಸಹಾಯವಲ್ಲ, ಅದು ಕರ್ತವ್ಯ. ತಂದೆಗೆ ಮಾಡಿದ ಸಹಾಯ, ಸಹಾಯವಲ್ಲ ಅದು ಭಾಗ್ಯ. ತಾಯಿಗೆ ಮಾಡಿದ ಸಹಾಯ ಸಹಾಯವಲ್ಲ, ಅದು ಋಣ. ಅದೇ ರೀತಿ ರಾಜ್ಯದ ಜನ, ಅದರಲ್ಲೂ ತಾಯಂದಿರಿಗೆ ಮಾಡುತ್ತಿರುವ ಈ ಗೃಹಲಕ್ಷ್ಮಿ ಯೋಜನೆ ಸಹಾಯವಲ್ಲ, ಇದು ನಮ್ಮ ಋಣ ಸಂದಾಯ, ಇದು ನಮ್ಮ ಭಾಗ್ಯ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನಾನು ಹಾಗೂ ಸಿದ್ದರಾಮಯ್ಯನವರು ರಾಜ್ಯದ ಜನತೆ ಮುಂದೆ ಮತ ಕೇಳಲು ಹೋದಾಗ ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆಯನ್ನು, ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ನಾ ನಾಯಕಿ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆವು.
ಬಿಜೆಪಿಯವರು ಈ ಕಾರ್ಯಕ್ರಮಕ್ಕೆ ಹೆಚ್ಚು ಪ್ರಚಾರ ಸಿಗಬಾರದು ಎಂದು ವಿಧಾನ ಮಂಡಲದಲ್ಲಿ ಹೋರಾಟ ಮಾಡುತ್ತಿದ್ದಾರೆ. ಇಂದು ಈ ಕಾರ್ಯಕ್ರಮದಲ್ಲಿ ಬೆಳಗಿಸಿರುವ ಜ್ಯೋತಿ ಇಡೀ ರಾಜ್ಯದ ಜನರ ಮಹಿಳೆಯರ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ತುಂಬುವ ಜ್ಯೋತಿಯಾಗಿದೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಇದೆ. ಅದೇ ರೀತಿ ಇಂದು ಬೆಲೆ ಏರಿಕೆಯಿಂದ ಪರಿತಪಿಸುತ್ತಿರುವ ಮಹಿಳೆಯರು ಹಾಗೂ ಅವರ ಕುಟುಂಬಕ್ಕೆ ನೆರವಾಗಲು ನಾವು ಐದು ಗ್ಯಾರಂಟಿ ನೀಡಿದ್ದೇವೆ. ಗೃಹ ಜ್ಯೋತಿ ಯೋಜನೆ ಮೂಲಕ ಸುಮಾರು 1500, ಗೃಹಲಕ್ಷ್ಮಿ ಯೋಜನೆ ಮೂಲಕ 2000, ಶಕ್ತಿ ಯೋಜನೆ ಮೂಲಕ ಉಚಿತ ಸಾರಿಗೆ ಮೂಲಕ ಆರ್ಥಿಕ ನೆರವು ನೀಡಿದ್ದೇವೆ.
ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಭೀಮಾಭಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ಗಳಿಗೆಯಲ್ಲಿ, ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧಕ್ಕೆ ಅಡಿಪಾಯ ಹಾಕಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ದೇಶಕ್ಕಾಗಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಗಳಿಗೆಯಲ್ಲಿ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ.
ಶಕ್ತಿ ಯೋಜನೆಯನ್ನು ವಿಧಾನಸೌಧದ ಮುಂದೆ ಆರಂಭಿಸಿದ್ದೆವು. ಅನ್ನಭಾಗ್ಯ ಯೋಜನೆಯ ಬೃಹತ್ ಕಾರ್ಯಕ್ರಮವನ್ನು ಮೈಸೂರಿನಲ್ಲಿ, ಆಗಸ್ಟ್ 16 ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬೃಹತ್ ಕಾರ್ಯಕ್ರಮ ಮಾಡಲಾಗುವುದು.
ಈ ಯೋಜನೆಗಳು ಯಾವುದೇ, ಜಾತಿ, ಧರ್ಮಕ್ಕೆ ಸೀಮಿತವಲ್ಲ. ಪ್ರತಿ ಮನೆ ಯಜಮಾನಿಗೆ ಮುಟ್ಟಿಸುವ ಯೋಜನೆ. ಸರ್ಕಾರಿ ಕೇಂದ್ರಗಳ ಜತೆಗೆ ಪ್ರಜಾಪ್ರತಿನಿಧಿಗಳ ಮೂಲಕ ಈ ಯೋಜನೆಗಳಿಗೆ ಅರ್ಜಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮಗಳನ್ನು ಬಹಳ ಪಾರದರ್ಶಕವಾಗಿ ಜಾರಿ ಮಾಡಲು ಕ್ರಮ ಕೈಗೊಂಡಿದ್ದಾರೆ.
