

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಬಡಿದ ಪರಿಣಾಮ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಡಿ.ಕೆ.ಶಿವಕುಮಾರ್ ಮುಳಬಾಗಿಲು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿನ ಹೆಚ್ ಎ ಎಲ್ ವಿಮನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದರು. ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದ ವೇಳೆ ರಣಹದ್ದು ಹೆಲಿಕಾಪ್ಟರ್ ಗೆ ಬಡಿದಿದೆ. ರಣಹದ್ದು ಬಡಿದ ರಭಸಕ್ಕೆ ಹೆಲಿಕಾಪ್ಟರ್ ನ ಮುಂದಿನ ಗಾಜುಗಳು ಪುಡಿ ಪುಡಿಯಾಗಿದೆ.

ಘಟನೆಯ ದೃಷ್ಯಗಳು ಖಾಸಗಿ ಸುದ್ದಿವಾಹಿನಿಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೆಲಿಕಾಪ್ಟರ್ ನಲ್ಲಿ ಸುದ್ದಿವಾಹಿನಿಗೆ ಸಂದರ್ಶನ ನೀಡುತ್ತಿದ್ದ ವೇಳೆಯೇ ಈ ಘಟನೆ ನದೆದಿದೆ. ಕೆಲ ಕಾಲ ಡಿ.ಕೆ.ಶಿವಕುಮಾರ್ ಹಾಗೂ ಸಿಬ್ಬಂದಿಗಳು ಗಾಬರಿಯಾಗಿದ್ದಾರೆ. ಸಮಯಪ್ರಜ್ಞೆ ಮೆರೆದ ಪೈಲಟ್ ಸಾವಕಾಶವಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಅದೃಷ್ಟವಶಾತ್ ಡಿ.ಕೆ.ಶಿವಕುಮಾರ್ ಹಾಗೂ ಹೆಲಿಕಾಪ್ಟರ್ ನಲ್ಲಿದ್ದ ಸಿಬ್ಬಂದಿಗಳಿಗೆ ಯಾವುದೇ ಅಪಾಯವಾಗಿಲ್ಲ, ಎಲ್ಲರೂ ಸುರಕ್ಷಿತರಾಗಿದ್ದಾರೆ.
ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿದ್ದರಿಂದ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಡಿ.ಕೆ.ಶಿವಕುಮಾರ್ ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್ ಅವರು ‘ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜತೆಗಿದ್ದು, ನನ್ನನ್ನು ಕಾಪಾಡಿದ್ದಾರೆ. ನಮ್ಮ ಹೆಲಿಕಾಪ್ಟರ್ ಟೇಕಾಫ್ ಆಗಿ 7-8 ನಿಮಿಷ ಕಳೆದಿತ್ತು. ನಾವು ಹೊಸಕೋಟೆ ಹತ್ತಿರ ತಲುಪಿದಾಗ ದೊಡ್ಡ ಹದ್ದು ಬಂದು ಡಿಕ್ಕಿ ಹೊಡೆಯಿತು. ಮಾಧ್ಯಮದವರು ಪಕ್ಷದ ಪ್ರಣಾಳಿಕೆ ಕುರಿತು ಸಂದರ್ಶನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್ ಹಾರಾಟದ ಎತ್ತರವನ್ನು ಕಡಿಮೆ ಮಾಡಿ ನಮ್ಮನ್ನು ರಕ್ಷಿಸಿದ್ದಾರೆ. ಈಗ ಬೇರೆ ಹೆಲಿಕಾಪ್ಟರ್ ಸಿಗದ ಕಾರಣ, ರಸ್ತೆ ಮಾರ್ಗವಾಗಿ ಮುಳಬಾಗಿಲಿಗೆ ತೆರಳುತ್ತಿದ್ದೇವೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ, ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ. ಪ್ರಯಾಣದ ವೇಳೆ ಮೂರು ಹದ್ದುಗಳು ಎದುರಾಗಿದ್ದು, ಪೈಲಟ್ ಎರಡು ಹದ್ದುಗಳನ್ನು ದಾಟಿದ್ದರು. ಮೂರನೇ ಹದ್ದು ಕೆಳಗಡೆಯಿಂದ ಮೇಲೆ ಬಂದು ಡಿಕ್ಕಿ ಹೊಡೆಯಿತು. ಯಾರೂ ಇದರಿಂದ ಗಾಬರಿಯಾಗುವುದು ಬೇಡ, ಇದೊಂದು ಆಕಸ್ಮಿಕ, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಸಾಗೋಣ’ ಎಂದು ತಿಳಿಸಿದರು.
ReplyForward |