Education

*ಶೈಕ್ಷಣಿಕ ಕ್ರಾಂತಿಗಾಗಿ ರಾಜ್ಯದ ಎಲ್ಲ ಕಂಪೆನಿಗಳು ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ಕೈ ಜೋಡಿಸಿ:ಡಿಸಿಎಂ ಕರೆ*

ಪ್ರಗತಿವಾಹಿನಿ ಸುದ್ದಿ: “ಪ್ರಾಥಮಿಕ ಶಿಕ್ಷಣದಲ್ಲಿ ಕರ್ನಾಟಕ ಕ್ರಾಂತಿ ಮಾಡಬೇಕು. ರಾಜ್ಯದ ಎಲ್ಲಾ ಕಂಪೆನಿಗಳು ಸರ್ಕಾರದ ಜೊತೆ ಕೈ ಜೋಡಿಸಿದರೆ ಮೂರು ವರ್ಷಗಳಲ್ಲಿ 2 ಸಾವಿರ ಕೆಪಿಎಸ್ ಶಾಲೆಗಳ ನಿರ್ಮಾಣದ ಕನಸನ್ನು ನನಸು ಮಾಡಬಹುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಬಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಿಎಸ್ ಆರ್ ಶಿಕ್ಷಣ ಸಮ್ಮೇಳನದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;

“ಕೆಪಿಎಸ್ ಶಾಲೆಗಳ ನಿರ್ಮಾಣಕ್ಖಾಗಿ ಸಮತ್ವ ಎನ್ನುವ ಕಾರ್ಯಕ್ರಮವನ್ನು ಸರ್ಕಾರ ಪರಿಚಯಿಸುತ್ತಿದೆ. ಶಾಲೆಗಳ ನಿರ್ಮಾಣ ಮಾಡುವ ಕಂಪೆನಿಗಳಿಗೆ ಗುತ್ತಿಗೆದಾರರು, ಶಾಲಾ ಕಟ್ಟಡ ವಾಸ್ತುಶಿಲ್ಪಿಗಳು ಸೇರಿದಂತೆ ತಾಂತ್ರಿಕ ಬೆಂಬಲ ನೀಡಲಾಗುವುದು. ಸರ್ಕಾರದ ಸಲಹೆ ಪಡೆದು ಕಂಪೆನಿಗಳು ಅವರ ಕಲ್ಪನೆಯ ವಿನ್ಯಾಸದ ಶಾಲೆಗಳನ್ನು ನಿರ್ಮಿಸಬಹುದು.”

“ಕರ್ನಾಟಕದಲ್ಲಿ 43 ಬೃಹತ್ ಕಂಪೆನಿಗಳಿವೆ. ಇವುಗಳು 4 ಲಕ್ಷದ 8 ಸಾವಿರ ಕೋಟಿ ಲಾಭಾಂಶವನ್ನು ಘೋಷಿಸಿಕೊಂಡಿವೆ. ಇವುಗಳ ಸಿಎಸ್ ಆರ್ ಅನುದಾನದ ಮೊತ್ತ 8.63 ಸಾವಿರ ಕೋಟಿಯಾಗಲಿದೆ. ಇದರಲ್ಲಿ 6.6 ಸಾವಿರ ಕೋಟಿಯನ್ನು ಶಿಕ್ಷಣದ ಮೇಲೆ ಖರ್ಚು ಮಾಡುತ್ತಿವೆ. ಕೇವಲ 50 ಕಂಪೆನಿಗಳು 10 ಸಾವಿರ ಕೋಟಿ ಸಿಎಸ್ ಆರ್ ನಿಧಿ ನೀಡಲು ಸಾಧ್ಯವಾಗುತ್ತಿದೆ. ಎಲ್ಲರೂ ಸೇರಿದರೆ ಇನ್ನು ಹೆಚ್ಚಿನ ಅನುದಾನ ಸಾಧ್ಯ. ಇದೊಂದು ಪವಿತ್ರವಾದ ಕೆಲಸ.”

