ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಕೊಳ್ಳೆಗಾಲ ಶಾಸಕ ಮಹೇಶ್ ಅವರ ಮೇಲೆ ನನಗೆ ಬಹಳ ಗೌರವವಿತ್ತು. ಆದರೆ ಅವರು ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದ ಪಕ್ಷಕ್ಕೆ ಸೇರಿದ ದಿನ ನನಗೆ ಬಹಳ ನೋವಾಯಿತು. ಅವರು ಹುಟ್ಟಿ ಬೆಳೆದು ತಮ್ಮ ಹೋರಾಟದ ಮೂಲಕ ಬಿಎಸ್ ಪಿ ಆಸರೆಯಲ್ಲಿ ಬೆಳೆದು, ಈಗ ಬಿಜೆಪಿ ಸೇರಿ ಕಮಲ ಹಿಡಿದು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ
ಕೊಳ್ಳೆಗಾಲದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಎಲ್ಲೇ ಪ್ರವಾಸ ಮಾಡಿದರೂ ಜನರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಈ ಭಾಗದಲ್ಲಿ ಮಧ್ಯಮ ವರ್ಗದ ಜನ ಹೆಚ್ಚಾಗಿದ್ದೀರಿ. ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ರಾಷ್ಟ್ರಧ್ವಜ, ಅಂಬೇಡ್ಕರ್ ಅವರ ಸಂವಿಧಾನವನ್ನು ಕೊಟ್ಟು ಆಸರೆಯಾಗಿದೆ. ಈ ದೇಶದಲ್ಲಿ ದೇವರ ಪ್ರತಿಮೆಗಳಂತೆ ಅಂಬೇಡ್ಕರ್ ಅವರ ಸಾವಿರಾರು ಪ್ರತಿಮೆಗಳಿವೆ ಎಂದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಾವು ದಿನಬೆಳಗಾದರೆ ಕೈ ನೋಡುತ್ತಾ ದೇವರನ್ನು ಕಾಣುತ್ತೇವೆ. ಈ ಕೈಗೆ ಜಾತಿ ಧರ್ಮದ ವ್ಯತ್ಯಾಸವಿಲ್ಲ. ನಾವು ಹುಟ್ಟುವಾಗ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿರುವುದಿಲ್ಲ. ಎಲ್ಲರ ಬೆವರು, ರಕ್ತ, ಕಣ್ಣೀರಿನ ಗುಣ, ಬಣ್ಣ, ರುಚಿ ಒಂದೇ ಆಗಿರುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುತ್ತದೆ.
ಕೋವಿಡ್ ಸಮಯದಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಇದಕ್ಕೆ ಕಾರಣ ಯಾರು? ಮಹೇಶಣ್ಣಾ ಇದು ನಿಮ್ಮ ಬಿಜೆಪಿ ಸರ್ಕಾರ ಮಾಡಿದ ಕೊಲೆ. ಮೋದಿ ಅವರು ಚಿಕಿತ್ಸೆ ವೆಚ್ಚ ಭರಿಸುತ್ತೇವೆ ಎಂದರು, ಆದರೆ ಅವರು ಕೊಟ್ಟರಾ? ಕೋವಿಡ್ ಲಸಿಕೆಯಲ್ಲಿ ಮೋದಿ ಅವರ ಫೋಟೋ ಹಾಕುತ್ತಾರೆ. ಆದರೆ ಕೋವಿಡ್ ನಿಂದ ಸತ್ತವರ ಮರಣ ಪ್ರಮಾಣದಲ್ಲಿ ಮೋದಿ ಅವರ ಫೋಟೋ ಯಾಕೆ ಹಾಕಿಲ್ಲ?
