ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜನವರಿ 13ರಂದು ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕನಕಪುರ ಚಲೋ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಕ್ಷೇತ್ರದ ಜನತೆಗೆ ಮನವಿಯೊಂದನ್ನು ಮಾಡಿದ್ದಾರೆ. ನಾವೆಲ್ಲರೂ ಶಾಂತಿಯಿಂದಲೇ ವಿಕೃತ ಮನಸ್ಸಿನ ಕೋಮು ಶಕ್ತಿಗಳ ಸಂಚನ್ನು ಹಿಮ್ಮೆಟ್ಟಿಸೋಣ ಎಂದು ಹೇಳಿದ್ದಾರೆ.
ಏಸು ಕ್ರಿಸ್ತನ ಪ್ರತಿಮೆ ವಿರೋಧಿಸುತ್ತಿರುವರು ಚಲೋ ನಡೆಸಿ, ಶಾಂತಿ ಪ್ರಿಯರನ್ನು ಕೆಣಕಲು ಹೊರಟಿದ್ದಾರೆ. ಕೋಮು ಸಾಮರಸ್ಯ ಹಾಳು ಮಾಡಿ, ಗಲಭೆ, ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು ಈ ಮತೀಯ ಶಕ್ತಿಗಳ ಹುನ್ನಾರವಾಗಿದೆ. ಹೀಗಾಗಿ ಇಂತಹ ಶಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಕನಕಪುರ ಜನರಿಗೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ಡಿಕೆಶಿ, ನಮ್ಮ ಕ್ಷೇತ್ರದ ಜನರಲ್ಲಿ ವಿನಮ್ರ ಮನವಿ ಮಾಡಿದ್ದಾರೆ. “ಕನಕಪುರದ ಮಹಾಜನರು ಶತ-ಶತಮಾನಗಳಿಂದಲೂ ಶಾಂತಿಪ್ರಿಯರು. ಮತೀಯ ಸಾಮರಸ್ಯಕ್ಕೆ ಹೆಸರಾದವರು. ಜಾತಿ, ಮತ, ಧರ್ಮದ ಬೇಧವಿಲ್ಲದೆ ಸಹೋದರ ಭಾವದಿಂದ ಬದುಕಿದವರು, ಬದುಕುತ್ತಿರುವವರು. ಕೋಮು ಸೌಹಾರ್ದತೆಯಲ್ಲಿ ಇಡೀ ನಾಡಿಗೇ ಮಾದರಿಯಾದವರು. ಅಂತಹ ಶಾಂತಿ ಮತ್ತು ಸ್ನೇಹ ಪ್ರಿಯರನ್ನು ಕೆಣಕಲು ಕಪಾಲಬೆಟ್ಟದ ಯೇಸುಪ್ರತಿಮೆ ನಿರ್ಮಾಣ ವಿರೋಧಿಸುವ ನೆಪದಲ್ಲಿ ಕೆಲವು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿವೆ. ಜನವರಿ 13 ರಂದು ಕನಕಪುರ ಚಲೋ ಹೆಸರಿನಲ್ಲಿ ಕೋಮುಸಾಮರಸ್ಯ ಹಾಳು ಮಾಡಿ, ಗಲಭೆ, ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು ಈ ಮತೀಯ ಶಕ್ತಿಗಳ ಹುನ್ನಾರವಾಗಿದೆ ಎಂದಿದ್ದಾರೆ.
ಆದರೆ ಅವರಿಗೆ ಗೊತ್ತಿಲ್ಲ, ಕನಕಪುರದ ಮಹಾಜನತೆ ಅದೆಷ್ಟು ಪ್ರಬುದ್ಧರು, ಇಲ್ಲಿ ನೂರಾರು ವರ್ಷಗಳಿಂದ ಎಲ್ಲ ಕೋಮು ಮತ್ತು ಧರ್ಮದ ಜನರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ ಎಂಬುದು. ಹೀಗಾಗಿ ಕನಕಪುರ ಚಲೋ ಹೆಸರಿನಲ್ಲಿ ಮತೀಯ ಶಕ್ತಿಗಳು ನೀಡುವ ಯಾವುದೇ ಪ್ರಚೋದನೆಗೆ ಕನಕಪುರದ ಮಹಾಜನತೆ ಒಳಗಾಗಬೇಡಿ. ಅವರು ಎಷ್ಟೇ ಕೆರಳಿಸಿದರೂ ಸಹನೆ ಕಳೆದುಕೊಳ್ಳಬೇಡಿ. ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬೇಡಿ. ಶಾಂತಿಗೆ ಭಂಗ ತರಬೇಡಿ ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ”.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