Latest

*ಬಿಜೆಪಿ ಸರ್ಕಾರ ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ತಂದಿದೆ; ಡಿ.ಕೆ.ಶಿವಕುಮಾರ್ ಕಿಡಿ*

ಪ್ರಗತಿವಾಹಿನಿ ಸುದ್ದಿ; ಕುಣಿಗಲ್: ನಾನು ಕುಣಿಗಲ್ ಗೆ ಆಗಮಿಸಿದಾಗ ಸುಮಾರು 10 ಸಾವಿರ ಜನರು ನನ್ನನ್ನು ಸ್ವಾಗತಿಸಿದ್ದಾರೆ. ಆದರೆ ಅವರಾರಿಗೂ ಸಮಾವೇಶದೊಳಗೆ ಬರಲು ಸಾಧ್ಯವಾಗಿಲ್ಲ. ಅಷ್ಟು ದೊಡ್ಡ ಪ್ರಮಾಣದ ಜನ ಸೇರಿದ್ದು, ನಿಮ್ಮ ಪ್ರೀತಿ, ಅಭಿಮಾನ ಮರೆಯಲು ನಮ್ಮಿಂದ ಸಾಧ್ಯವಿಲ್ಲ ಎಂದು ಕೆಪಿಸುಇಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕುಣಿಗಲ್ ನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಕೂಡ ಅಷ್ಟೇ ಮುಖ್ಯ. ನಂಬಿಕೆ ಇಲ್ಲವಾದರೆ ಯಾವುದೇ ಸಂಬಂಧ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮ ಜೀವನದಲ್ಲಿ ಬದಲಾವಣೆ ತರಲಿದೆ, ಬೆಳಕು ನೀಡಲಿದೆ ಎಂಬ ನಂಬಿಕೆ ಇಟ್ಟಿದ್ದೀರಿ. ನಿಮ್ಮ ಈ ನಂಬಿಕೆ ಉಳಿಸಿಕೊಳ್ಳಲು ನಾವು ಶತ ಪ್ರಯತ್ನ ಮಾಡುತ್ತೇವೆ. ಮಾತು ಕೊಡುವುದಕ್ಕಿಂತ ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದರು.

Related Articles

ರಾಜ್ಯದ ಮಹಿಳೆಯರು ಬೆಲೆ ಏರಿಕೆಯಿಂದ ಪ್ರತಿನಿತ್ಯ ಕಷ್ಟಪಡುತ್ತಿದ್ದೀರಿ. 450 ರೂ ಇದ್ದ ಅಡುಗೆ ಅನಿಲ ಈಗ 1200 ರೂ. ಆಗಿದೆ. ನಿಮ್ಮ ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಡಬಲ್ ಆಗಿವೆ. ಈ ಸಮಯದಲ್ಲಿ ನಿಮ್ಮ ಕಷ್ಟ, ನೋವುಗಳನ್ನು ಆಲಿಸಲು ಪ್ರಜಾಧ್ವನಿ ಯಾತ್ರೆಯಲ್ಲಿ ಇಲ್ಲಿಗೆ ಆಗಮಿಸಿದ್ದೇವೆ. ಈ ಕ್ಷೇತ್ರದ ಜನರ ಪರ ಇಲ್ಲಿನ ಶಾಸಕ ರಂಗನಾಥ್ ಅವರು ಹಾಗೂ ಸಂಸದ ಸುರೇಶ್ ಅವರು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೇ ನಿಮ್ಮ ಪರ ಧ್ವನಿ ಎತ್ತಿ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ. ಕೋವಿಡ್ ಸಮಯದಲ್ಲಿ ಔಷಧಿ, ಆಹಾರ, ಔಷಧಿ ಕೊಟ್ಟಿದ್ದಾರೆ. ನಿಮ್ಮ ಜತೆ ನಿಂತಿದ್ದಾರೆ.