ಇಲ್ಲಿ ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ಜನರಿದ್ದೀರಿ. ಈ ಜನರಿಗೆ 2 ವರ್ಷ ಆದಾಯವೇ ಇರಲಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿತು. ಇದರಿಂದ ನಿಮಗೆ ಉಪಯೋಗವಾಯಿತಾ? ಬಿಜೆಪಿ ಅವರು ಚುನಾವಣೆಗೂ ಮುನ್ನ ನಿಮ್ಮ ಆದಾಯ ಡಬಲ್ ಮಾಡುತ್ತೇವೆ, ವಿದೇಶದಿಂದ ಕಪ್ಪು ಹಣ ತಂದು 15 ಲಕ್ಷ ನೀಡುತ್ತೇವೆ ಎಂದರು. 15 ಲಕ್ಷ ನಿಮ್ಮ ಖಾತೆಗೆ ಬಂತಾ? ಅಚ್ಛೇ ದಿನ ನೀಡುತ್ತೇವೆ ಎಂದರು, ಅಚ್ಛೇದಿನ ಬಂತಾ? ಯಾರಿಗೂ ಬರಲಿಲ್ಲ. ಬಿಜೆಪಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೋವಿಡ್ ನಿಂದ ಸತ್ತಾಗ ಅವರ ಮೃತದೇಹ ತಂದು ಅವರ ಕುಟುಂಬಕ್ಕೆ ನೀಡಲು ಆಗಲಿಲ್ಲ. ಗೌರವಪೂರ್ಣವಾಗಿ ಅಂತ್ಯಸಂಸ್ಕಾರ ಮಾಡಲಿಲ್ಲ. ಇದು ಮಾನವೀಯತೆ, ಸಂಸ್ಕೃತಿನಾ? ಬಿಜೆಪಿ ಅಧಿಕಾರದಲ್ಲಿದ್ದಾಗ ಜನರಿಗಾಗಿ ಏನು ಮಾಡಿದೆ? ಎಂದು ಪ್ರಶ್ನಿಸಿದರು.
ನಾವು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿ, ಸರ್ಕಾರ ನಡೆಸಲು ಅವರಿಗೆ ಸಂಪೂರ್ಣ ಸಹಕಾರ ನೀಡಿದೆವು. ಆದರೂ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಈ ದೇಶ ಹಾಗೂ ರಾಜ್ಯದಲ್ಲಿ ಬದಲಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಕೋಮು ಸಂಘರ್ಷದ ವಿರುದ್ದ ಹೋರಾಟ ಮಾಡಿದರು. ಈ ಹೋರಾಟ ನಿಮಗಾಗಿ ಮಾಡಿದರು. ಗಾಂಧಿ ಜಯಂತಿ ದಿನ ಬದನವಾಳು ಗ್ರಾಮಕ್ಕೆ ಹೋಗಿ, ಸವರ್ಣಿಯರು ಹಾಗೂ ದಲಿತರ ನಡುವೆ ಇದ್ದ ಮನಸ್ತಾಪ ಅಂತ್ಯ ಮಾಡಿ, ಎರಡು ಕೇರಿ ನಡುವೆ ದಾರಿ ಮರುಸ್ಥಾಪಿಸಿ ಭಾರತ ಜೋಡೋ ರಸ್ತೆ ಮಾಡಿದರು. ಪಕ್ಷದ ನಾಯಕರು, ಎರಡು ವರ್ಗದ ಜನರ ಜತೆ ಒಟ್ಟಿಗೆ ಕೂತು ಊಟ ಮಾಡಿಸಿ ಎರಡು ಸಮುದಾಯಗಳ ಮನಸ್ಸು ಒಂದುಗೂಡಿಸಿದರು.