“ಉದ್ದಿಮೆದಾರರು 2 ಸಾವಿರ ಸ್ಥಳಗಳಲ್ಲಿ ಜಿಲ್ಲಾ, ತಾಲ್ಲೂಕು ಕೇಂದ್ರಗಳನ್ನು ಹೊರತುಪಡಿಸಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಯಾವುದೇ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮನೆ ಮಕ್ಕಳನ್ನು ಸಾಕಿದಂತೆ ನೀವು ಕಟ್ಟುವ ಶಾಲೆಯನ್ನು ಪ್ರೀತಿಸಿ. ಇದರಿಂದ ಗ್ರಾಮೀಣ ಪ್ರದೇಶಗಳಿಂದ ನಗರ ಭಾಗಗಳಿಗೆ ಶಿಕ್ಷಣಕ್ಕಾಗಿ ವಲಸೆ ಬರುವುದು ತಪ್ಪಲಿದೆ. ಮಗುವಿನ ಶಿಕ್ಷಣಕ್ಕಾಗಿ ಇಡೀ ಕುಟುಂಬವೇ ವಲಸೆ ಬರುವುದು ತಪ್ಪಲಿದೆ. ನಗರ, ಗ್ರಾಮೀಣ ಪ್ರದೇಶಗಳ ನಡುವಿನ ಕೀಳರಿಮೆ, ಒತ್ತಡ ಹಾಗೂ ಮೂಲ ಸೌಕರ್ಯಗಳ ಸಮಸ್ಯೆ ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಬೆಳವಣಿಗೆ ಕಂಡರೆ ನಮಗೆ, ನಿಮಗೆ ಎಲ್ಲರಿಗೂ ಸಂತೃಪ್ತಿಭಾವ ಮೂಡುತ್ತದೆ.”

ಸಿಬಿಎಸ್ ಇ, ಐಸಿಎಸ್ ಇ ಶಿಕ್ಷಣ ಮಾದರಿ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕು

“ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಾಲೆಗಳಿವೆ ಆದರೆ ಬಾಗಲಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತಾಳೆ. ಅಂದರೆ ನಾವು ಸೌಕರ್ಯಗಳನ್ನು ನೀಡಿದರೆ ಮಕ್ಕಳು ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ನಗರ ಭಾಗದಲ್ಲಿ ಸಿಗುವ ಸಿಬಿಎಸ್ ಇ, ಐಸಿಎಸ್ ಇ ಶಿಕ್ಷಣ ಮಾದರಿ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕು ಎನ್ನುವುದು ಈ ಯೋಜನೆಯ ಹಿಂದಿರುವ ಉದ್ದೇಶ”

“ನಾನು ಸಹ ವಿದ್ಯಾಭ್ಯಾಸಕ್ಕೆ ಎಂದು ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬಂದವನು. ರಾಜಕೀಯ ಸೇರಿದ ಮೇಲೆ ನನ್ನ ವಿದ್ಯಾಭ್ಯಾಸ ನಿಂತು ಹೋಗಿತ್ತು. ನನ್ನ 46 ನೇ ವಯಸ್ಸಿನಲ್ಲಿ ಪದವಿ ಮುಗಿಸಿದೆ. ನನಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿದೆ. ನಮ್ಮ ಜಮೀನುಗಳನ್ನು ಶಾಲೆಗಳಿಗೆ ದಾನ ಮಾಡಿದ್ದೇವೆ. ಅಲ್ಲಿ ಶಾಲೆ ಕಟ್ಟಿಸಿ ನಮ್ಮ ಟ್ರಸ್ಟ್ ಮುಖಾಂತರ ದತ್ತು ಪಡೆದು ನಡೆಸುತ್ತಿದ್ದೇವೆ.