ಬಿಜೆಪಿ ಸರ್ಕಾರದ ಪರವಾಗಿ ಯಾರಾದರೂ ನಿಮ್ಮ ಕಷ್ಟ ಸುಖ ಕೇಳಿದ್ದಾರಾ? ಶಾಸಕನಾಗಿ ಆಯ್ಕೆಯಾದ ನಂತರ ನಿಮ್ಮ ಜತೆ ನಿಂತಿದ್ದಾರೆ. ಕಳೆದ ಐದು ವರ್ಷಗಳಿಂದ ರಂಗನಾಥ್ ಹಾಗೂ ಸುರೇಶ್ ಅವರು ನಿರಂತರವಾಗಿ ನಿಮ್ಮ ಪರ ಕೆಲಸ ಮಾಡುತ್ತಿದ್ದಾರೆ. ರಂಗನಾಥ್ ಅವರು ಜನಪರ ಶಾಸಕರಾಗಿ ಉಳಿದಿದ್ದಾರೆ. ಜನಪರ ಹೋರಾಟ ಮಾಡುವವರು ಎಂದಿಗೂ ಸೋಲುವುದಿಲ್ಲ.

ಜನರ ಕಷ್ಟಕ್ಕೆ ಸ್ಪಂದಿಸಲು, ಅವರಿಗೆ ಪರಿಹಾರ ನೀಡಲು ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಮೊದಲ ಗ್ಯಾರಂಟಿ ಗೃಹಜ್ಯೋತಿ ಮೂಲಕ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳು 1500 ರೂ.ನಂತೆ ವರ್ಷಕ್ಕೆ 18 ಸಾವಿರ ಉಳಿತಾಯ ಮಾಡಬಹುದು. ಇನ್ನು ಎರಡನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ಸಿಗಲಿದೆ. ಆ ಮೂಲಕ ವರ್ಷಕ್ಕೆ 24 ಸಾವಿರ ನೀಡಲಾಗುವುದು. ಇನ್ನು ಮೂರನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಸದಸ್ಯರಿಗೆ ಪ್ರತಿ ತಿಂಗಳು ತಲಾ 10 ಕೆ.ಜಿ ಅಕ್ಕಿ ನೀಡಲಾಗುವುದು. ಯುವನಿಧಿ ಯೋಜನೆ ಮೂಲಕ ನಿರುದ್ಯೋಗ ಪದವೀಧರ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 3 ಸಾವಿರ ನಿರುದ್ಯೋಗ ಭತ್ಯೆ, ಡಿಪ್ಲೋಮಾ ಮಾಡಿರುವ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಯೋಜನೆ ಜಾರಿ ಮಾಡದಿದ್ದರೆ ನಾವು ಮತ್ತೆ ನಿಮ್ಮ ಮನೆಗೆ ಬಂದು ಮತ ಕೇಳುವುದಿಲ್ಲ. ಈ ಗ್ಯಾರಂಟಿ ಕಾರ್ಡ್ ಗಳನ್ನು ನೀವು ಪ್ರತಿ ಮನೆಗೆ ತಲುಪಿಸಿ ಜಾಗೃತಿ ಮೂಡಿಸಬೇಕು.

ರೈತರಿಗೆ ನೆರವಾಗಲು ನೀರಾವರಿ ಸಚಿವನಾಗಿದ್ದಾಗ ಲಿಂಕ್ ಕೆನಾಲ್ ಮೂಲಕ ಕೆರೆ ನೀರು ತುಂಬಲು 660 ಕೋಟಿ ಮಂಜೂರು ಮಾಡಲಾಗಿತ್ತು. ಟೆಂಡರ್ ಕರೆದು ಎಲ್ಲ ಅಂತಿಮವಾದ ನಂತರ ಯಡಿಯೂರಪ್ಪ ಅವರ ಸರ್ಕಾರ ಅದನ್ನು ರದ್ದು ಮಾಡಿತು. ನಿಮ್ಮ ಮಗ ಡಿ.ಕೆ. ಶಿವಕುಮಾರ್ ಗೆ ಒಂದು ಅವಕಾಶ ಮಾಡಿಕೊಡಿ, ಈ ಯೋಜನೆಯನ್ನು ನಾನು ಪೂರ್ಣ ಮಾಡುತ್ತೇನೆ.

