*ಅದೆಂಗೆ ಸಾಧ್ಯ ಎಂದು ಕೇಳುತ್ತಿರುವ ಮಿನಿಸ್ಟರ್ ಅಶೋಕ್… ನಮಗೂ ಆಡಳಿತ ಮಾಡುವುದು ಗೊತ್ತಿದೆ ಎಂದು ಟಾಂಗ್ ನೀಡಿದ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಮಾಲೂರು: ಈ ಭಾಗದ ಜನಪ್ರಿಯ ಶಾಸಕ ನಂಜೇಗೌಡರು ಜನರ ನಾಯಕ. ಅಧಿಕಾರ ಇಲ್ಲದಿದ್ದರೂ ನಿಮ್ಮ ಸೇವೆ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಿಮ್ಮಿಂದ ಲಾರಿಗಟ್ಟಲೆ ಹಣ್ಣು, ತರಕಾರಿ ಖರೀದಿಸಿ ನಿಮ್ಮ ಕಷ್ಟಕ್ಕೆ ಆಗಿದ್ದಾರೆ. ಸರಕಾರ ಮಾಡದ ಕೆಲಸವನ್ನು ಇವರು ಮಾಡಿದ್ದಾರೆ. ಅವರು ನಿಮ್ಮ ಕೈ ಬಲಪಡಿಸಿದ್ದಾರೆ. ನೀವು ನಮ್ಮ ಕೈ ಬಲಪಡಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಮಾಲೂರಿನ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮಗೆ ಜಾತಿ, ಧರ್ಮ ಬೇಧ ಇಲ್ಲ. ನಮಗೆ ಎಲ್ಲರೂ ಒಂದೇ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನಮ್ಮ ಸಿದ್ಧಾಂತ. ನುಡಿದಂತೆ ನಡೆಯುತ್ತೇವೆ. ಬಿಜೆಪಿಯದ್ದು ಕೋಮು ಸಂಘರ್ಷ ಆಧಾರಿತ ರಾಜಕೀಯ. ಭಾವನೆಗಳ ಮೇಲೆ ರಾಜಕೀಯ. ನಮ್ಮದು ಜನರ ಬದುಕು ಕಟ್ಟುವ ರಾಜಕೀಯ. ಬಿಜೆಪಿಯವರು ಹಿಂದುಗಳು ಮಾತ್ರ ಮುಂದು ಎನ್ನುತ್ತಾರೆ. ಆದರೆ ನಾವು ಹಿಂದೂ ಮುಸ್ಲಿಂ, ಕ್ರೈಸ್ತರು, ಸಿಖ್ಖರು ಎಲ್ಲರೂ ಒಂದು ಎಂದು ಹೇಳುತ್ತೇವೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದರು
ಬಿಜೆಪಿ ಅವರ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ನೂರು ರೂಪಾಯಿ ದಾಟಿದೆ. ಗ್ಯಾಸ್ ಬೆಲೆ 400 ರೂಪಾಯಿ ಇದ್ದದ್ದು 1100 ಆಗಿದೆ. ಅಡುಗೆ ಎಣ್ಣೆ ಬೆಲೆ 200 ದಾಟಿದೆ. ಬೇಳೆಕಾಳು ಸೇರಿ ಎಲ್ಲ ವಸ್ತುಗಳ ಬೆಲೆ ಮುಗಿಲು ಮುಟ್ಟಿದೆ. ಆದರೆ ಜನರ ಆದಾಯ ಪಾತಾಳ ತಲುಪಿದೆ.