ಬಿಜೆಪಿ ರಾಜ್ಯದಲ್ಲಿ ಮೂರುವರೆ ವರ್ಷ ಅಧಿಕಾರ ಮಾಡಿತು. ಈ ಅವಧಿಯಲ್ಲಿ ಏನಾದರೂ ಸಾಧನೆ ಮಾಡಿದೆಯಾ? ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ, ಉಳುವವನಿಗೆ ಭೂಮಿ, ಆಣೆಕಟ್ಟುಗಳು, ವಿದ್ಯಾಸಂಸ್ಥೆ, ಬಡವರಿಗೆ ಜಮೀನು, ಮನೆ, ರೈತರಿಗೆ ಉಚಿತ ವಿದ್ಯುತ್, ಬಿಸಿಯೂಟ, ಸ್ತ್ರೀ ಶಕ್ತಿ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಹಾಲಿಗೆ 5 ರೂ. ಪ್ರೋತ್ಸಾಹ ಧನ ಕೊಟ್ಟಿತು. ಇಂತಹ ಯಾವುದಾದರೂ ಒಂದು ಕಾರ್ಯಕ್ರಮವನ್ನು ಬಿಜೆಪಿ ಕೊಟ್ಟಿದೆಯಾ? ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ನಾವು ಪಾಪದ ಪುರಾಣ ಎಂಬ ಕಿರುಹೊತ್ತಿಗೆ ತಂದಿದ್ದೇವೆ ಎಂದು ಗುಡುಗಿದರು.
ಈ ಸರ್ಕಾರದ ಆಯಸ್ಸು ಕೆಲವೇ ದಿನಗಳು ಮಾತ್ರ. ನಂತರ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿನಲ್ಲಿ ಬೆಳಕು ತರಬೇಕು ಎಂಬ ಉದ್ದೇಶದಿಂದ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಇದರಿಂದ ಪ್ರತಿ ತಿಂಗಳು 1500 ರೂ. ಉಳಿತಾಯವಾಗುತ್ತದೆ. ಇನ್ನು ಮಹಿಳೆಯರಿಗೆ ಬೆಲೆ ಏರಿಕೆ ಸಮಸ್ಯೆಯಿಂದ ಪರಿಹಾರ ನೀಡಲು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎರಡು ಯೋಜನೆ ಮೂಲಕ ವರ್ಷಕ್ಕೆ 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷದಷ್ಟು ಆರ್ಥಿಕ ಶಕ್ತಿ ತುಂಬಲಾಗುವುದು. ಈ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸಹಿ ಹಾಕಿಸಿ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ನೀವು ಮನೆ ಮನೆಗೆ ಈ ಕಾರ್ಡ್ ತಲುಪಿಸಬೇಕು. ಅತಿ ಹೆಚ್ಚು ಮನೆಗೆ ಈ ಕಾರ್ಡ್ ತಲುಪಿಸುವವರಿಗೆ ವಿಶೇಷ ಬಹುಮಾನ ನೀಡಲಾಗುವುದು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ 2 ಲಕ್ಷ ಕೋಟಿ ಅನುದಾನ ನೀಡಲಾಗುವುದು. ನಾವು ನಿಮ್ಮ ನಾಯಕರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟು, ಉಳಿದವರನ್ನು ಕೈಬಿಡಲಾಗುವುದು ಎಂಬ ಆತಂಕ ಬೇಡ. ಈ ನಾಯಕರೆಲ್ಲರೂ ಪಕ್ಷದ ಆಧಾರಸ್ತಂಭ. ಇವರು ನಮ್ಮ ಪಕ್ಷದ ಮುತ್ತುರತ್ನಗಳು. ನಾವು ಎಲ್ಲರಿಗೂ ಅಧಿಕಾರ ನೀಡುತ್ತೇವೆ. ನೀವು ತಾಳ್ಮೆಯಿಂದ ಪಕ್ಷ ಸಂಘಟನೆ ಮಾಡಿ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.
*ಧಮ್ ಇದ್ರೆ ಹೊಡೆದು ಹಾಕಿ ನೋಡೋಣ; ಸದನದಲ್ಲಿ ಸಿದ್ದರಾಮಯ್ಯ ಸವಾಲು*
https://pragati.taskdun.com/siddaramaiahvidhanasabheashwaththanarayana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