ನಾನು ಇಂಧನ ಸಚಿವನಾಗಿದ್ದಾಗ ಪ್ರತಿ ರೈತರಿಗೂ ಟ್ರಾನ್ಸ್ ಫಾರ್ಮರ್ ಉಚಿತವಾಗಿ ಅಳವಡಿಸಿಕೊಡಲಾಗಿತ್ತು. ಆಮೂಲಕ ರೈತರಿಗೆ 7 ತಾಸು ವಿದ್ಯುತ್ ನೀಡಲಾಗಿತ್ತು. ಹೇಮಾವತಿ ನದಿ ನೀರಿಗೆ 200 ಕೋಟಿ ನೀಡಲಾಗಿತ್ತು. ಇದೆಲ್ಲವನ್ನು ನಿಮ್ಮ ಸೇವೆಗಾಗಿ, ನಿಮಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮಾಡಿದ್ದೇವೆ. ಅಧಿಕಾರಕ್ಕೆ ಬರುವುದು ಮುಖ್ಯವಲ್ಲ, ಅಧಿಕಾರದಲ್ಲಿ ಇದ್ದಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಶಾಸಕ ರಂಗನಾಥ್ ಅವರು ಸಾಮಾನ್ಯ ಸೇವಕನಂತೆ ನಿಮ್ಮ ಪರ ಹಗಲು ರಾತ್ರಿ ದುಡಿದಿದ್ದಾರೆ.

ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ 5 ರೂ ನೀಡಿತ್ತು. ಹಸುಗಳ ಮೇವು ಸೇರಿದಂತೆ ಎಲ್ಲ ವಸ್ತು ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ರೈತರ ಏಳಿಗೆಗೆ ಶ್ರಮಿಸಲಿದೆ. ಬಿಜೆಪಿ ಸರ್ಕಾರದಲ್ಲಿ ಎಲ್ಲ ಹಂತದಲ್ಲೂ ಲಂಚ ನೀಡಬೇಕು. ಉದ್ಯೋಗ ನೇಮಕಾತಿ, ಗುತ್ತಿಗೆ ಎಲ್ಲ ಕೆಲಸ ಆಗಬೇಕಾದರೂ ಲಂಚ ನೀಡಬೇಕು. ನಾನು 25 ಸಾವಿರ ಜನರಿಗೆ ಇಂಧನ ಇಲಾಖೆಯಲ್ಲಿ ಕೆಲಸ ನೀಡಿದ್ದೆ. ಒಬ್ಬರಿಂದಲೂ ನಾವು ಲಂಚ ಪಡೆದಿರಲಿಲ್ಲ. ಖಾಸಗಿ ಕ್ಷೇತ್ರದಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಕಾನೂನು ತರುತ್ತೇವೆ.

ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಈ ಸರ್ಕಾರ ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ತಂದಿದೆ. ಈ ಸರ್ಕಾರವನ್ನು ಕಿತ್ತುಹಾಕಬೇಕು. ನೀವು ದಳ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹೇಳಿ, ನಿಮ್ಮ ಮನೆ ಬಾಗಿಲಿಗೆ ಲಕ್ಷ್ಮಿ ಬರುತ್ತಿದ್ದಾಳೆ. ಆಕೆಯನ್ನು ಮನೆಯೊಳಗೆ ಬರಮಾಡಿಕೊಳ್ಳಿ ಎಂದು.

ನಾನು ಕುಮಾರಣ್ಣನಿಗೆ ಬೆಂಬಲ ನೀಡಿ ಸಹಾಯ ಮಾಡಿದ್ದೇ ಅಲ್ಲವೇ? ಅವರಿಗೆ ಅಧಿಕಾರ ಕೊಟ್ಟು ಆಗಿದೆ. ಅದನ್ನು ಅವರು ಉಳಿಸಿಕೊಳ್ಳಲಿಲ್ಲ. ಯುಗಾದಿ ಹಬ್ಬ ಹಾಗೂ ರಂಜಾನ್ ತಿಂಗಳು ಆರಂಭವಾಗುವ ಮೂಲಕ ಹೊಸ ವರ್ಷ ಆಗಮಿಸಿದೆ. ಈ ಶುಭ ಸಂದರ್ಭದಲ್ಲಿ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ.ನಾವು ಬೆಳಗ್ಗೆ ಎದ್ದರೆ ಕೈ ನೋಡಿ ಅದರಲ್ಲಿ ಲಕ್ಷ್ಮಿಯನ್ನು ಕಾಣುತ್ತೇವೆ. ಹೀಗಾಗಿ ಈ ಕೈ ಜೊತೆ ಕೈ ಜೋಡಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button