ಪ್ರಗತಿವಾಹಿನಿ ಸುದ್ದಿ; ನಂಜನಗೂಡು: ನಾನು ನಂಜನಗೂಡಿನಲ್ಲಿ ದೇವರ ಸನ್ನಿಧಿ ಮುಂದೆ ನಿಂತು ಮುಖ್ಯಮಂತ್ರಿಗಳಿಗೆ ಹಾಗೂ ಬಿಜೆಪಿ ಮಂತ್ರಿಗಳಿಗೆ ಒಂದು ಸವಾಲು ಹಾಕಲು ಬಯಸುತ್ತೇನೆ. ನಾನು ನನ್ನ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಹೋಗುತ್ತೇನೆ, ನಂತರ ನಾನು ಮತದಾನದ ದಿನ ಮಾತ್ರ ಕ್ಷೇತ್ರಕ್ಕೆ ಹೋಗುತ್ತೇನೆ. ಮುಖ್ಯಮಂತ್ರಿಗಳೇ ನಿಮ್ಮ ಬಳಿ ಅಧಿಕಾರ ಇದೆ, ಹಣ ಇದೆ. ನೀವು ಜನರಿಗೆ ಉತ್ತಮ ಕೆಲಸ ಮಾಡಿರುವ ವಿಶ್ವಾಸ ಇದ್ದರೆ ನೀವು ನಿಮ್ಮ ಪಕ್ಷದ ಮಂತ್ರಿಗಳು ಕೂಡ ಕೇವಲ ನಾಮಪತ್ರ ಸಲ್ಲಿಸಿ ನಂತರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದೇ ಚುನಾವಣೆ ಮಾಡಿ ಗೆದ್ದು ತೋರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ನಂಜನಗೂಡಿನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಇಲ್ಲಿ ಸೇರಿರುವ ಜನಸಾಗರವೇ ಸಾಕ್ಷಿ. ನಾವು ಇಲ್ಲಿ ಯಾತ್ರೆ ಮಾಡುವಾಗ ಪಕ್ಷಬೇಧ ಮರೆತು ನೀವು ನಮಗೆ ಆಶೀರ್ವಾದ ಮಾಡುತ್ತಿದ್ದೀರಿ. ನಿಮಗೆ ಧನ್ಯವಾದಗಳು. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಮುನ್ನಡೆಯುತ್ತಿದೆ.
ಗ್ರಾಮ ಪಂಚಾಯ್ತಿಯಿಂದ ಸಂಸತ್ತಿನವರೆಗೆ ನಾವು ಅಧಿಕಾರ ಹಂಚಿಕೊಂಡು ಕೆಲಸ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ, ಸಂವಿಧಾನ, ರಾಷ್ಟ್ರಧ್ವಜ ಕೊಟ್ಟವರು ಯಾರು ಎಂದು ಬಿಜೆಪಿಯವರನ್ನು ಕೇಳಲು ಬಯಸುತ್ತೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ಅಧಿಕಾರಕ್ಕೆ ಬಂದಾಗ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲಾ ಜನಪರ ಕಾರ್ಯಕ್ರಮ ನೀಡಿದೆ. ಕಾಂಗ್ರೆಸ್ 65 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಬಿಜೆಪಿ ಸುಮಾರು 13-14 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಉಳಿದಂತೆ ಕೆಲ ಕಾಲ ಜನಸಂಘದವರು ಆಡಳಿತ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಜನರ ಜೀವನದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದೆ. ನೆಹರೂ ಅವರ ಕಾಲದಿಂದ ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವರ ಕಾಲದವರೆಗೂ ಎಲ್ಲ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸಾಧನೆ ಹೆಜ್ಜೆ ಗುರುತು ಬಿಟ್ಟಿದೆ ಎಂದರು.
