Kannada NewsKarnataka NewsLatestPolitics

*ಡ್ರಗ್ಸ್ ವಿರೋಧಿ ಜಾಗೃತಿ ಜಾಥಾದಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್, ಮಾದಕ ವಸ್ತುಗಳು ನಮ್ಮ ಸಮಾಜಕ್ಕೆ ಅಂಟಿರುವ ಶಾಪ ಹಾಗೂ ಕ್ಯಾನ್ಸರ್ ರೋಗ. ಇದರಿಂದ ನಮ್ಮ ಸಮಾಜವನ್ನುರಕ್ಷಿಸಿ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಮಾದಕ ವಸ್ತು ವಿರೋಧಿ ದಿನದಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಜಾಗೃತಿ ಜಾಥಾದಲ್ಲಿ ಹೆಜ್ಜೆ ಹಾಕಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಮಕ್ಕಳಲ್ಲಿ ಡ್ರಗ್ಸ್ ಸೇವನೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಮಾತಾಡಿದರು. ಡ್ರಗ್ಸ್ ವಿರುದ್ಧ ಹೋರಾಡಲು ಮಕ್ಕಳಿಗೆ ಉತ್ತೇಜನ ತುಂಬಿದರು.

ನಂತರ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೂ ಜಾಗೃತಿ ಜಾಥಾದಲ್ಲಿ ಮಕ್ಕಳ ಜತೆ ಹೆಜ್ಜೆ ಹಾಕಿದರು.

ಮಾದಕವಸ್ತುಗಳು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗಲಿದೆ. ಹೀಗಾಗಿ ಇದನ್ನು ಕೊನೆಗೊಳಿಸಲು ನಾವೆಲ್ಲರೂ ಮಕ್ಕಳು, ಯುವಕರಲ್ಲಿ ಜಾಗೃತಿ ಮೂಡಿಸುವ ದಿನ ಆಚರಣೆ ಮಾಡುತ್ತಿದ್ದೇವೆ. ಮಕ್ಕಳು, ಯುವಕರು ಈ ದೇಶದ ಆಸ್ತಿ. ಅವರು ನಮ್ಮ ಸಂಸ್ಕೃತಿ ಉಳಿಸಿಕೊಂಡು, ವಿದ್ಯಾವಂತರಾಗಿ ವಿಶ್ವ ಮಟ್ಟದಲ್ಲಿ ಕೆಲಸ ಮಾಡುತ್ತಿರುವುದರಿಂದ ಇಂದು ಬೆಂಗಳೂರು, ರಾಜ್ಯ ಹಾಗೂ ದೇಶಕ್ಕೆ ಇಂದು ವಿಶ್ವಮಟ್ಟದಲ್ಲಿ ಹೆಸರು ಬಂದಿದೆ. ಇಲ್ಲಿರುವ ಮಕ್ಕಳು ವಿಶ್ವದ ಯಾವುದೇ ಉನ್ನತ ಹುದ್ದೆಗೆ ಏರಬಹುದು. ಡಿ ಕೆ ಶಿವಕುಮಾರ್ ಕೂಡ ಆಗಬಹುದು. ನೀವು ಅಂದುಕೊಂಡಿದ್ದನ್ನು ಸಾಧಿಸಲು ಡ್ರಗ್ಸ್ ವ್ಯಸನದಂತ ದುಶ್ಚಾಟಗಳಿಂದ ದೂರ ಉಳಿಯಬೇಕು. ಆಗ ಮಾತ್ರ ಗುರಿ ಸೇರಿ, ಸಾಧನೆ ಮಾಡಲು ಸಾಧ್ಯ ಎಂದರು.