ನಿಮ್ಮ ಸಿಎಸ್ ಆರ್ ಹಣ ಶಾಲೆಗೆ ಬೇಡ

ನೀವು ಸರ್ಕಾರಕ್ಕೆ ತೆರಿಗೆ ನೀಡುತ್ತೀರಿ ಆದ ಕಾರಣ ನಿಮ್ಮ ಹಣ ನಮಗೆ ಬೇಡ. ನಿಮ್ಮ ಸಿಎಸ್ ಆರ್ ಹಣವನ್ನು ನೀವೇ ಶಿಕ್ಷಣದ ಮೇಲೆ ಸದುಪಯೋಗ ಮಾಡಿ ನಿಮ್ಮದೇ ಹೆಸರಿನಲ್ಲಿ ವಿನಿಯೋಗಿಸಿ. ಶಾಲೆಯ ಹೆಸರಿನ ಪಕ್ಕ ನಿಮ್ಮ ಕಂಪೆನಿ, ಬ್ರಾಂಡಿನ ಹೆಸರನ್ನು ಹಾಕಿ. ಶಿಕ್ಷರನ್ನು ನೀಡುವ ಶಾಲೆಯ ಹೆಸರನ್ನು ಹಾಸಕಬಹುದು. ಅದು ನಿಮ್ಮ ಶಾಲೆ.”

“ಸಮಾಜದ ಪ್ರತಿಯೊಬ್ಬ ಮನುಷ್ಯನೂ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ಕನಸು ಕಾಣುತ್ತಾನೆ. ಆದ ಕಾರಣಕ್ಕೆ ಸರ್ಕಾರ ಈ ಆಲೋಚನೆಗೆ ಮುಂದಾಗಿದೆ. ಉದ್ದಿಮೆದಾರರು, ಶೈಕ್ಷಣಿಕ ತಜ್ಞರು, ವಿಷಯ ಪರಿಣಿತರು, ರಾಜಕಾರಣಿಗಳ ಸಂಗಮವಾಗಿದೆ. ನಾವೆಲ್ಲಾ ಒಟ್ಟಾಗಿ ಸೇರಿ ಈ ದೇಶಕ್ಕೆ ಅತ್ಯತ್ತಮ ಮಾದರಿಯನ್ನು ನೀಡಬಹುದು. ಪ್ರಧಾನಿ ಮೋದಿ ಅವರ ಬಳಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿದರು”.

“ಸಿಎಸ್ ಆರ್ ಅನುದಾನದಲ್ಲಿ ಒಂದಷ್ಟು ಹಗರಣಗಳು ನಡೆಯುತ್ತವೆ. ಒಂದಷ್ಟು ಮಂದಿ ಎನ್ ಜಿಓ ಗಳಿಗೆ ಇಂತಿಷ್ಟು ಹಣ ಎಂದು ಸಹಾಯ ಮಾಡಿ ನಂತರ ಹಣದ ರೂಪದಲ್ಲಿ ಮರಳಿ ಪಡೆಯುತ್ತಿದ್ದಾರೆ. ಆದ ಕಾರಣಕ್ಕೆ ನಮ್ಮ ಸರ್ಕಾರ ಉಪ ಆಯುಕ್ತರಿಗೆ ಜವಾಬ್ದಾರಿ ನೀಡಿದೆ. ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ನಡೆಯಬೇಕು ಎಂದು ಸೂಚನೆ ನೀಡಿದ್ದೇವೆ”.

ಅಜೀಂ ಪ್ರೇಮ್ ಜೀ 1,500 ಕೋಟಿ ಅನುದಾನ ನೀಡಿದ್ದಾರೆ

“ಅಜೀಂ ಪ್ರೇಮ್ ಜೀ ಅವರು ಯಾದಗಿರಿ, ಕಲಬುರ್ಗಿ ಜಿಲ್ಲೆಗಳ ಜವಾಬ್ದಾರಿ ಸಂಪೂರ್ಣ ನಮಗೆ ನೀಡಿ ಎಂದು ಹೇಳಿದ್ದಾರೆ. ಮೊಟ್ಟೆ ವಿತರಣೆಗೆ ರೂ.1,500 ಕೋಟಿ ನೀಡಿದ್ದಾರೆ ಟೊಯೋಟಾ ಕಂಪೆನಿಯವರು ರಾಮನಗರ ಜಿಲ್ಲೆಯ 300 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಈಗ ಐದರಿಂದ ಆರು ಶಾಲೆಗಳನ್ನು ಪ್ರಸ್ತುತ ಅಭಿವೃದ್ದಿ ಮಾಡುವುದಾಗಿ ತಿಳಿಸಿದ್ದಾರೆ. ಒಂದೇ ಕಂಪೆನಿಯವರು ಎಲ್ಲಾ ಕೆಲಸಗಳನ್ನು ಮಾಡಬೇಕೆಂದಿಲ್ಲ. ಒಂದಷ್ಟು ಜನರು ಒಟ್ಟಿಗೆ ಸೇರಿ ಕೆಲಸ ಮಾಡಬಹುದು. ಶಾಲೆಗಳನ್ನು ವಿನ್ಯಾಸ ಮಾಡುವ ವಾಸ್ತುಶಿಲ್ಪಿಗಳು ಉಚಿತವಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇವರ ನೆರವು ಪಡೆಯಬಹುದು. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಮುಂದಿನ ಜನಾಂಗದ ಬೆಳವಣಿಗೆಗಾಗಿ ನಾವೆಲ್ಲ ಕೈ ಜೋಡಿಸಬೇಕು”

