Kannada NewsKarnataka NewsLatestPolitics

*ಅಚ್ಚರಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್: ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ನೂತನವಾಗಿ ನೇಮಕಗೊಂಡ ಕಾರ್ಯಾಧ್ಯಕ್ಷರುಗಳ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಚ್ಚರಿ ಮಾತುಗಳನ್ನಾಡಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ.

ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಜಯಂತಿ, ಪಕ್ಷದ ನೂತನ ಕಾರ್ಯಾಧ್ಯಕ್ಷರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರ ಪದಗ್ರಹಣ, ಪಕ್ಷ ಸೇರ್ಪಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ನಾನು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೋ, ಬಿಡುತ್ತೇನೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದೇ ವೇಳೆ ವಿದ್ಯಾರ್ಥಿ ನಾಯಕತ್ವದ ದಿನ, ರಾಜೀವ್ ಗಾಂಧಿಯವರನ್ನು ಭೇಟಿಯಾಗಿದ್ದ ಸಂದರ್ಭ ಸೇರಿದಂತೆ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹೇಳಿದ್ದಾರೆ.

ನಾನು, ವಿನಯ್ ಕುಮಾರ್ ಸೋರಕೆ ಸೇರಿದಂತೆ ಇನ್ನು ಕೆಲವು ನಾಯಕರು ವಿದ್ಯಾರ್ಥಿ ನಾಯಕತ್ವದಿಂದ ಬಂದು, ಯೂತ್ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದೆವು. ಆಗ ದೊಡ್ಡ ಸಮಾವೇಶಕ್ಕಾಗಿ ದೆಹಲಿಗೆ ತೆರಳಿದ್ದೆವು. ಕಾರ್ಯಕ್ರಮದ ಮರುದಿನ ಪ್ರಧಾನಮಂತ್ರಿಗಳ ಜತೆ ಫೋಟೋ ತೆಗೆಸಿಕೊಳ್ಳಲು ಸಮಯ ನಿಗದಿ ಮಾಡಲಾಗಿತ್ತು. ಮರುದಿನ ನಾವು ಪ್ರಧಾನಿ ಅವರ ನಿವಾಸಕ್ಕೆ ಹೋಗಿದ್ದು, ನಾವು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೆವು. ಒಂದೊಂದೆ ರಾಜ್ಯದ ತಂಡಗಳ ಫೋಟೋ ನಡೆಯುತ್ತಿತ್ತು. ಇನ್ನೇನು ನಮ್ಮ ಸರದಿ ಬರುವ ವೇಳೆಗೆ ಕಾರ್ಯಕ್ರಮ ಏಕಾಏಕಿ ನಿಂತುಹೋಯಿತು. ಕಾರಣ, ಆಗ ಹಿರಿಯ ಮುತ್ಸದಿಯೊಬ್ಬರು ಪ್ರಧಾನಿ ಅವರ ಮನೆ ಬಾಗಿಲ ಮುಂದೆ ಕಾರಿನಿಂದ ಇಳಿದರು. ಆಗ ಭದ್ರತಾ ಸಿಬ್ಬಂದಿ ಓಡಿ ಹೋದರು. ಅವರು ಬಂದಿದ್ದಾರೆ ಎಂದು ತಿಳಿದ ರಾಜೀವ್ ಗಾಂಧಿ ತಕ್ಷಣವೇ ಓಡಿ ಬಂದು ಅವರನ್ನು ಮನೆಯೊಳಗೆ ಕರೆದುಕೊಂಡು ಹೋದರು.

ರಾಜೀವ್ ಗಾಂಧಿ ಅವರು ವಾಪಸ್ ಬಂದ ನಂತರ ಆ ಹಿರಿಯ ವ್ಯಕ್ತಿ ಯಾರು ಎಂದು ಕೇಳಿದೆವು. ಆಗ ರಾಜೀವ್ ಗಾಂಧಿ ಅವರು ಈಗ ಬಂದವರು ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್. ಅವರು ನಮ್ಮ ತಾತ ಹಾಗೂ ತಾಯಿಯ ಜೊತೆ ಕೆಲಸ ಮಾಡಿದ್ದವರು. ಕೆಲವು ಭಿನ್ನಾಭಿಪ್ರಾಯದಿಂದ ಅವರು ಪಕ್ಷ ತ್ಯಜಿಸಿದ್ದರು. ಕಾರಣಾಂತರಗಳಿಂದ ಇಂದಿರಾ ಗಾಂಧಿ ಅವರ ಜತೆ ಮನಸ್ತಾಪವಾಗಿ ಪಕ್ಷ ಬಿಟ್ಟಿದ್ದೆ. ನಾನು ಸಾಯುವ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾಂಗ್ರೆಸ್ಸಿಗನಾಗಿ ಸಾಯಬೇಕು ಎಂಬ ಕಾರಣದಿಂದ ಮತ್ತೆ ಪಕ್ಷ ಸೇರಲು ಬಯಸಿರುವುದಾಗಿ ತಿಳಿಸಿದರು ಎಂದು ನಡೆದ ಘಟನೆಯನ್ನು ರಾಜೀವ್ ಗಾಂಧಿ ಹೇಳಿದರು.

ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪುತ್ರಿ ಮೀರಾ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಲೋಕಸಭೆ ಸ್ಪೀಕರ್ ಆಗಿ ಮಾಡಿದೆ. ಬಿಹಾರ್ ನಲ್ಲಿ ಅವರ ಪುತ್ರನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಅವರ ಕುಟುಂಬ ನಮ್ಮ ಪಕ್ಷಕ್ಕೆ ಅನೇಕ ತ್ಯಾಗ ಮಾಡಿದೆ. 31 ವರ್ಷಗಳ ಕಾಲ ಅವರು ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನೆಹರೂ ಅವರ ಕಾಲದಿಂದ ಇಂದಿರಾ ಗಾಂಧಿ ಕಾಲದವರೆಗೂ ಕೆಲಸ ಮಾಡಿದ್ದರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರು ಪಕ್ಷ ತೊರೆದಿದ್ದರು. ನಂತರ ಅವರು ಮತ್ತೆ ಕಾಂಗ್ರೆಸ್ ಸೇರಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬಾಬು ಜಗಜೀವನ್ ರಾಮ್ ಅವರು ಪಕ್ಷದಲ್ಲಿ ನಿರ್ವಹಿಸದ ಜವಾಬ್ದಾರಿ ಮತ್ತೊಂದಿಲ್ಲ. ಅಂತಹ ನಾಯಕನ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ.

ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಚಂದ್ರಪ್ಪ ಹಾಗೂ ನಮ್ಮೊಂದಿಗೆ ಇಲ್ಲದ ಧೃವನಾರಾಯಣ ಅವರ ಸಂಘಟನೆಯನ್ನು ನಾವು ಸ್ಮರಿಸಬೇಕು. ಕೋವಿಡ್ ಸಂದರ್ಭದಲ್ಲಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಧೃವನಾರಾಯಣ ಅವರ ತಾಳ್ಮೆ ಹಾಗೂ ಶ್ರಮ ಪ್ರಶಂಸನೀಯ. ಸಲೀಂ ಅಹ್ಮದ್ ಅವರು ಶಿಸ್ತಿನ ಸಿಪಾಯಿಯಂತೆ ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ್ದಾರೆ. ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಅವರು ಸಮರ್ಥವಾಗಿ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರು ಈಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ಸಚಿವ ಎಂ.ಬಿ ಪಾಟೀಲ್ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾನು, ಸಿಎಂ ಸೇರಿದಂತೆ ಅನೇಕರು ಪ್ರಚಾರ ಸಮಿತಿಯಲ್ಲಿ ಕೆಲಸ ಮಾಡಿದ್ದೇವೆ. ನಾವೆಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ರಾಜೀವ್ ಗಾಂಧಿ ಅವರು ನಮ್ಮನ್ನು ಗುರುತಿಸಿ ನಮಗೆ ಪಕ್ಷದ ಟಿಕೆಟ್ ನೀಡಿದ್ದರು. ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಎನ್ಎಸ್ ಯುಐ ಟಿಕೆಟ್ ನೀಡದಿದ್ದರೂ ಹೇಗೋ ಚುನಾವಣೆ ಮಾಡಿ ಗೆದ್ದುಕೊಂಡು ಬಂದಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಈ ಮಟ್ಟದವರೆಗೆ ಬಂದಿದ್ದೇವೆ.

ಯಾರು ಶ್ರಮಪಡುತ್ತಾರೋ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಯಾರು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ನಲ್ಲಿ ಸದಸ್ಯತ್ವ ಪಡೆಯುತ್ತಾರೋ ಅವರು ಅಷ್ಟು ಸುಲಭವಾಗಿ ಪಕ್ಷವನ್ನು ತೊರೆಯುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗಾಗಿ ಈ ಸಂಘಟನೆಗಳ ಸದಸ್ಯತ್ವ ಪಡೆಯುವವರಿಗೆ ದೊಡ್ಡ ಅಡಿಪಾಯ ಸಿಗುತ್ತದೆ. 73, 74ನೇ ತಿದ್ದುಪಡಿ ವೇಳೆ ನಾನು ರಾಜೀವ್ ಗಾಂಧಿ ಅವರನ್ನು ಕೇಳಿದಾಗ, ಇದು ಸ್ಥಳೀಯ ಮಟ್ಟದಲ್ಲಿ ಯುವ ನಾಯಕರನ್ನು ಹುಟ್ಟುಹಾಕಲಿದೆ ಎಂದು ಹೇಳಿದ್ದರು. ನಾಯಕರನ್ನು ಹುಟ್ಟುಹಾಕುವವರೇ ನಿಜವಾದ ನಾಯಕ. ನಿಮ್ಮ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ.

