ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 14 ತಿಂಗಳು ಸಮ್ಮಿಶ್ರ ಸರ್ಕಾರ, ಉಳಿದ ನಾಲ್ಕು ವರ್ಷ ಬಿಜೆಪಿ ಸರ್ಕಾರ ಆಡಳಿತ ಮಾಡಿದೆ. ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರ ಮಾಡಲು ಅವಕಾಶ ಕೊಟ್ಟರೆ ರಾಜ್ಯದ ಜನರು, ರಾಜ್ಯದ ನೆಲ, ಜಲ, ಭಾಷೆ ರಕ್ಷಣೆ ಮಾಡುತ್ತಾರೆ ಎಂದು ನೀವು ಆಲೋಚನೆ ಮಾಡಬೇಕು. ಕೇಂದ್ರದಲ್ಲಿ ಕಳೆದ 9 ವರ್ಷಗಳಿಂದ ಬಿಜೆಪಿ ಆಡಳಿತ ಮಾಡುತ್ತಿದೆ. ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿದ್ದಾರೆ. ಮೊದಲು ಕುಮಾರಸ್ವಾಮಿಗಳು, 2 ವರ್ಷ ಯಡಿಯೂರಪ್ಪ ನಂತರದ 2 ವರ್ಷ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ ಆದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ನಡೆದ ಜೈ ಭಾರತ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮೋದಿ ಹಾಗೂ ಬೊಮ್ಮಾಯಿ ಅವರು ನಮ್ಮದು ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿ ವೇಗವಾಗಿ ಆಗಲಿದೆ ಎಂದು ಹೇಳಿದ್ದರು. ಈ ಡಬಲ್ ಇಂಜಿನ್ ಸರ್ಕಾರ ಬಂದ ನಂತರ ರಾಜ್ಯ ಇಷ್ಟು ಕೆಟ್ಟ ಹೆಸರನ್ನು ಹಿಂದೆಂದೂ ತೆಗೆದುಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ರಾಜ್ಯದ ಘನತೆ ಹಾಳು ಮಾಡಿದೆ. ಗುತ್ತಿಗೆದಾರರ ಸಂಘ, ಅನುದಾನರಹಿತ ಶಿಕ್ಷಣ ಸಂಸ್ಥೆ ರುಪ್ಸಾದವರು ರಾಜ್ಯದಲ್ಲಿ ಪ್ರತಿ ಕೆಲಸಕ್ಕೆ ಈ ಸರ್ಕಾರ 40% ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಅಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ರಾಜ್ಯದ ಗೌರವ ಹಾಳು ಮಾಡಿದೆ. ಈ ಬಗ್ಗೆ ಜನ ಬೀದಿ ಬೀದಿಗಳಲ್ಲಿ ಮಾತನಾಡುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಬಂದಿರಲಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕದ ಬ್ಯಾಂಕುಗಳನ್ನು ನುಂಗಿ ನೀರು ಕುಡಿದು ಆಗಿದೆ. ಈಗ ನಮ್ಮ ಹೆಮ್ಮೆಯ ನಂದಿನಿ ಸಂಸ್ಥೆ ನುಂಗಲು ಹೊರಟಿದ್ದಾರೆ. ರಾಜ್ಯದಲ್ಲಿ ಹಾಲು ಒಕ್ಕೂಟಗಳನ್ನು ಸಂಘಟಿಸಿ ದಿನಕ್ಕೆ 99 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಬೆಂಗಳೂರು ಮತ್ತು ಬೇರೆ ಬೇರೆ ನಗರಗಳಲ್ಲಿ ಮಾರುವ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಾಂತರ ರೈತರು ಹಾಲು ಉತ್ಪಾದಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಮಿತ್ ಶಾ ಅವರು ಕೇಂದ್ರ ಸಹಕಾರಿ ಮಂತ್ರಿಯಾದ ನಂತರ ನಂದಿನಿಯನ್ನು ಅಮೂಲ್ ಜತೆ ವಿಲೀನಕ್ಕೆ ಮುಂದಾಗಿದ್ದರು. ಈಗ ಅಮೂಲ್ ಸಂಸ್ಥೆಯ ಹಾಲನ್ನು ರಾಜ್ಯದ ಮಾರುಕಟ್ಟೆಗೆ ಕರೆತಂದು ನಂದಿನಿ ಉತ್ಪನ್ನಗಳ ಜತೆ ಸ್ಪರ್ಧೆಗಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ದೊರೆಯದಂತೆ ಕೃತಕ ಅಭಾವ ಸೃಷ್ಟಿಸಿ ಅಮೂಲ್ ಉತ್ಪನ್ನಗಳನ್ನು ತರುತ್ತಿದ್ದಾರೆ. ಈ ಕಾರಣದಿಂದಾಗಿ ಹಾಲಿನ ಉತ್ಪಾದನೆ 99 ಲಕ್ಷ ಲೀಟರ್ ನಿಂದ 81 ಲಕ್ಷ ಲೀಟರ್ ಗೆ ಇಳಿದಿದೆ. ನಾನು ಕನ್ನಡಿಗರಲ್ಲಿ ಮಾಡುವ ಮನವಿ ಎಂದರೆ, ಕೇಂದ್ರ ಸರ್ಕಾರದ ಈ ದುಷ್ಟ ಪ್ರಯತ್ನವನ್ನು ನಾವೆಲ್ಲರೂ ತಡೆಗಟ್ಟಬೇಕು. ಇದು ನಮ್ಮ ಕನ್ನಡಿಗರ ಮರ್ಯಾದೆಯ ಪ್ರಶ್ನೆ. ನಾವೆಲ್ಲರೂ ಕನ್ನಡಿಗರು ಅಮೂಲ್ ಉತ್ಪನ್ನಗಳನ್ನು ಖರೀದಿಸದೇ ನಂದಿನಿ ಉತ್ಪನ್ನಗಳನ್ನು ಮಾತ್ರ ಖರೀದಿ ಮಾಡುತ್ತೇವೆ ಎಂಬ ಶಪಥ ಮಾಡಬೇಕು. ಆಮೂಲಕ ಕೇಂದ್ರದ ಹುನ್ನಾರವನ್ನು ತಡೆಗಟ್ಟಬೇಕು ಎಂದರು.
ಬಿಜೆಪಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ಮತ್ತೆ ತರುವ ಪ್ರಯತ್ನ ಮಾಡಿದರೆ ಕೆಎಂಎಫ್, ರಾಜ್ಯದ ರೈತರ ಬದುಕು ಉಳಿಯುತ್ತದೆ. ಕಾಂಗ್ರೆಸ್ ಪಕ್ಷ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆ ನೀಡಿದ್ದು, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಬೆಲೆ ಏರರರಿಕೆಯಿಂದ ತತ್ತರಿಸಿರುವ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಇನ್ನು ಅನ್ನಭಾಗ್ಯ ಯೋಜನೆಯಲ್ಲಿ ಬಡ ಕುಟುಂಬದ ಸದಸ್ಯರಿಗೆ ನೀಡುತ್ತಿರುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಹೆಚ್ಚಳ ಮಾಡಲಾಗುವುದು. ನಮ್ಮ ಸರ್ಕಾರ 7 ಕೆ.ಜಿ ಅಕ್ಕಿ ನೀಡುತ್ತಿದ್ದು, ಅದನ್ನು ಇಳಇಸಿದ್ದು ಯಾಕೆ ಎಂದು ಸರ್ಕಾರವನ್ನು ಪ್ರಶ್ನಿಸಿದಾಗ, ಅದಕ್ಕೆ ಕೋವಿಡ್ ನಿಂದ ಆರ್ಥಿಕ ಸಮಸ್ಯೆ ಎದುರಾಗಿದೆ ಹೀಗಾಗಿ ಕಡಿಮೆ ಮಾಡುತ್ತಿದ್ದೇವೆ ಎಂದರು. ಅದಕ್ಕೆ ನಾನು ನೀವು ಲಂಚ ಹೊಡೆಯುವುದು ಕಡಿಮೆ ಮಾಡಿದರೆ 7 ಕೆ.ಜಿಯಲ್ಲಿ 10 ಕೆ.ಜಿ ನೀಡಬಹುದು ಎಂದು ಹೇಳಿದೆ. ನಿರುದ್ಯೋಗ ಪದವೀಧರ ಯುವಕರಿಗೆ ಪ್ರತಿ ತಿಂಗಳಂತೆ 2 ವರ್ಷಗಳ ಕಾಲ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದರು
ನಮ್ಮ ಕಾಲದಲ್ಲಿ 2 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದೆವು. ಈಗ ರಾಜ್ಯದಲ್ಲಿ 2.50 ಲಕ್ಷ ಹುದ್ದೆ ಖಾಲಿ ಇವೆ. ಇದರ ಜತೆಗೆ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ದೊರಕಿಸಿ ಕೊಡಲು ಕೌಶಲ್ಯ ಅಭಿವೃದ್ಧಿಗೆ ಪ್ರತ್ಯೇಕ ಇಲಾಖೆ ಆರಂಭಿಸಿದ್ದೆ. ಈಗ ಅದನ್ನು ಸ್ಥಗಿತಗೊಳಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದ ನಂತರ ಈ ಇಲಾಖೆ ಚುರುಕುಗೊಳಿಸಿ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಸಿಗುವಂತೆ ಮಾಡುತ್ತೇವೆ.
ಯಾವುದೇ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗದೇ, ಜನರ ಕೈಯಲ್ಲಿ ಹಣವಿಲ್ಲದೆ ದೇಶದ ಆರ್ಥಿಕತೆ, ರಾಜ್ಯದ ಜಿಡಿಪಿ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ನಾವು ಅಧಿಕಾರಕ್ಕೆ ಬಂದಾಗ ಉದ್ಯೋಗ ಸಂಖ್ಯೆ ಹೆಚ್ಚಿಸಿ, ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಿಸುತ್ತೇವೆ. ಬಿಜೆಪಿ ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾಶವಾಗಿದೆ. ಇದನ್ನು ಸರಿಪಡಿಸುತ್ತೇವೆ. ಬಿಇಎಂಎಲ್ ಗೆ ಶಕ್ತಿ ತುಂಬುತ್ತೇವೆ.ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಕೋಲಾರ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