“ಸರ್ಕಾರ ಶಿಕ್ಷಣದ ಮೇಲೆ 45 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಮಧು ಬಂಗಾರಪ್ಪ ಅವರಿಗೆ ಬೇರೆ ಖಾತೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಬಳಿ ಮಾತನಾಡಿ ಶಿಕ್ಷಣ ಖಾತೆಯನ್ನು ಕೊಡಿಸಲಾಯಿತು. ಮೊದಲ ಬಾರಿಗೆ 12 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದಾರೆ. ಒಟ್ಟು 50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ”.

“ನಾನು ನಗರಾಭಿವೃದ್ದಿ ಸಚಿವನಾಗಿದ್ದಾಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಎಂದು ಬಂದಿದ್ದರು. ಆಗ ಇದೇ ಬಾಂಕ್ವೆಟ್ ಹಾಲ್ ವೇದಿಕೆಯಲ್ಲಿ ಮಾತನಾಡುತ್ತಾ ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿ, ಮುಂಬೈ ಸೇರಿದಂತೆ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು”

ಎಲ್ಲಾ ಕಂಪೆನಿಗಳಲ್ಲಿ ದಕ್ಷಿಣ ಭಾರತೀಯರು

ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಮಾಡಲು ಸಾಕಷ್ಟು ಶ್ರಮವಹಿಸಿದರು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಸಾಕಷ್ಟು ಎಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಪ್ರಾರಂಭವಾದವು. ಪ್ರಸ್ತುತ 200 ಕ್ಕೂ ಹೆಚ್ಚು ಎಂಜಿನಿಯರಿಂಗ್, 70 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಜೊತೆಗೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಕರ್ನಾಟಕದಲ್ಲಿವೆ. ಪ್ರಪಂಚದ ಅತ್ಯುನ್ನತ ಕಂಪೆನಿಗಳ ಹುನ್ನತ ಹುದ್ದೆಗಳಲ್ಲಿ ದಕ್ಷಿಣ ಭಾರತೀಯರು ಇದ್ದೇ ಇರುತ್ತಾರೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದವರು ಆಗಿರುತ್ತಾರೆ. ಏಕೆಂದರೆ ಇಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಕಾರಣವಾಗಿದೆ.

ನನ್ನ ಮಗಳು ಏಕೆ ಎಲ್ಲಾ ಸ್ಟಾರ್ಟ್ ಆಪ್ ಗಳು ಕರ್ನಾಟಕದಲ್ಲಿಯೇ ಪ್ರಾರಂಭವಾಗುತ್ತಿವೆ. ದೇಶದ ಬೇರೆ ಭಾಗಗಳಲ್ಲಿ ಏಕೆ ಆಗುತ್ತಿಲ್ಲ. ಇಂದಿನ ಪೀಳಿಗೆ ಕೇವಲ ಭಾರತದ ಮಟ್ಟದಲ್ಲಿ ಯೋಚನೆ ಮಾಡುತ್ತಿಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಚನೆ ಮಾಡುತ್ತಾರೆ. ಗೋಬಲ್ ಮಟ್ಟದಲ್ಲಿ ಸ್ಪರ್ಧಿಸಲು ಇಷ್ಟಪಡುತ್ತಾರೆ.