ಆದರೆ ಬಿಜೆಪಿ ಸರ್ಕಾರ ಎಂದಾದರೂ ಜನರ ಬದುಕಿನಲ್ಲಿ ಬದಲಾವಣೆ ತರುವ ಕಾರ್ಯಕ್ರಮ ನೀಡಿದೆಯಾ? ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿತ್ತು. 1 ಲಕ್ಷದ ವರೆಗಿನ ಸಾಲವ ಮನ್ನಾ ಮಾಡುತ್ತೇವೆ ಎಂದರು. ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದರು. ಅಚ್ಛೇದಿನ ಕೊಡುತ್ತೇವೆ ಎಂದರು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಯಾರಿಗಾದರೂ ಈ ಭರವಸೆ ಈಡೇರಿದೆಯೇ? ನಮ್ಮ ಕಾಂಗ್ರೆಸ್ ಸರ್ಕಾರ ಉಳುವವನಿಗೆ ಭೂಮಿ, ಆಹಾರ ಭದ್ರತೆ, ಬಿಸಿಯೂಟ, ಸ್ತ್ರೀ ಶಕ್ತಿ, ನಿವೇಶನ, ಪಿಂಚಣಿ, ಉದ್ಯೋಗ ಖಾತ್ರಿ, ಶಿಕ್ಷಣ ಹಕ್ಕು ನೀಡಿದೆ. ಬಂಗಾರಪ್ಪ ಅವರ ಕಾಲದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆಮೂಲಕ ಅನ್ನದಾತನ ರಕ್ಷಣೆ ಮಾಡುತ್ತಾ ಬಂದಿರುವುದು ಕಾಂಗ್ರೆಸ್ ಸರ್ಕಾರ. ಬಿಜೆಪಿ ಅವಧಿಯಲ್ಲಿ ರಸಗೊಬ್ಬರ, ಪಶು ಮೇವುಗಳ ಬೆಲೆ ಹೆಚ್ಚಾಗುತ್ತಿವೆ.
ಕೋವಿಡ್ ಸಮಯದಲ್ಲಿ ಈ ಸರ್ಕಾರ ನಿಮಗೆ ನೆರವು ನೀಡಿತಾ? ಪ್ರಧಾನಿಗಳು ದೀಪ ಹಚ್ಚಿ, ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆಯಿರಿ, ಮಹಭಾರತ 18 ದಿನದಲ್ಲಿ ಮುಗಿಯಿತು, 21 ದಿನದಲ್ಲಿ ಕೋವಿಡ್ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದ್ದರು. 2 ವರ್ಷ ನರಳಿದರೂ ಜನರನ್ನು ರಕ್ಷಿಸಲಿಲ್ಲ. ರೈತರಿಗೆ ಮಾರುಕಟ್ಟೆ ನೀಡಲಿಲ್ಲ, ಕಾರ್ಮಿಕರ ಬದುಕು ಬೀದಿಗೆ ಬಂದಿತು. ಆದರೂ ಬಿಜೆಪಿ ಯಾರಿಗೂ ನೆರವು ನೀಡಲಿಲ್ಲ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಜನರಪರವಾಗಿ ಕೆಲಸ ಮಾಡಿ ನಿಮ್ಮ ಧ್ವನಿಯಾಯಿತು. ನಿರ್ಮಲಾ ಸೀತರಾಮನ್ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರು. ಅದರಲ್ಲಿ ನಿಮಗೆ ಯಾರಿಗಾದರೂ ನೆರವಾಯಿತಾ? ಈ ಪ್ರಶ್ನೆಗಳನ್ನು ಬಿಜೆಪಿ ನಾಯಕರಿಗೆ ಕೇಳಬೇಕು ಎಂದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಆರೋಗ್ಯ ಸಚಿವ ಕೇವಲ 3 ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದ. ನಾವು ನಾಯಕರೆಲ್ಲ ಹೋಗಿ ಪರಿಶೀಲನೆ ಮಾಡಿದೆವು. ಜಿಲ್ಲಾ ಮಂತ್ರಿ ಸುರೇಶ್ ಕುಮಾರ್, ಆರೋಗ್ಯ ಮಂತ್ರಿ ಸುಧಾಕರ್ ಒಂದು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಅಧಿಕಾರ ಇದ್ದಾಗ ನೆರವು ನೀಡದವರು ಏನು ಮಾಡಲು ಸಾಧ್ಯ? ಕಾಂಗ್ರೆಸ್ ಪಕ್ಷದಿಂದ ಈ ಎಲ್ಲ ಕುಟುಂಬಗಳಿಗೆ ತಲಾ 1 ಲಕ್ಷ ನೆರವು ನೀಡಿದೆವು. ಕೋವಿಡ್ ಬಂದಾಗ ನಾವು ಮನೆಯಲ್ಲಿ ಕೂರದೇ ಜೀವ ಹಾಗೂ ಜೀವನ ಉಳಿಸುವ ಕೆಲಸ ಮಾಡಿದ್ದೇವೆ. ಈ 36 ಕುಟುಂಬದ ಒರ್ವ ಸದಸ್ಯರಿಗೆ ಚಾಮರಾಜನಗರದ ಆಸ್ಪತ್ರೆಯಲ್ಲಿ ಕೆಲಸ ನೀಡುತ್ತೇವೆ ಎಂದು ಶ್ರೀಕಂಠೇಶ್ವರ ಸನ್ನಿಧಿ ಮುಂದೆ ಮಾತು ನೀಡುತ್ತಿದ್ದೇವೆ. ಆಕ್ಸಿಜನ್ ಕೊರತೆಗೆ ಕಾರಣರಾದ ಯಾವುದಾದರೂ ಅಧಿಕಾರಿಗೆ ಶಿಕ್ಷೆ ನೀಡಿದರಾ? ಇಲ್ಲ.