ನಾವು ಈ ಯೋಜನೆಗಳನ್ನು ಬರೀ ಪ್ರಣಾಳಿಕೆಯಲ್ಲಿ ಮಾತ್ರವಲ್ಲ, ಗ್ಯಾರಂಟಿ ಯೋಜನೆಯಾಗಿ ಘೋಷಣೆ ಮಾಡಿದೆವು.ಮಹಿಳೆಯರಿಗೆ ನೀಡುವ ಈ ಸಹಾಯಧನ ಮಾರುಕಟ್ಟೆಯಲ್ಲಿ ಹಣದ ಹರಿವಿಗೆ ಸಹಕಾರಿಯಾಗಿದೆ. ಸಾಯಿಬಾಬ ಅವರು ಒಮ್ಮೆ ಹಣ ಹಾಗೂ ರಕ್ತ ನಿರಂತರವಾಗಿ ಚಲನೆಯಲ್ಲಿರಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದರು. ಅದೇ ರೀತಿ ಈಗ ಮಹಿಳೆಯರಿಗೆ ನಾವು ನೀಡುವ ಹಣ ಮಾರುಕಟ್ಟೆಯಲ್ಲಿ ಹರಿದಾಡುತ್ತದೆ. ಆಗ ಆರ್ಥಿಕತೆಗೆ ಶಕ್ತಿ ಬರುತ್ತದೆ. ಸರ್ಕಾರಕ್ಕೆ ಒಳ್ಳೆಯದಾಗಲಿ ಎಂದು ಧರ್ಮಸ್ಥಳದ ಮಂಜುನಾಥನ ಬಳಿ ಪೂಜೆ ಮಾಡಿಸುತ್ತಿದ್ದಾರೆ ಎಂದು ಧರ್ಮಧಿಕಾರಿ ವೀರೇಂದ್ರ ಹೆಗಡೆ ಅವರೇ ಸರಕಾರಕ್ಕೆ ಪ್ರಶಂಸೆ ಪತ್ರ ಬರೆದಿದ್ದಾರೆ.
ಪ್ರಜಾಪ್ರತಿನಿಧಿಗಳು ಮನೆ ಮನೆಗೂ ಹೋಗಿ ಜನರಿಗೆ ಉಚಿತವಾಗಿ ಅರ್ಜಿ ನೋಂದಣಿ ಮಾಡಬೇಕು. ಯಾರೋಬ್ಬರೂ ಹಣ ಪಡೆಯಬಾರದು.
ನಮಗೆ ಅಧಿಕಾರ ನೀಡಿರುವ ರಾಜ್ಯದ ಜನರ ಋಣ ತೀರಿಸಲು ನಾವು ಕೆಲಸ ಮಾಡುತ್ತೇವೆ. ಈ ಒಂದು ಯೋಜನೆಗೆ 36 ಸಾವಿರ ಕೋಟಿ ರೂ. ನೀಡಲಾಗಿದೆ. ಶೇ.50ರಷ್ಟು ಜನಸಂಖ್ಯೆ ಇರುವ ಮಹಿಳೆಯರ ಈ ಯೋಜನೆಗೆ ಅತಿ ಹೆಚ್ಚು ಹಣ ನೀಡಲಾಗಿದೆ. ನನ್ನ ಹಾಗೂ ಸಿದ್ದರಾಮಯ್ಯ ಅವರ ಇಲಾಖೆಗಳಿಗಿಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.
ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದರೆ, ದೇಶವೇ ಸುಭದ್ರವಾಗಿರುತ್ತದೆ ಎಂದು ನೆಹರೂ, ಇಂದಿರಾ ಗಾಂಧಿ ಅವರೇ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಮಹಿಳೆಯರ ಸಶಕ್ತೀಕರಣಕ್ಕೆ ಕಾರ್ಯಕ್ರಮ ನೀಡಲಾಗಿದೆ. ಮೋಟಮ್ಮ ಅವರು ಸಚಿವೆಯಾಗಿದ್ದಾಗ ಸ್ತ್ರೀಶಕ್ತಿ ಯೋಜನೆ ನೀಡಲಾಗಿತ್ತು.
ನಾವು ಈ ಯೋಜನೆ ಘೋಷಣೆ ಮಾಡುವ ಸಂದರ್ಭದಲ್ಲಿ ಬಿಜೆಪಿ ಕೂಡ ಹಣ ನೀಡುವುದಾಗಿ ಜಾಹೀರಾತು ನೀಡಿತ್ತು. ಬಜೆಟ್ ನಲ್ಲೂ ಸ್ವಲ್ಪ ಹಣ ಘೋಷಣೆ ಮಾಡಿದರು. ಆದರೂ ಅವರಿಂದ ನೀಡಲು ಆಗಲಿಲ್ಲ. ಬಿಜೆಪಿಯಿಂದ ಮಹಿಳೆಯರು ಹಾಗೂ ಬಡವರ ಕಲ್ಯಾಣ ಅಸಾಧ್ಯ. ಅವರಿಗೆ ಈ ವರ್ಗದವರ ಬಗ್ಗೆ ಬದ್ಧತೆ ಇಲ್ಲ. ಮಹಿಳೆಯರು ಹಾಗೂ ಬಡವರ ಕಲ್ಯಾಣಕ್ಕೆ ಬದ್ಧತೆ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