ನಗರ ಭಾಗಗಳಿಗೆ ವಲಸೆ ತಪ್ಪಿಸಲು ಶಾಲೆಗಳ ನಿರ್ಮಾಣಕ್ಕೆ ಆದ್ಯತೆ

ವಿಧಾನಸೌಧದ ಬಾಂಕ್ವೆಟ್ ಸಭಾಂಗಣದಲ್ಲಿ ಉದ್ದಿಮೆದಾರರು ಹಾಗೂ ಎನ್ ಜಿಓ ಗಳ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅವರು

“ಬೆಂಗಳೂರಿಗೆ ಬಂದ ನಾನು ನಂತರ ಊರಿಗೆ ಮರಳಿ ಹೋಗಲು ಆಗಲಿಲ್ಲ. ಬೆಂಗಳೂರಿನ ಜನಸಂಖ್ಯೆ 1.4 ಕೋಟಿಗೆ ಮುಟ್ಟಿದೆ. ಶೇ 58 ರಷ್ಟು ನಗರ ಭಾಗದ ಜನಸಂಖ್ಯೆ ಬೆಂಗಳೂರಿನಲ್ಲಿಯೇ ಇದೆ. ಶೇ 42 ರಷ್ಟು ನಗರ ಭಾಗದ ಜನಸಂಖ್ಯೆ ರಾಜ್ಯದ ಇತರೇ ಭಾಗಗಳಲ್ಲಿದೆ. ಇದರಿಂದಾಗಿ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಅತಿದೊಡ್ಡ ಸವಾಲು ಎದುರಾಗಿದೆ. ನನ್ನ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ಏಳು ಜನ ಸಚಿವರನ್ನು ಒಳಗೊಂಡ ಸಮಿತಿ ರಚನೆ ಮಾಡಿದ್ದಾರೆ. ಉಪ ಆಯುಕ್ತರು ನಮ್ಮ ನಿಮ್ಮ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಾರೆ” ಎಂದು ತಿಳಿಸಿದರು.

“ಈ ಯೋಜನೆಯ ಬಗ್ಗೆ ಇಡೀ ದೇಶವೆ ಕುತೂಹಲದಿಂದ ನೋಡುತ್ತಿದೆ. ನಮ್ಮ ದೇಶದ ಭವಿಷ್ಯ ಚೆನ್ನಾಗಿರಬೇಕು ಎಂದರೆ ಶಿಕ್ಷಣ ಸಿಗಬೇಕು. ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದ ಬಗ್ಗೆ ಗಮನಹರಿಸಲಾಗುವುದು. ಆದಷ್ಟು ಬೇಗ ಉದ್ಯಮಿಗಳು ಕಾರ್ಯಪ್ರವೃತ್ತರಾದರೆ ಉತ್ತಮ ಯೋಜನೆ ಸಾಕಾರಗೊಳ್ಳುತ್ತದೆ. ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೆ ದೊರೆಯಬೇಕು. ಐಸಿಎಸ್ ಇ, ಸಿಬಿಎಸ್ ಇ ಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಮುಂದುವರೆಯಲು ಸಾಧ್ಯ” ಎಂದರು.

“ಸಿಎಸ್ ಆರ್ ಅನುದಾನ ಬಳಸಿಕೊಂಡು ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸುವುದು ನಮ್ಮ ಗುರಿಯಾಗಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ಸಾಧ್ಯವೇ ಎಂದು ಅನೇಕರು ಹಾಗೂ ಇತರೇ ರಾಜ್ಯಗಳು ಬೆರಗಾಗಿ ನೋಡುತ್ತಿವೆ. ಮಾಜಿ ಕೇಂದ್ರ ಹಣಕಾಸು ಮಂತ್ರಿ ಪ್ರಣವ್ ಮುಖರ್ಜಿ ಅವರು ಸಿಎಸ್ ಆರ್ ಅನುದಾನದ ಬಗ್ಗೆ ಪರಿಚಯಿಸಿದಾಗ ಸಾಕಷ್ಟು ವಿಮರ್ಶೆಗಳು ಬಂದವು. ಕೊನೆಗೆ ಅನೇಕ ಉದ್ಯಮಿಗಳು ಸಹಮತ ವ್ಯಕ್ತಪಡಿಸಿದರು. ಅಲ್ಲದೇ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಅನೇಕ ಕಂಪೆನಿಗಳು ಮಾಡಿವೆ”ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button