Kannada NewsKarnataka NewsLatest

*ತೆರಿಗೆ ಕಟ್ಟದವರನ್ನು ಮ್ಯಾಪಿಂಗ್ ಮಾಡಲು ಡಿಸಿಎಂ ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯಾರು ತೆರಿಗೆ ಕಟ್ಟುವುದಿಲ್ಲವೋ ಅವರನ್ನು ಮ್ಯಾಪಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಂವಾದ ಕಾರ್ಯಕ್ರಮದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಟೆಕ್ನಾಲಜಿ ಉಪಯೋಗಿಸಿಕೊಂಡು ಹೊಸ ಕಾರ್ಯಕ್ರಮ ನೀಡಬೇಕಿದೆ ಎಂದರು.

ಬೆಂಗಳೂರಿನಲ್ಲಿ ತೆರಿಗೆ ಕಟ್ಟದೇ ಕಳ್ಳಾಟ ನಡೆಸುವವರನ್ನು ಟ್ರೇಸ್ ಮಾಡಬೇಕಿದೆ. ಯಾರು ತೆರಿಗೆ ಕಟ್ಟುವುದಿಲ್ಲವೋ ಅವರನ್ನು ಮ್ಯಾಪಿಂಗ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ ಇರುವುದಿಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಅವರ ಆಸ್ತಿ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಖಾತೆ ಎಂದು ಕರೆಯುವ ಬದಲು ಅದಕ್ಕೆ ಬೇರೆ ಹೆಸರು ಇಟ್ಟು, ಎಲ್ಲ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು ಎಂದರು.

ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಾಣಿಗಳನ್ನು ನೀಡುವ “ಭೂಮಿ” ವ್ಯವಸ್ಥೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಮನೆ ಬಾಗಿಲಲ್ಲೇ ಆಸ್ತಿ ದಾಖಲೆಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು.

ಇನ್ನು ಆಸ್ತಿ ತೆರಿಗೆ ವಿಚಾರವಾಗಿ ಇಂದಿನ ಸಭೆಯಲ್ಲಿ ಚರ್ಚೆಯಾಗಿದ್ದು, ಕಾನೂನು ರೀತಿಯಲ್ಲಿ ತೆರಿಗೆ ಕಟ್ಟುತ್ತಿರುವವರಿಗೆ ತೊಂದರೆಯಾಗುತ್ತಿದ್ದು, ತೆರಿಗೆ ಕಟ್ಟದವರಿಗೆ ರಕ್ಷಣೆ ಸಿಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಲಾಯಿತು.

ನಾವು ಮನೆ ಬಾಗಿಲಲ್ಲೇ ಆಯಾ ಆಸ್ತಿ ದಾಖಲೆಗಳನ್ನು ತಲುಪಿಸಿದರೆ, ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ. ಆಗ ಯಾರೂ ಕೂಡ ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆಸ್ತಿ ತೆರಿಗೆ ವಿಚಾರದಲ್ಲಿ ದೊಡ್ಡವರು, ಸಣ್ಣವರು ಎಂಬ ಬೇಧ ಮಾಡುವುದಿಲ್ಲ. ಈ ವಿಚಾರದಲ್ಲಿ ಯಾರು ತೆರಿಗೆ ಪಾವತಿಸಿಲ್ಲ ಎಂದು ಮ್ಯಾಪಿಂಗ್ ಮಾಡುತ್ತೇವೆ.

ನಾವು ನಮ್ಮ ಸಂಪನ್ಮೂಲ ವೃದ್ಧಿಸಿಕೊಳ್ಳದಿದ್ದರೆ ಬೆಂಗಳೂರು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾವು ಕೈಗೆತ್ತಿಕೊಳ್ಳಲು ಮುಂದಾಗಿರುವ ಬೃಹತ್ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳಬೇಕು. ಹೀಗಾಗಿ ಎಲ್ಲರೂ ತೆರಿಗೆ ಪಾವತಿಸುವಂತೆ ನೋಡಿಕೊಳ್ಳಬೇಕು.

ಇನ್ನು ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಮಕ್ಕಳ ಅಭಿಪ್ರಾಯವನ್ನು ಪಡೆಯಲು ಸಲಹೆ ಬಂದಿದ್ದು, ಮಕ್ಕಳ ಸಲಹೆಯನ್ನು ಸರ್ಕಾರ ಪರಿಗಣಿಸಲಿದೆ. ಈ ವಿಚಾರವಾಗಿ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳ ಜೊತೆ ಸಭೆ ಆಯೋಜಿಸುವಂತೆ ಒಂದು ಸಂಸ್ಥೆಗೆ ಸೂಚನೆ ನೀಡಿದ್ದೇನೆ.