ಇಂದು ನಾನು ನಿಮ್ಮ ಜೊತೆ ಜಾಥಾದಲ್ಲಿ ಹೆಜ್ಜೆ ಹಾಕುತ್ತೇನೆ. ಈ ಜಾಥಾ ನಿಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯಲಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಜಾಥಾದಲ್ಲಿ ಹೆಜ್ಜೆ ಹಾಕಿದ್ದೇನೆ ಎಂದು ನೀವು ಸದಾ ಸ್ಮರಿಸುತ್ತೀರಿ. ನೀವೆಲ್ಲರೂ ಇಂದು ಇತ್ತ ವಿಧಾನಸೌಧ ಅಂದರೆ ಶಾಸಕಾಂಗ ಹಾಗೂ ಅತ್ತ ಹೈಕೋರ್ಟ್ ಅಂದರೆ ನ್ಯಾಯಾಂಗದ ಮುಂದೆ ಇದ್ದೀರಿ. ಇಡೀ ವಿಶ್ವದಲ್ಲೇ ಎಲ್ಲೂ ಶಾಸಕಾಂಗ ಹಾಗೂ ನ್ಯಾಯಾಂಗ ಎದುರುಬದುರು ಇಲ್ಲ.

ಮುಂದೆ ಅಪ್ಪಿತಪ್ಪಿ ನಿಮ್ಮ ಸ್ನೇಹಿತರು ಅಥವಾ ಪರಿಚಯದವರಲ್ಲಿ ಯಾರಾದರೂ ಡ್ರಗ್ಸ್ ವ್ಯಸನಿಗಳಾದರೆ ಪೊಲೀಸರು ಬಂಧಿಸಿ, ನ್ಯಾಯಾಲಯದಲ್ಲಿ ಶಿಕ್ಷೆ ಆಗಲಿದೆ ಎಂಬ ಸಂದೇಶ ನಿಮಗೆ ಅರಿವಾಗಲಿ ಎಂದು ಇಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಳೆದೆರಡು ವರ್ಷಗಳಲ್ಲಿ ಡ್ರಗ್ಸ್ ದಂಧೆಯಲ್ಲಿ ದೊಡ್ಡ, ದೊಡ್ಡವರು ಸಿಕ್ಕಿಬಿದ್ದು ಯಾವರೀತಿ ಅನುಭವಿಸಿದರು ಎಂದು ನೀವು ನೋಡಿದ್ದೀರಿ. ನಿಮ್ಮ ಜೀವನದಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬೇಡಿ. ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯಗಳಿಗಿಂತ ಉತ್ತಮ ನಿಯಂತ್ರಣ ಮಾಡಲಾಗಿದೆ.

ಕಳೆದ ಮೂರು ವರ್ಷಗಳಿಂದ ಅನೇಕ ಪಾದಯಾತ್ರೆಗಳಲ್ಲಿ ಪಾಲ್ಗೊಂಡಿದ್ದೇನೆ. ನೀರಿಗಾಗಿ ನಡಿಗೆ, ಸ್ವಾತಂತ್ರ್ಯ ನಡಿಗೆ, ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದೇವೆ.

ಡ್ರಗ್ಸ್ ಸೇವನೆ ಮಾಡಿದರೆ ನೋವು, ಸಾವು ಎರಡೂ ಬರುತ್ತದೆ. ಹೀಗಾಗಿ ಇದರ ಬಗ್ಗೆ ಬಹಳ ಎಚ್ಚರಿಕೆ ಇರಬೇಕು. ನೀವು ಸಾಮಾಜಿಕ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀರಿ. ನೀವು ನಿಮ್ಮ, ನಿಮ್ಮ ಸ್ನೇಹಿತರು ಆತ್ಮೀಯರು, ಸಮಾಜವನ್ನು ಆರೋಗ್ಯಕರ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀರಿ ಎಂದು ಹೇಳಿದರು.

ಬಳಿಕ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಜಾಥಾ ನಂತರ ಕಂಠೀರವ ಕ್ರೀಡಾಂಗಣದಲ್ಲಿ ಮಕ್ಕಳ ಜತೆ ಸರತಿ ಸಾಲಿನಲ್ಲಿ ನಿಂತು ತಿಂಡಿ ಪಡೆದು, ಮಕ್ಕಳ ಜತೆ ಸವಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button