ಬಿಜೆಪಿ ಸರ್ಕಾರ ಜ.16ರಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಗೃಹಿಣಿಶಕ್ತಿ ಯೋಜನೆ ನೀಡುವುದಾಗಿ ಪ್ರಕಟಿಸಿದರು. ಆದರೆ ಬಜೆಟ್ ಪುಸ್ತಕದಲ್ಲಿ ಈ ಯೋಜನೆಯೇ ಇಲ್ಲ. ಅಲ್ಲಮಪ್ರಭುಗಳು ಹೇಳಿರುವ ಮಾತಿನಂತೆ ಕೊಟ್ಟ ಕುದುರೆ ಏರಲಾಗದೇ ಮತ್ತೊಂದು ಕುದುರೆ ಏರಲು ಬಯಸುವವನು ವೀರನು ಅಲ್ಲ, ಶೂರನು ಅಲ್ಲ.
ಸಿದ್ದರಾಮಯ್ಯ ಅವರು ಜನ ಶಾಶ್ವತವಾಗಿ ನೆನಪಿಡುವಂತಹ ಕಾರ್ಯಕ್ರಮ ನೀಡಿದ್ದಾರೆ. ಮಹದೇವಪ್ಪ ಅವರು, ಧೃವನಾರಾಯಣ ಅವರು ಉತ್ತಮ ಕೆಲಸ ಮಾಡಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯನ್ನು ಆಸ್ಕರ್ ಫರ್ನಾಂಡಿಸ್ ಅವರು ಯುಪಿಎ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದಾಗ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರು ಈ ರಸ್ತೆ ಮಂಜೂರು ಮಾಡಿಸಿದ್ದರು. ಇಂತಹ ನಾಯಕರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ರಾಜ್ಯದ ಆಸ್ತಿ.
ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದಾರೆ. ಬದನವಾಳು ಗ್ರಾಮಕ್ಕೆ ಬಂದು ಸವರ್ಣಿಯರಿಗೂ, ದಲಿತರ ನಡುವೆ ಇದ್ದ ವೈಷಮ್ಯ ತೊಡೆದು ಹಾಕಿ ಎರಡೂ ಕೇರಿಗಳ ಸಂಪರ್ಕ ರಸ್ತೆ ಮರು ನಿರ್ಮಾಣ ಮಾಡಿ ಸಮಾಜ ಬೆಸೆಯುವ ಕೆಲಸ ಮಾಡಿದರು. ನಾವು ಮೊಳಕಾಲ್ಮೂರು ಬಳಿ ಯಾತ್ರೆ ಮಾಡುವಾಗ ಹಿರಿಯ ಮಹಿಳೆ ಬಂದು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಸೌತೇಕಾಯಿ ಬೆಳೆದಿದ್ದೇನೆ ತಗೊಳ್ಳಿ ಎಂದು ಕೊಟ್ಟರು. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಉಳುವವನಿಗೆ ಭೂಮಿ, ಬಗರ್ ಹುಕ್ಕುಂ ಸಾಗುವಳಿ, ಅರಣ್ಯ ಕಾಯ್ದೆ ತಿದ್ದುಪಡಿ ತಂದು ಜಮೀನು ನೀಡಿದ್ದೇವೆ. ಬಿಜೆಪಿಯವರು ಯಾಕೆ ಇಂತಹ ಒಂದು ಕಾರ್ಯಕ್ರಮ ನೀಡಲಿಲ್ಲ. ಯಡಿಯೂರಪ್ಪ ಅವರು 600 ಭರವೆಸೆ ಕೊಟ್ಟು ಅಧಿಕಾರಕ್ಕೆ ಬಂದರು. ಆದರೆ ಅವರ ಕಣ್ಣಲ್ಲಿ ನೀರು ಹಾಕಿಸಿ ಯಾಕೆ ಅಧಿಕಾರದಿಂದ ಇಳಿಸಿದರು? ಅವರ ಆಡಳಿತದ ಬಗ್ಗೆ ತೀರ್ಮಾನ ಮಾಡಲು ನಿಮಗೆ ಬಿಡುತ್ತೇನೆ. ನಾವು ಎಲ್ಲೇ ಯಾತ್ರೆ ಮಾಡಿದರೂ ಜನ ಸಾಗರದಂತೆ ಸೇರುತ್ತಿದ್ದಾರೆ. ನೀವು ಬೇರೆ ಪಕ್ಷದ ಜನರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಬೇಕು. ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಅವರಿಗೆ ಹೇಳಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ಬಗ್ಗೆ ಹೇಳಬೇಕು.