ಪಕ್ಷದ ನೂತನ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಪ್ರದರ್ಶಿಸಬೇಕು. ನಿಮಗೆ ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಚುನಾವಣೆ ನಂತರ ನೀವು ಮಾಜಿಯಾಗುತ್ತೀರಿ ಎಂಬುದು ನಿಮ್ಮ ತಲೆಯಲ್ಲಿ ಇರಲಿ. ನೀವು ಶ್ರಮ ಪಟ್ಟರೆ ಮಾತ್ರ ನಿಮ್ಮ ಜವಾಬ್ದಾರಿ ಮುಂದುವರಿಯುತ್ತದೆ. ಇಲ್ಲದಿದ್ದರೆ ಚುನಾವಣೆ ನಂತರ ಈ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುವುದು. ನೀವು ಅಲ್ಲಿ ಸಹಕಾರ ನೀಡಿ ಕೆಲಸ ಮಾಡಬೇಕೇ ಹೊರತು ಅಲ್ಲಿ ಲೀಡರ್ ಗಿರಿ ತೋರಿಸಬಾರದು. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದ್ದು, ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಈ ಕೈ ಗಟ್ಟಿ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ವರ್ಷಕ್ಕೆ 52 ಸಾವಿರ ಕೋಟಿ ಹಣ ಮೀಸಲಿಟ್ಟಿದೆ. ನಮ್ಮ ಯೋಜನೆಗಳು 1.56 ಕೋಟಿ ಕುಟುಂಬಗಳನ್ನು ತಲುಪುತ್ತಿವೆ. ಇನ್ನು ಎಐಸಿಸಿ ಐದು ಗ್ಯಾರಂಟಿಯನ್ನು ಘೋಷಣೆ ಮಾಡಿದ್ದು, ಗೃಹಲಕ್ಷ್ಮಿ ಯೋಜನೆಯಂತೆ ಮಹಾಲಕ್ಷ್ಮಿ ಘೋಷಿಸಿದ್ದು, ಈ ಯೋಜನೆಯಲ್ಲಿ ವರ್ಷಕ್ಕೆ ಬಡ ಕುಟುಂಬದ ಮಹಿಳೆಯೊಬ್ಬರಿಗೆ ವಾರ್ಷಿಕ 1 ಲಕ್ಷ ನೀಡಲಾಗುವುದು. ಸಾಲಮನ್ನಾ ಪ್ರಾಧಿಕಾರ ರಚನೆ, ಬೆಂಬಲ ಬೆಲೆ, ಜಾತಿ ಗಣತಿ, ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದಾರೆ. ಕರ್ನಾಟಕ ಹಾಗು ತೆಲಂಗಾಣದಲ್ಲಿ ಜಾರಿ ಮಾಡಿರುವಂತೆ ರಾಷ್ಟ್ರಮಟ್ಟದಲ್ಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿದ್ದೇವೆ.

ಆರು ಬಾರಿ ಶಾಸಕರಾಗಿರುವ ತನ್ವೀರ್ ಸೇಠ್ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿರುವುದು ಹೆಮ್ಮೆಯ ವಿಚಾರ. ಜಿ.ಸಿ ಚಂದ್ರಶೇಖರ್ ಅವರು ವಿದ್ಯಾರ್ಥಿ ನಾಯಕತ್ವದಿಂದ ರಾಜ್ಯಸಭೆಗೆ ಪ್ರವೇಶ ಮಾಡಿದ್ದು, ವಿನಯ್ ಕುಲಕರ್ಣಿ ಅವರು ಯುವ ನಾಯಕತ್ವದಿಂದ ಮಾಜಿ ಸಚಿವರಾಗಿದ್ದು, ಮಂಜುನಾಥ ಭಂಡಾರಿ ಅವರು ವಿದ್ಯಾರ್ಥಿ ನಾಯಕರಾಗಿ ಶಾಸಕರಾಗಿದ್ದು, ಇವರ ಜತೆಗೆ ವಸಂತ ಕುಮಾರ್ ಅವರು ಕೂಡ ಯುವ ನಾಯಕತ್ವದಿಂದ ಬೆಳೆದು ಬಂದಿದ್ದು, ಇವರುಗಳು ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಪ್ರಚಾರಸಮಿತಿ ಅಧ್ಯಕ್ಷರಾಗಿ ವಿನಯ್ ಕುಮಾರ್ ಸೊರಕೆ ಅವರು ಆಯ್ಕೆಯಾಗಿದ್ದು, ಇವು ಪವಿತ್ರ ಕೆಲಸವಾಗಿದ್ದು, ನಿಮ್ಮ ಅವಧಿಯಲ್ಲಿ ನೀವು ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು.

ಇನ್ನು ತುಮಕೂರಿನ ಜೆಡಿಎಸ್ ಪಕ್ಷದಿಂದ ಗೋವಿಂದರಾಜು, ಪ್ರೇಮಾ ಮಹಲಿಂಗಪ್ಪ, ತುಮಕೂರು ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಬೋರೇಗೌಡರು, ಆರ್.ಶಂಕರ್ ಹಾಗೂ ಅವರ ತಂಡ, ಸಿ.ಎಂ ಇಬ್ರಾಯಿಂ ಅವರ ಸುಪುತ್ರ ಸಿ.ಎಂ ಫಯಾಸ್ ಅವರು ಇಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಚಾರ ಎಂದರು.

https://pragativahini.com/rameshwaram-cafe-bomb-blast-casebjp-ledernia-custody

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button