ಎಲ್ಲರ ಅಭಿಪ್ರಾಯ ಪಡೆಯಲು ಸಾಧ್ಯವಾಗದೇ ಇರುವುದರಿಂದ ಡಿಬೇಟ್ ಕಾರ್ಯಕ್ರಮದ ಮೂಲಕ ಬೆಂಗಳೂರಿನ ವಿಚಾರವಾಗಿ ಮಕ್ಕಳು ಯಾವ ರೀತಿ ಕನಸು ಕಾಣುತ್ತಿದ್ದಾರೆ ಎಂದು ಅವರ ಅಭಿಪ್ರಾಯ ತಿಳಿಯಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಈಗಾಗಲೇ ಕಾನೂನು ಇದ್ದು, ಫುಟ್ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಪಾದಾಚಾರಿಗಳಿಗೂ ಅನುಕೂಲ ಆಗುವಂತೆ ನೀತಿ ರೂಪಿಸಲಾಗುವುದು.

ಇನ್ನು ತ್ಯಾಜ್ಯ ವಿಲೇವಾರಿ ವಿಚಾರ ಕೂಡ ಹಿಂದಿನ ಸಭೆಯಲ್ಲಿ ಚರ್ಚೆಯಾಗಿದ್ದು ಎಲ್ಲಿಂದರಲ್ಲಿ ರಸ್ತೆಗಳ ಪಕ್ಕದಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ಈ ವಿಚಾರವಾಗಿ ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದೇನೆ.

ರಾಜ್ಯದಲ್ಲಿ ವಾಹನಗಳ ಮಾಲೀಕರ ಸಂಘದ ಜೊತೆ ಮಾತನಾಡಿದ್ದು ಎಲ್ಲೆಂದರಲ್ಲಿ ಜನ ತ್ಯಾಜ್ಯ ವಿಲೇವಾರಿ ಮಾಡದಂತೆ ಸೂಚನೆ ನೀಡಿದ್ದೇನೆ. ಯಾವ ವಾಹನಗಳು ಎಲ್ಲಿ ತ್ಯಾಜ್ಯ ಸಂಖ್ಯೆ ಅವುಗಳನ್ನು ಎಲ್ಲಿ ವಿಲೇವಾರಿ ಮಾಡಲಾಗಿದೆ ಎಂಬ ದಾಖಲೆ ಸಲ್ಲಿಸುವ ಬಗ್ಗೆಯೂ ಸೂಚನೆ ನೀಡಿದ್ದೇನೆ.

ಎಲ್ಲೆಲ್ಲಿ ಹೆಚ್ಚಾಗಿ ಘನ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂಬ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಯಾವ ವಾಹನಗಳು ತ್ಯಾಜ್ಯ ವಿಲೇವಾರಿ ಮಾಡಿದೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಬೆಂಗಳೂರಿನ ಸ್ವಚ್ಛತೆ ಕಾಪಾಡುವ ವಿಚಾರವಾಗಿ ಈ ತಿಂಗಳಲ್ಲಿ ಎರಡು ಮೂರು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಈಗ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ.

ಇನ್ನು ಬೆಂಗಳೂರಿನಲ್ಲಿ ಜಾಹೀರಾತು ವಿಚಾರವಾಗಿ ನೂತನ ನೀತಿಯನ್ನು ರಚಿಸಲಾಗುವುದು. ಆ ಮೂಲಕ ಹೆಚ್ಚಿನ ಆದಾಯ ಬರುವಂತೆ ಮಾಡಲಾಗುವುದು. ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಸುಮಾರು 6 ರಿಂದ 7 ವಿಭಾಗಗಳಲ್ಲಿ ಸಾರ್ವಜನಿಕರಿಂದ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ.

ಈ ಸಲಹೆಗಳ ಪರಿಶೀಲನೆ ಹಾಗೂ ವರ್ಗೀಕರಣಕ್ಕೆ ಕೆಲವು ಸಂಘ ಸಂಸ್ಥೆಗಳ ಜೊತೆ ಚರ್ಚೆ ಮಾಡಲಾಗಿದೆ. ಇಂದಿನ ಸಭೆಯಲ್ಲಿ ಸರ್ಕಾರ ನಾಗರಿಕರ ಸಮಸ್ಯೆಗಳನ್ನು ಆಗಾಗ ಆಲಿಸುತ್ತಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಲ್ಲಿ ಗ್ರಾಮ ಸಭೆಗಳ ಮಾದರಿಯಲ್ಲಿ ವಾರ್ಡ್ ಮಟ್ಟದಲ್ಲಿ ವಾರ್ಡ್ ಸಭೆಗಳನ್ನು ಮಾಡಬೇಕು. ಆ ಮೂಲಕ ಸ್ಥಳೀಯ ನಾಗರೀಕರ ಅಭಿಪ್ರಾಯ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ರಸ್ತೆ ಗುಂಡಿ ವಿಚಾರವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ಮಾಡಲಾಗುವುದು. ಈ ವಿಚಾರವಾಗಿ ಗೃಹಮಂತ್ರಿಗಳ ಜೊತೆ ಮಾತನಾಡಿದ್ದು, ಕಲಾಪ ಮುಗಿದ ಬಳಿಕ ಸಭೆ ಮಾಡುತ್ತೇನೆ ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button