LatestUncategorized

*ವೋಟರ್ ಐಡಿ ಹಗರಣ ಹೊರ ಬರುತ್ತಿದ್ದಂತೆ ಅಲ್ಲಿ ಕುಕ್ಕರ್ ಬಾಂಬ್ ಸ್ಫೋಟ…! – ಡಿ.ಕೆ.ಶಿವಕುಮಾರ ಆರೋಪ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೋಟರ್ ಐಡಿ ಅಕ್ರಮ ಮುಚ್ಚಿಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಸ್ಫೊಟ ನಡೆಸಿತು. ಮತದಾರರ ಪಟ್ಟಿ ಅಕ್ರಮ ಹೊರಬರುತ್ತಿದ್ದಂತೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗೋಯ್ತಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್, ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಯಾವುದೇ ತನಿಖೆಯನ್ನೇ ಮಾಡದೇ ಉಗ್ರ ಎಂದು ಹೇಗೆ ಘೋಷಿಸಿದಿರಿ? ಡಿಜಿಪಿ ಸ್ಥಳಕ್ಕೆ ಹೋಗಿ ಭಯೋತ್ಪಾದಕ ಕೃತ್ಯ ಎಂದರಂತೆ ಇವರು ಉಗ್ರ ಎಂದು ಘೋಷಿಸಿದರಂತೆ. ಬೆಂಗಳೂರಿನಲ್ಲಿ ವೋಟರ್ ಐಡಿ ಹಗರಣ ಹೊರ ಬರುತ್ತಿದ್ದಂತೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅದೇನು ಕುಕ್ಕರ್ ಬಾಂಬ್ ಸ್ಫೋಟ ಮುಂಬೈ ಟೆರರಿಸ್ಟ್ ಅಟ್ಯಾಕ್ ತರಹದ ಘಟನೆ ಆಗಿತ್ತಾ? ಪುಲ್ವಾಮಾ, ಕಾಶ್ಮೀರ ತರಹದ ಘಟನೆ ಆಗಿತ್ತಾ? ಬಿಜೆಪಿಯವರು ಯಾವ ರೀತಿ ಪ್ರೊಜೆಕ್ಟ್ ಮಾಡಿದರು? ಇಲ್ಲಿ ವೋಟರ್ ಐಡಿ ಪ್ರಕರಣ ಆಗುತ್ತಿದ್ದಂತೆ ಅಲ್ಲಿ ಕುಕ್ಕರ್ ಸ್ಫೋಟ ಹೇಗೆ ಆಯ್ತು? ಯಾಕೆ? ಎಲ್ಲಿಂದ ಬಂದ ಕುಕ್ಕರ್ ಬಾಂಬ್ ಸ್ಫೋಟ ಮಾಡುವವನು? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಕೇವಲ ಭಾವನೆಯಲ್ಲಿ ಬದುಕು ತುಂಬಿಸಲು, ಹೊಟ್ಟೆ ತುಂಬಿಸಲು ಹೊರಟಿದ್ದೀರಿ. ಇದರಿಂದ ಜನರಿಗೆ ಯಾವ ಸಂದೇಶ ಕೊಡುತ್ತಿದ್ದೀರಿ? ಜನರೇನು ದಡ್ಡರಾ? ಎಂದು ಕಿಡಿಕಾರಿದ್ದಾರೆ.

*ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬ್ಲಾಸ್ಟ್ ಪ್ರಕರಣ ಬಳಕೆ*
ಮತ ಮಾಹಿತಿ ಕಳವು ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ ತಂದರು. ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದರು. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ.
ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬರುತ್ತಿದೆ ಎಂದು ಹೇಳಿದ್ದಾರೆ. ಇದರಲ್ಲಿ ಶಿವಮೊಗ್ಗಕ್ಕೆ, ಕರಾವಳಿ, ಉಡುಪಿ ಜಿಲ್ಲೆಗಳಿಗೆ ಯಾಕೆ ಬಂಡವಾಳ ಹೋಗುತ್ತಿಲ್ಲ? ಯಾವ ಜಿಲ್ಲೆಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಎಂದು ಸರ್ಕಾರ ಪಟ್ಟಿ ಬಿಡುಗಡೆ ಮಾಡಲಿ.
ಸರ್ಕಾರ ಕೇವಲ ಭಾವನೆ ಮೂಲಕ ದೇಶ ಕಟ್ಟಲು, ರಾಜ್ಯ ಕಟ್ಟಲು ಹೊರಟಿದ್ದಾರೆ. ಜನರ ಹೊಟ್ಟೆಪಾಡು ಮರೆತಿದ್ದಾರೆ. ಸರ್ಕಾರ ಕೊನೆ ದಿನಗಳನ್ನು ತಲುಪಿದೆ. ಜನ ಈ ಸರ್ಕಾರ ಕಿತ್ತೊಗೆಯಲು ತೀರ್ಮಾನಿಸಿದ್ದಾರೆ. ಮಾಧ್ಯಮಗಳು ನ್ಯಾಯ ನೀಡುವ ಸ್ಥಾನದಲ್ಲಿದೆ. ನ್ಯಾಯ ನೀಡುವ ಸ್ಥಾನದಿಂದ ಅನ್ಯಾಯ ಬರಬಾರದು. ರಾಜ್ಯದ ಗೌರವ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕು ಎಂದು ಪಕ್ಷದ ಅಧ್ಯಕ್ಷನಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಪೂರ್ವನಿಯೋಜಿತ
ಕುಕ್ಕರ್ ಬ್ಲಾಸ್ಟ್ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದಾಗ ‘ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯ್ತು? ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ. ಮತದಾನದ ಕಳವು ಇಡೀ ದೇಶದಲ್ಲಿ ಆಗಿರಲಿಲ್ಲ. ಈಗ ಇದನ್ನು ಮಾಡಿ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ’ ಎಂದರು.

ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಹೊಸ ವಾಕ್ಸಮರಕ್ಕೆ ಕಾರಣವಾಗಿದೆ.

*ಶೀಘ್ರದಲ್ಲಿಯೇ ಅಚ್ಚರಿ ಕಾದಿದೆ…ಮತ್ತೆ ಆಪರೇಷನ್ ಕಮಲ ಸುಳಿವು ಕೊಟ್ಟ ಕಂದಾಯ ಸಚಿವ*

https://pragati.taskdun.com/bjpoparation-kamalar-ashokcongress-10-team/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button