ಪ್ರಧಾನಿ ಹೇಳಿದ 15 ಲಕ್ಷ ಹಣ ನಿಮ್ಮ ಅಕೌಂಟ್ಗೆ ಏನಾದರೂ ಬಂತಾ..? ರೈತರ ಆದಾಯ ಡಬಲ್ ಮಾಡುತ್ತೇವೆ, ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದರು ನಿಮ್ಮ ಆದಾಯ ಡಬಲ್ ಆಯಿತಾ? ಇಲ್ಲ. ಅವರ ಭರವಸೆಗಳು ಬರೀ ಸುಳ್ಳು. ಆದರೆ ನಾವು ನುಡಿದಂತೆ ನಡೆಯುತ್ತೇವೆ. ಜನರ ಕಷ್ಟಕ್ಕೆ ಸ್ಪಂದಿಸಲು ಎರಡು ಗ್ಯಾರೆಂಟಿ ಯೋಜನೆ ಪ್ರಕಟಿಸಿದ್ದೇವೆ. ನಿಮಗೆ 200 ಯುನಿಟ್ ವಿದ್ಯುತ್ ಉಚಿತ, 2000 ರು ಪ್ರತಿ ಕುಟುಂಬದ ಯಜಮಾನಿಗೆ ಖಚಿತ ಅನ್ನೋದು ನಮ್ಮ ಘೋಷಣೆ. ಎರಡೂ ಸೇರಿ ವರ್ಷಕ್ಕೆ 42 ಸಾವಿರ ಪ್ರತಿ ಕುಟುಂಬಕ್ಕೆ ನೆರವು ನೀಡುತ್ತೇವೆ. 5 ವರ್ಷಕ್ಕೆ 2 ಲಕ್ಷ ರೂಪಾಯಿ. ಇದು ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಸಹಿ ಹಾಕಿರುವ ಗ್ಯಾರಂಟಿ ಯೋಜನೆ. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ?
ಈ ಯೋಜನೆಗಳನ್ನು ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ನವರು ನಿಮ್ಮ ಮುಂದೆ ಮತ್ತೆ ಮತ ಕೇಳಲು ಬರುವುದಿಲ್ಲ. ನಮ್ಮ ಯೋಜನೆ ಕೇಳಿ ಬಿಜೆಪಿಯವರಿಗೆ ಹೊಟ್ಟೆ ಉರಿ. ಅದ್ಯಾರೋ ಮಿನಿಸ್ಟರ್ ಅಶೋಕ್ ಇದೆಂಗೆ ಸಾಧ್ಯ ಅಂತ ಕೇಳಿದ್ದಾರೆ. ನಮಗೆ ಗೊತ್ತು ದುಡ್ಡು ಹೇಗೆ ಹೊಂದಿಸಬೇಕು ಅಂತಾ. ನಾನು ಇಂಧನ ಸಚಿವನಾಗಿದ್ದಾಗ 10 ಸಾವಿರ ಮೆ.ವ್ಯಾ ಉತ್ಪಾದನೆಯಾಗಿದ್ದ ವಿದ್ಯುತ್ ಅನ್ನು 21 ಸಾವಿರ ಮೆ.ವ್ಯಾ ಉತ್ಪಾದನೆಗೆ ಏರಿಸಿದೆವು. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಪ್ರತಿ ಮನೆಗೆ 10 ಕೆ.