ಇದೊಂದು ಭ್ರಷ್ಟಾಚಾರದ ಸರ್ಕಾರ. ಇದು 40% ಸರ್ಕಾರ ಎಂದು ಕಳಂಕ ಬಂದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತ ಲಂಚ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡ. ಆ ಮೂಲಕ ಒಬ್ಬ ಸಚಿವ ಲಂಚಕ್ಕೆ ಮತ್ತೊಬ್ಬ ಮಂಚಕ್ಕೆ ರಾಜೀನಾಮೆ ಕೊಡಬೇಕಾಯಿತು. ವಿಧಾನಸೌಧದ ಗೋಡೆಗಳು ಕಾಸು ಕಾಸು ಎನ್ನುತ್ತಿವೆ. ನಿಮಗೆ ಅಚ್ಛೇ ದಿನ ಬಂತಾ? ಇಲ್ಲವಾದರೆ ಮತ್ತೇಕೆ ಈ ಸರ್ಕಾರ. ಕಿತ್ತು ಹಾಕಿ ಈ ಸರ್ಕಾರವನ್ನು. ಇನ್ನು 50 ದಿನಗಳ ನಂತರ ನಿಮ್ಮ ಸರ್ಕಾರ ಬರಲಿದೆ.
ದೇವರು ವರವನ್ನು ನೀಡುವುದಿಲ್ಲ, ಶಾಪವನ್ನು ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಅವಕಾಶ ಸಿಕ್ಕರೆ ನಿಮ್ಮ ಸೇವೆ ಮಾಡುತ್ತೇವೆ. ತಡರಾತ್ರಿಯಾದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಇದುಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಭನಾಭನ ಪಾದಭಜನೆ ಪರಮಸುಖವಯ್ಯ ಎನ್ನುವಂತೆ ನಿಮ್ಮ ನಂಬಿಕೆ ವಿಶ್ವಾಸ ಪಡೆದಿರುವುದು ನಮ್ಮ ಭಾಗ್ಯ. ನನಗೆ ಎಲ್ಲ ರೀತಿಯ ಹಾರ ಹಾಕಿ ಸ್ವಾಗತಿಸಿದ್ದೀರಿ. ಮುಂದಿನ ಚುನಾವಣೆಯಲ್ಲಿ ಮತದ ಹಾರವನ್ನು ಹಾಕಿ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೇ ಪಕ್ಷದ ಅಭ್ಯರ್ಥಿ ಎಂದು ಮತ ಹಾಕಿ ಆಮೂಲಕ ನಮಗೆ ಶಕ್ತಿ ತುಂಬಬೇಕು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಹೀಗಾಗಿ ಕಾಂಗ್ರೆಸ್ ಪಕ್ಷದ ಹಸ್ತಕ್ಕೆ ಮತ ಹಾಕಿ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
*ನನ್ನನ್ನು ಯಾರು ತಡಿತಾರೆ ನೋಡ್ತೀನಿ; ಸರ್ಕಾರದ ಎಚ್ಚರಿಕೆಗೂ ಕೇರ್ ಮಾಡದ ಡಿ.ರೂಪಾ; ಇನ್ನಷ್ಟು ಫೋಟೋ ರಿಲೀಸ್*
https://pragati.taskdun.com/d-rooparohini-sindhurihome-photospost/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