ಜಿ ಅಕ್ಕಿಯನ್ನು ನೀಡುತ್ತೇವೆ. ಈ ಯೋಜನೆಗಳಿಗೆಲ್ಲ ಹಣ ಎಲ್ಲಿಂದ ತರುತ್ತೀರಾ ಎಂಬ ಪ್ರಶ್ನೆ ಕೇಳಬಹುದು. ನಾವು ಎಲ್ಲೂ ಕಳ್ಳತನ ಮಾಡಬೇಕಿಲ್ಲ. ಈ ಬಿಜೆಪಿ ಸರಕಾರದ 40% ಕಮಿಷನ್ ಲಂಚ ನಿಲ್ಲಿಸಿದರೆ ಸಾಕು ಇದಕ್ಕೆಲ್ಲ ದುಡ್ಡು ಹೊಂದಾಣಿಕೆ ಆಗುತ್ತದೆ. ನಮಗೆ ಆಡಳಿತ ಮಾಡುವುದು ಗೊತ್ತಿದೆ. ನಾವು ದಕ್ಷ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷ ಉಳುವವನೆ ಭೂಮಿಯ ಒಡೆಯ ಎಂದು ದುಡಿಯುವ ರೈತರಿಗೆ ಜಮೀನು ಕೊಟ್ಟಿತು. ಕಾಂಗ್ರೆಸ್ ಪಕ್ಷ ಭಾರತ ಜೋಡೋ ಯಾತ್ರೆ ಮಾಡುವಾಗ ವೃದ್ಧೆಯೊಬ್ಬರು ರಾಹುಲ್ ಗಾಂಧಿ ಅವರ ಬಳಿ ಬಂದು ಸೌತೇಕಾಯಿ ಕೊಟ್ಟರು. ಕೊಡುವಾಗ ಇದು ನಿಮ್ಮ ಅಜ್ಜಿ ಇಂದಿರಾ ಗಾಂಧಿ ಅವರು ಕೊಟ್ಟ ಜಮೀನಿನಲ್ಲಿ ಬೆಳೆದ ಸೌತೇಕಾಯಿ ಎಂದು ಕಾಂಗ್ರೆಸ್ ಕಾರ್ಯಕ್ರಮವನ್ನು ಸ್ಮರಿಸಿದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ 7 ಕೆ.ಜಿ. ಅಕ್ಕಿ ನೀಡಿದೆವು. ಅದನ್ನು ಕೇವಲ ಒಂದು ಜಾತಿಯವರಿಗೆ ಮಾತ್ರ ನೀಡಿದೆವಾ? ಎಲ್ಲ ವರ್ಗದವರಿಗೂ ನೀಡಿದ್ದೇವೆ. ಹಾಲಿಗೆ ಪ್ರೋತ್ಸಾಹ ಧನ 5 ರೂ ನೀಡಿದೆವು. ನಾವು ಜನರಿಗೆ ಕೊಟ್ಟ ಕಾರ್ಯಕ್ರಮದಲ್ಲಿ ಯಾವುದೇ ಜಾತಿ, ಧರ್ಮ ನೋಡಲಿಲ್ಲ. ಬಿಜೆಪಿ ಆಡಳಿತದಲ್ಲಿ ಪಶುಗಳ ಮೇವು ಬೆಲೆ ಹೆಚ್ಚಾಗಿದೆಯೇ ಹೊರತು ರೈತರ ಹಾಲಿನ ದರ ಏರಿಕೆ ಮಾಡಿಲ್ಲ.
ಬಿಜೆಪಿನಾ ಅಧಿಕಾರದಿಂದ ದೂರ ಇಡಬೇಕು ಅಂತ ಜೆಡಿಎಸ್ ಗೆ ಬೆಂಬಲ ಕೊಟ್ಟೆವು. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದೆವು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ನೀವು ಜೆಡಿಎಸ್ ಗೆ ವೋಟ್ ಹಾಕಿದ್ರೆ ವೇಸ್ಟ್ ಆಗುತ್ತೆ.
ಜನರ ನೋವು, ಸಮಸ್ಯೆ ತಿಳಿಯಲು ಇಲ್ಲಿ ಸೇರಿ ಚರ್ಚೆ ಮಾಡುತ್ತಿದ್ದೇವೆ. ನಾವು ಜನರ ಹೊಟ್ಟೆ ತುಂಬಿಸುವುದರ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ಕೆ,ಸಿ ವ್ಯಾಲಿ ಯೋಜನೆ ಮಾಡಿದೆವು. ಈ ಭಾಗದಲ್ಲಿ ಬತ್ತು ಹೋಗಿದ್ದ ಕೋಳವೆ ಬಾವಿಗಳು ಈಗ ಮತ್ತೆ ಭರ್ತಿಯಾಗಿಲ್ಲವೇ? ಕಾಂಗ್ರೆಸ್ ಪಕ್ಷದ ಈ ಋಣ ನೀವು ತೀರಿಸಬೇಕಲ್ಲವೇ?
ಬಿಜೆಪಿಯವರು ಅಚ್ಛೇ ದಿನ ತರುತ್ತೇವೆ ಎಂದಿದ್ದರು. ಯಾರಿಗಾದರೂ ಅಚ್ಛೇ ದಿನ ಬಂತಾ? ಯುವಕರಿಗೆ ಉದ್ಯೋಗ ಕೊಟ್ಟಿದ್ದಾರಾ? ಇಲ್ಲಿನ ಯುವಕರು ಕೆಲಸಕ್ಕೆ ಬೇರೆಕಡೆ ಉದ್ಯೋಗಕ್ಕೆ ವಲಸೆ ಹೋಗಬೇಕಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದವರು ಇದ್ದ ಉದ್ಯೋಗ ನಾಶ ಮಾಡಿದ್ದಾರೆ. ರಾಜ್ಯದಲ್ಲಿ 83 ಸಾವಿರ ಉದ್ಯೋಗ ನಾಶ ಮಾಡಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಉದ್ಯೋಗ ಖಾಲಿ ಇದ್ದರೂ ಅವುಗಳನ್ನು ತುಂಬಿಲ್ಲ.
ಪಿಎಸ್ಐ ನೇಮಕಾತಿಯಲ್ಲಿ ಒಂದೊಂದು ಹುದ್ದೆ 80 ಲಕ್ಷ ದಿಂದ 1 ಕೋಟಿವರೆಗೂ ಮಾರಾಟ ಮಾಡಿದ್ದಾರೆ. ಉತ್ತರ ಪತ್ರಿಕೆ ತಿದ್ದಿ ಅಕ್ರಮ ಮಾಡಿದ್ದಾರೆ. ಈ ಪ್ರಕರಣದಲ್ಲಿ 100 ಮಂದಿ ಜೈಲು ಸೇರಿದ್ದಾರೆ. ಮಂತ್ರಿಗಳ ರಕ್ಷಣೆ ಮಾಡಲು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.
ನಾವು ಚಿನ್ನ, ಬೆಳ್ಳಿ ಕದಿಯುವವರನ್ನು ನೋಡಿದ್ದೇವೆ. ಹಣ್ಣು, ತರಕಾರಿ, ಚಪ್ಪಲಿ ಕದಿಯುವವರನ್ನು ನೋಡಿದ್ದೇವೆ. ಆದರೆ ವೋಟ್ ಕದಿಯುವರನ್ನು ನಾವೆಲ್ಲೂ ನೋಡಿರಲಿಲ್ಲ. ಆದರೆ ಈ ಬಿಜೆಪಿಯವರು ವೋಟ್ ಕದ್ದಿದ್ದಾರೆ. ಅಲ್ಪಸಂಖ್ಯಾತರು, ಪರಿಶಿಷ್ಟರು, ಹಿಂದುಳಿದವರ ಒಟ್ಟು 22 ಲಕ್ಷ ಮತಗಳನ್ನು ತೆಗೆದುಹಾಕಿದ್ದಾರೆ. ಇದೊಂದು ಭ್ರಷ್ಟ ಸರ್ಕಾರ. ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಈಶ್ವರಪ್ಪನಿಗೆ ಲಂಚ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರ 40% ಸರ್ಕಾರ ಎಂದು ಪ್ರಧಾನಿಗೆ ದೂರು ನೀಡಿದರು. ಅನೇಕ ಗುತ್ತಿಗೆದಾರರು ಲಂಚ ನೀಡಲಾಗದೇ ದಯಾಮರಣಕ್ಕೆ ಅನುಮತಿ ಕೋರಿ ಪ್ರಧಾನಿಗೆ ಪತ್ರ ಬರೆದರು.
ರಾಜ್ಯಕ್ಕೆ ಬಂದ ಪ್ರಧಾನಿಗಳು ಯಾರಿಗೂ ಪರಿಹಾರ ನೀಡಲಿಲ್ಲ. ಹೀಗಾಗಿ ಈ ಭ್ರಷ್ಟಾ ಸರ್ಕಾರ ಕಿತ್ತು ಹಾಕಿ ಜನರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
*ಭೀಕರ ಬೈಕ್ ಅಪಘಾತ; ASI ಸ್ಥಳದಲ್ಲೇ ಸಾವು*
https://pragati.taskdun.com/bike-accidentasi-shabbir-husendeathdavanagere/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